ADVERTISEMENT

ಸತ್ತಾಗ ಸಿಗುವುದು ಲಿಂಗಾಯತ ಸಂಸ್ಕಾರ; ಬಿಜೆಪಿಯದ್ದಲ್ಲ

ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕಿಡಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಸತ್ತಾಗ ಸಿಗುವುದು ಲಿಂಗಾಯತ ಸಂಸ್ಕಾರ; ಬಿಜೆಪಿಯದ್ದಲ್ಲ
ಸತ್ತಾಗ ಸಿಗುವುದು ಲಿಂಗಾಯತ ಸಂಸ್ಕಾರ; ಬಿಜೆಪಿಯದ್ದಲ್ಲ   

ಬೆಳಗಾವಿ: ‘ಬಿಜೆಪಿಯಲ್ಲಿರುವ ನಮ್ಮ ಸಮಾಜದ ಜನಪ್ರತಿನಿಧಿಗಳು ಸತ್ತಾಗ ಲಿಂಗಾಯತ ಸಂಸ್ಕಾರ ಕೊಡುತ್ತಾರೆಯೇ ಹೊರತು ಬಿಜೆಪಿಯದ್ದಲ್ಲ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಕಿಡಿಕಾರಿದರು.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾವೇಶದಿಂದ ದೂರ ಉಳಿದ ಬಿಜೆಪಿ ಮುಖಂಡರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘ನಿಮಗೆ ಪಕ್ಷ ಮುಖ್ಯವೋ, ಧರ್ಮ ಮುಖ್ಯವೋ ಉತ್ತರ ಕೊಡಿ’ ಎಂದು ಒತ್ತಾಯಿಸಿದರು.
‘ಸಮಾಜದವರ ಸಂಕಷ್ಟಕ್ಕೆ ಬಾರದಿರುವ ನೀವು, ಚುನಾವಣೆಗಳಲ್ಲಿ ಲಿಂಗಾಯತರ ಕೋಟಾದಲ್ಲಿ ಏಕೆ ಟಿಕೆಟ್ ತೆಗೆದುಕೊಳ್ಳುತ್ತೀರಿ’ ಎಂದೂ ಪ್ರಶ್ನಿಸಿದರು.

‘ಎಚ್ಚರಿಕೆಯಿಂದ ಭಾಗಿಯಾಗಿ’

ADVERTISEMENT

‘ಧರ್ಮಕ್ಕಾಗಿ ನಡೆಯುತ್ತಿರುವ ಈ ಹೋರಾಟದ ಬಗ್ಗೆ ಬಿಜೆಪಿ ಮುಖಂಡರ ಮೌನ ಸರಿಯಲ್ಲ. ಅವರು ಇದರಿಂದ ದೂರ ಉಳಿಯದೇ ಎಚ್ಚರಿಕೆಯಿಂದ ಭಾಗಿಯಾಗಬೇಕು ಎಂದು ಸೂಚಿಸುತ್ತೇನೆ’ ಎಂದ ಮಾತೆ ಮಹಾದೇವಿ, ಧರ್ಮ ಬೆಂಬಲಿಸದ ಸ್ವಾಮೀಜಿಗಳು ಪೀಠತ್ಯಾಗ ಮಾಡಬೇಕು ಎಂದರು.

‘ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಕಳವಳ ವ್ಯಕ್ತಪಡಿಸಿದಂತೆ ಏನೂ ಆಗದು. ಲಿಂಗಾಯತ ಸ್ವತಂತ್ರ ಧರ್ಮವಾದರೆ ಹಿಂದೂ ಧರ್ಮಕ್ಕೆ ತೊಡಕಿಲ್ಲ. ನಾವು ಹಿಂದೂ ಧರ್ಮ, ಸಂಸ್ಕೃತಿಯ ವಿರೋಧಿಗಳಲ್ಲ. ಇದನ್ನು ಭಾಗವತ್‌ ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಮಾಡುವ ಶಿಫಾರಸಿಗೆ ಮಾನ್ಯತೆ ಕೊಡಿಸುವ ಕೆಲಸವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ಎಲ್ಲ ಸಂಸದರೂ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತರಬೇಕು, ಧರಣಿ ನಡೆಸಬೇಕು’ ಎಂದು ಆಗ್ರಹಿಸಿದರು.

‘ನಪುಂಸಕ....’:
‘ವೀರಶೈವ ಅಥವಾ ಲಿಂಗಾಯತ ಎನ್ನಬೇಕು. ವೀರಶೈವ– ಲಿಂಗಾಯತ ಎನ್ನುವುದು ನಪುಂಸಕ ಎಂದಂತಾಗುತ್ತದೆ. ಇಷ್ಟು ವರ್ಷ ನಮ್ಮಿಂದಲೇ ಉಪಚಾರ ಪಡೆದು, ದಬ್ಬಾಳಿಕೆ ಮಾಡಿರುವ ವೀರಶೈವ ಎಂಬ ಪದವನ್ನು ನಾವು ದೂರ ಇಡಲೇಬೇಕಾಗಿದೆ’ ಎಂದು ಪ್ರತಿಪಾದಿಸಿದರು.
ಪ್ರತಿ ಗ್ರಾಮದಲ್ಲೂ ಬಸವ ಮಂಟಪ, ಪ್ರಾರ್ಥನಾ ಮಂದಿರ ಸ್ಥಾಪಿಸಬೇಕು. ಮಕ್ಕಳು, ಯುವ ಜನರಿಗೆ ಸಂಸ್ಕಾರ ನೀಡುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.