ADVERTISEMENT

ಸರ್ಕಾರದ ವಿರುದ್ಧ ಪ್ರಸನ್ನ ಆಕ್ರೋಶ

ಗುಲ್ಬರ್ಗ ವಿಭಾಗಕ್ಕೆ ಸಮವಸ್ತ್ರ ಪೂರೈಕೆ ಹೊಣೆ ಕೆಎಸ್‌ಟಿಐಡಿಸಿಗೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:43 IST
Last Updated 29 ಅಕ್ಟೋಬರ್ 2014, 19:43 IST

ಗದಗ: ‘ವಿದ್ಯಾ ವಿಕಾಸ’ ಯೋಜನೆ­ಯಡಿ ಗುಲ್ಬರ್ಗ ವಿಭಾಗದ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಕೆ ಜವಾಬ್ದಾರಿಯನ್ನು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ (ಕೆಎಚ್‌ಡಿಸಿ) ಹಿಂದಕ್ಕೆ ಪಡೆಯಲು ಮುಂದಾಗಿರುವ ಸರ್ಕಾರದ ಕ್ರಮದ ವಿರುದ್ಧ ರಂಗಕರ್ಮಿ ಪ್ರಸನ್ನ ಬುಧವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

2015–16ನೇ ಸಾಲಿಗೆ ಗುಲ್ಬರ್ಗ ವಿಭಾಗಕ್ಕೆ ಬೇಕಾದ ಸಮವಸ್ತ್ರದ ಬಟ್ಟೆ ಸರಬರಾಜು ಮಾಡಲು ಕೆಎಚ್‌ಡಿಸಿ ಬದಲಿಗೆ ವಿದ್ಯುತ್‌ ಮಗ್ಗಗಳನ್ನು ಹೊಂದಿ­ರುವ ಕೆಎಸ್‌ಟಿಐಡಿಸಿ (ಕರ್ನಾಟಕ ರಾಜ್ಯ ಜವಳಿ ಮೂಲ­ಸೌಕರ್ಯ ಅಭಿವೃದ್ಧಿ ನಿಗಮ) ಸಂಸ್ಥೆಗೆ ಕಾರ್ಯಾದೇಶ ನೀಡು­ವಂತೆ ಜುಲೈ 18ರಂದು ಜವಳಿ ಸಚಿವ ಬಾಬುರಾವ್‌ ಚಿಂಚನಸೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಆಗಸ್ಟ್‌ 20ರ ಸಂಚಿಕೆ­­­ಯಲ್ಲಿ ವರದಿ ಪ್ರಕಟವಾಗಿತ್ತು.

‘ಕೈಮಗ್ಗ ಕ್ಷೇತ್ರ ಉಳಿಸ­ಬೇಕಾದ ಸಚಿವರು ಪತ್ರ ಬರೆದಿ­ರು­ವುದನ್ನು ನಿರಾ­ಕರಿಸಿದ್ದರು.  ನಂತರ ಎರಡು ವಿಭಾಗ­ಗಳಿಗೆ ಮಾತ್ರ ನೀಡಲಾಗುತ್ತಿದೆ ಎಂದು ಸಮರ್ಥಿಸಿ ಕೊಂಡಿದ್ದರು. ಆದರೆ ಸಚಿವರ ಪತ್ರಕ್ಕೆ ಸ್ಪಂದಿಸಿದ ಮುಖ್ಯ­ಮಂತ್ರಿ, ಕೆಎಸ್‌ಟಿಐ­ಡಿಸಿಗೆ ಯೋಜನೆ ನೀಡಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿ­ದ್ದಾರೆ’ ಎಂದು ರೋಣ ತಾಲ್ಲೂಕಿನ ಗಜೇಂದ್ರ­ಗಡದಲ್ಲಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಚಿವರು ಪತ್ರ ಬರೆದಿರುವುದು ನಾಚಿಕೆಗೇಡು’ ಎಂದ ಅವರು, ಈ ಪತ್ರ ಬರೆದುದಕ್ಕೆ ಸಚಿವರಿಗೆ ಮುಖ್ಯಮಂತ್ರಿ­ಯವರು ಬುದ್ಧಿ ಹೇಳಬಹುದಿತ್ತು ಅಥವಾ ಸಂಪುಟದಿಂದ ಅವರನ್ನು ಕೈ ಬಿಡಬಹುದಿತ್ತು’ ಎಂದರು. ‘ನೇಕಾರರ ಸಮಸ್ಯೆಗಳ ಬಗ್ಗೆ ಗೊತ್ತಿ­ದ್ದರೂ ಮುಖ್ಯಮಂತ್ರಿಯವರು ಏಕೆ ಮೌನ ವಹಿಸಿದ್ದಾರೋ ಗೊತ್ತಿಲ್ಲ. ‘ವಿದ್ಯಾ ವಿಕಾಸ’ ಯೋಜನೆಯನ್ನು ವಿದ್ಯುತ್‌ ಮಗ್ಗಗಳಿಗೆ ನೀಡುವ ಮೂಲಕ ಸರ್ಕಾರ ಕೈಮಗ್ಗ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಅವರು ಟೀಕಿಸಿದರು.

‘ತಮಿಳುನಾಡು ಮಾದರಿಯಂತೆ ರಾಜ್ಯ­ದಲ್ಲೂ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತರಬೇಕು. ಅಲ್ಲಿನ ನೇಕಾರರಿಗೆ ಸರಿಯಾದ ಕೂಲಿ ದೊರೆಯುತ್ತಿದ್ದು ಉತ್ತಮ ಬದುಕು ಸಾಗಿಸುತ್ತಿದ್ದಾರೆ. ಅದೇ ರೀತಿ ಇಲ್ಲೂ ಜಾರಿಯಾಗಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.