ADVERTISEMENT

ಸಾಮಾಜಿಕ ಜಾಲತಾಣ ಬಳಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 19:30 IST
Last Updated 13 ನವೆಂಬರ್ 2017, 19:30 IST
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ   

ಮೈಸೂರು: ಸಾಮಾಜಿಕ ಜಾಲತಾಣಗಳ ಮೂಲಕ ಸಾಹಿತ್ಯ ಸಮ್ಮೇಳನದ ಪ್ರಚಾರ ನಡೆಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿದೆ.

ಸಮ್ಮೇಳನಕ್ಕೆ ಸ್ವಾಗತ ಕೋರುವ ವಿಡಿಯೊ ಕ್ಲಿಪ್ಪಿಂಗ್‌ ‘ಪ್ರೊಮೊ’ ಎರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ ಸ್ವಾಗತಗೀತೆ ಎಂಬ ಶೀರ್ಷಿಕೆ ಕೊಡಲಾಗಿದೆ. ‘ಸ್ವಾಗತ, ಸುಸ್ವಾಗತ. ಸಾಹಿತ್ಯ ಸಂಭ್ರಮಕ್ಕೆ ಸುಸ್ವಾಗತ, 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತ’ ಎಂಬ ಪಲ್ಲವಿ ಇರುವ ಈ ಗೀತೆಯನ್ನು ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ರಚಿಸಿದ್ದಾರೆ.

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಸ್ಮರಿಸುತ, ಕುವೆಂಪು ಅವರ ನೆನೆಯುತ, ನುಡಿದೀವಿಗೆ ಬೆಳಗಿಸಿದ ಕವಿಪುಂಗವರಿಗೆ ನಮಿಸುತ, ಒಳನಾಡು, ಗಡಿನಾಡು ಎಲ್ಲ ಕಡೆ ಮೊಳಗಲಿ ಕನ್ನಡ ಕಹಳೆ’ ಎಂಬ ಹಾಡು ಮುಂದುವರಿಯಲಿದೆ. ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ನಾಗೇಶ್ ಕಂದೇಗಾಲ ಮಾಡಿದ್ದಾರೆ.

ADVERTISEMENT

ಈ ವಿಡಿಯೊ ಕ್ಲಿಪಿಂಗ್‌ನಲ್ಲಿ ಕೆ.ಆರ್‌.ವೃತ್ತ, ಅರಮನೆ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಚಾಮುಂಡಿಬೆಟ್ಟ, ಕೆಆರ್‌ಎಸ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ಕುವೆಂಪು ಮೊದಲಾದವರ ಚಿತ್ರಗಳಿರುತ್ತವೆ. ಜತೆಗೆ, ಹಾಡಿನೊಂದಿಗೆ ಸಾಹಿತಿಗಳು, ಸಂಗೀತಗಾರರು, ರಂಗಭೂಮಿ ಕಲಾವಿದರು, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಹಾಗೂ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇರ್ ಅವರ ಅಭಿಪ್ರಾಯಗಳಿರುತ್ತವೆ. ನಾಲ್ಕೂವರೆ ನಿಮಿಷಗಳ ಅವಧಿಯ ಸ್ವಾಗತಗೀತೆಯು ಯು ಟೂಬ್, ವಾಟ್ಸ್‌ ಆ್ಯಪ್‌, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತದೆ. ಇದನ್ನು ಪ್ರವಾಸೋದ್ಯಮ ಇಲಾಖೆ ನಿರ್ಮಿಸಲಿದ್ದು, ಪ್ರಚಾರದ ಹೊಣೆಯನ್ನೂ ಹೊತ್ತಿದೆ.

ಸಾಕ್ಷ್ಯಚಿತ್ರ ಪ್ರದರ್ಶನ: ಕನ್ನಡದ ಪ್ರಸಿದ್ಧ ಕವಿಗಳ ಅದರಲ್ಲೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರ ಕುರಿತ ಸಾಕ್ಷ್ಯಚಿತ್ರಗಳು ಸಾಹಿತ್ಯ ಸಮ್ಮೇಳನ ನಡೆಯುವ ಮೂರೂ ದಿನಗಳ ಕಾಲ (ನ. 24ರಿಂದ 26) ಪ್ರದರ್ಶನಗೊಳ್ಳಲಿವೆ. ಪ್ರತಿನಿಧಿಗಳು ಹಾಗೂ ಆಹ್ವಾನಿತರು ಊಟ ಮಾಡುವ ಸ್ಥಳವಾದ ಸ್ಕೌಟ್ಸ್‌ ಅಂಡ್‌ ಗೈಡ್‌ ಮೈದಾನದಲ್ಲಿ ಸಂಜೆ 7ರಿಂದ ರಾತ್ರಿ 9ರ ವರೆಗೆ ಪ್ರದರ್ಶನಗೊಳ್ಳಲಿವೆ.

‘ಊಟದ ಜತೆಗೆ, ಸಾಹಿತಿಗಳ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಿ ಎನ್ನುವ ಉದ್ದೇಶವಿದೆ. ಅಲ್ಲದೆ, ದೂರದ ಊರುಗಳಿಂದ ಬಂದ ಪ್ರತಿನಿಧಿಗಳಿಗೆ ಬೇಸರ, ಏಕತಾನತೆ ಹೋಗಲಾಡಿಸಲು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ’ ಎಂದು ಜಿಲ್ಲಾ ಕಸಾಪಅಧ್ಯಕ್ಷ ಡಾ.ವೈ.ಡಿ.ರಾಜಣ್ಣ
ಹೇಳುತ್ತಾರೆ.

ಆಹ್ವಾನಪತ್ರ, ಭಿತ್ತಿಚಿತ್ರ, ಹೋರ್ಡಿಂಗ್‌ ಮೂಲಕ ಸಾಹಿತ್ಯ ಸಮ್ಮೇಳನದ ಪ್ರಚಾರ ಕೈಗೊಂಡಿದ್ದೇವೆ. ಜತೆಗೆ, ಸಾಮಾಜಿಕ ಜಾಲತಾಣಗಳನ್ನೂ ಸಮಪರ್ಕವಾಗಿ ಬಳಸಿಕೊಳ್ಳುತ್ತೇವೆ.

–ವೈ.ಡಿ.ರಾಜಣ್ಣ, ಅಧ್ಯಕ್ಷರು, ಜಿಲ್ಲಾ ಕಸಾಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.