ADVERTISEMENT

ಸಾರಿಗೆ ಸಂಸ್ಥೆ ನೌಕರರ ಮುಷ್ಕರ :ಶೀಘ್ರ ಮಾತುಕತೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2016, 19:30 IST
Last Updated 9 ಜುಲೈ 2016, 19:30 IST

ದಾವಣಗೆರೆ:  ‘ಜುಲೈ 25ರಂದು ಮುಷ್ಕರಕ್ಕೆ ಕರೆ ನೀಡಿರುವ ರಾಜ್ಯ ಸಾರಿಗೆ ಸಂಸ್ಥೆಯ ನೌಕರರ ಸಂಘಟನೆಗಳ ಮುಖಂಡರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಕರೆದು ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಪರಿಹರಿಸಲಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಸಾರಿಗೆ ಸಂಸ್ಥೆಯ ನಿಗಮದ ನೌಕರರ ವೇತನ ಪರಿಷ್ಕರಿಸಬೇಕು. ಹೀಗಾಗಿ ಕಳೆದ ಜನವರಿಯಿಂದ ಪೂರ್ವಾನ್ವಯ ಆಗುವಂತೆ ಶೇ 8ರಷ್ಟು ವೇತನ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಸಾರಿಗೆ ಸಂಸ್ಥೆಯ ಆರೇಳು ಯೂನಿಯನ್‌ಗಳಿವೆ. ಒಂದು ಸಂಘಟನೆ ಶೇ 30ರಷ್ಟು ಹೆಚ್ಚಿಸುವಂತೆ ಕೋರಿದರೆ, ಇನ್ನೊಂದು ಸಂಘಟನೆ ಶೇ 50ರಷ್ಟು ಹೆಚ್ಚಿಸುವಂತೆ ಮನವಿ ಮಾಡಿದೆ. ನಿಗಮದ ನೌಕರರು ನಮ್ಮವರೇ ಆಗಿದ್ದಾರೆ. ಅವರ ಹಿತವನ್ನೂ ಕಾಯುತ್ತೇವೆ. ಇದೇ 19 ಅಥವಾ 20ರಂದು ಮುಖ್ಯಮಂತ್ರಿಗಳ ಜೊತೆಗೆ ಮುಖಂಡರ ಸಭೆ ನಡೆಸಲಾಗುವುದು’ ಎಂದರು.

‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಆತ್ಮಹತ್ಯೆ ಮಾಡಿಕೊಂಡದ್ದು ವೈಯಕ್ತಿಕ ಕಾರಣಕ್ಕೋ ಅಥವಾ ಕಿರುಕುಳ ನೀಡಿದ್ದರಿಂದಲೋ ಎಂಬುದು ತನಿಖೆ ಪೂರ್ಣಗೊಂಡ ಬಳಿಕವೇ ತಿಳಿಯಲಿದೆ. ಈಗಲೇ ಆ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.