ADVERTISEMENT

ಸಿಇಟಿಗೆ ಕೈಗಡಿಯಾರ ಒಯ್ಯುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:54 IST
Last Updated 2 ಮೇ 2016, 19:54 IST
ಸಿಇಟಿ ಪ್ರಶ್ನೆಪತ್ರಿಕೆಗಳು ಹಾಗೂ ಓಎಂಆರ್ ಶೀಟುಗಳನ್ನು ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕಾರಿಗಳ ನಿಗಾದಲ್ಲಿ ಹುಬ್ಬಳ್ಳಿಯ ಮಿನಿವಿಧಾನಸೌಧದಲ್ಲಿ ಇಡುತ್ತಿರುವ ನೋಟ...
ಸಿಇಟಿ ಪ್ರಶ್ನೆಪತ್ರಿಕೆಗಳು ಹಾಗೂ ಓಎಂಆರ್ ಶೀಟುಗಳನ್ನು ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕಾರಿಗಳ ನಿಗಾದಲ್ಲಿ ಹುಬ್ಬಳ್ಳಿಯ ಮಿನಿವಿಧಾನಸೌಧದಲ್ಲಿ ಇಡುತ್ತಿರುವ ನೋಟ...   

ಬೆಂಗಳೂರು: ಮೇ 4ಮತ್ತು 5ರಂದು ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ವಿದ್ಯಾರ್ಥಿಗಳು ಕೈಗಡಿಯಾರ ಕಟ್ಟಿಕೊಂಡು ಹೋಗುವಂತಿಲ್ಲ; ಮೊಬೈಲ್‌ ಫೋನ್‌ ಒಯ್ಯುವಂತಿಲ್ಲ.

ದ್ವಿತೀಯ ಪಿಯುಸಿ ರಸಾಯನ ವಿಜ್ಞಾನ ಪರೀಕ್ಷೆಯಲ್ಲಿ ನಡೆದ ಅಕ್ರಮಗಳಿಂದಾಗಿ ಎರಡು ಬಾರಿ ಮರು ಪರೀಕ್ಷೆ ನಡೆಸಬೇಕಾಯಿತು. ಇಂತಹದ್ದೇ ಪರೀಕ್ಷಾ ಅಕ್ರಮಗಳು ಸಿಇಟಿಯಲ್ಲೂ ಮರುಕಳಿಸಬಾರದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

‘ಇತ್ತೀಚಿನ  ಆಧುನಿಕ ಕೈಗಡಿಯಾರಗಳಲ್ಲಿ ಕ್ಯಾಮೆರಾಗಳು ಇರುತ್ತವೆ. ಇದರಿಂದ ಪರೀಕ್ಷಾ ಅಕ್ರಮಗಳು ನಡೆಯಬಹುದು ಎಂಬುದು ಇದಕ್ಕೆ ಕಾರಣ. ಸಿಇಟಿಗೆ ಕೈಗಡಿಯಾರ ನಿಷೇಧಿಸಿದ್ದು ಇದೇ ಮೊದಲು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಡಳಿತಾಧಿಕಾರಿ ಎಸ್‌.ಎನ್‌. ಗಂಗಾಧರಯ್ಯ ಹೇಳಿದರು.

‘391 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಒಂದು ಕೇಂದ್ರದಲ್ಲಿ ಸರಾಸರಿ 5 ಪರೀಕ್ಷಾ ಕೊಠಡಿಗಳಿರುತ್ತವೆ. ಎಲ್ಲ ಕೊಠಡಿಗೂ ₹200ರಿಂದ ₹250 ಬೆಲೆಯ ಗೋಡೆ ಗಡಿಯಾರ ಖರೀದಿಸಿ ಹಾಕಲು ಸೂಚಿಸಲಾಗಿದೆ’ ಎಂದು ಅವರು ಹೇಳಿದರು. ಪರೀಕ್ಷೆಗೆ ಸಿದ್ಧತೆ: ಈ ಸಲ 1.78 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಸೂಚನೆಗಳು

* ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಯಾವುದಾದರೊಂದು ಗುರುತಿನ ಚೀಟಿ (ಕಾಲೇಜು ಗುರುತು ಪತ್ರ, ಬಸ್‌ ಪಾಸ್, ಡಿಎಲ್‌, ಪಾಸ್‌ಪೋರ್ಟ್‌, ಆಧಾರ್‌ ಇತ್ಯಾದಿ) ತೋರಿಸಬೇಕು.

* ಮೊಬೈಲ್‌ ಫೋನ್‌, ಬ್ಲೂಟೂತ್, ಕ್ಯಾಲ್ಕ್ಯುಲೇಟರ್, ವೈರ್‌ಲೆಸ್‌ ಸೆಟ್‌, ಪುಸ್ತಕ ಇತ್ಯಾದಿ ನಿಷೇಧ.

* ಈ ವರೆಗೆ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡದ ವಿದ್ಯಾರ್ಥಿಗಳು ಈಗಲೂ ವೆಬ್‌ಸೈಟ್‌ನಿಂದ ( http://kea.kar.nic.in) ಡೌನ್‌ಲೋಡ್‌ ಮಾಡಿಕೊಳ್ಳಬಹುದು.

* ಪರೀಕ್ಷೆ ಆರಂಭವಾಗುವ 30 ನಿಮಿಷಗಳ ಮೊದಲೇ ಕೇಂದ್ರದಲ್ಲಿ ಹಾಜರಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT