ADVERTISEMENT

ಸಿ.ಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 18:53 IST
Last Updated 24 ಏಪ್ರಿಲ್ 2017, 18:53 IST
ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)
ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ನಗರದ ಎಚ್‌.ಎ.ಎಲ್‌ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿದ್ದರಿಂದ ಸೋಮವಾರ ತುರ್ತು ಭೂಸ್ಪರ್ಶ ಮಾಡಿತು.

ಶ್ರವಣಬೆಳಗೊಳಕ್ಕೆ ಹೋಗಲೆಂದು ಅವರು ಬೆಳಿಗ್ಗೆ 10 ಗಂಟೆಗೆ ನಿಲ್ದಾಣಕ್ಕೆ ಬಂದಿದ್ದರು. ಲಲಿತ್‌ ಅಶೋಕ ಹೋಟೆಲ್‌ ಒಡೆತನದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಆರಂಭಿಸಿದ್ದರು.

200 ಅಡಿ ಎತ್ತರಕ್ಕೆ ಹೋಗುತ್ತಿದ್ದಂತೆ ಅದರ ಮುಂಭಾಗಕ್ಕೆ ಹದ್ದು ಅಪ್ಪಳಿಸಿತ್ತು. ಅದರಿಂದ ಎಚ್ಚೆತ್ತ ಪೈಲಟ್‌,  ಅದನ್ನು ವಾಪಸ್‌  ನಿಲ್ದಾಣಕ್ಕೆ ತಂದು ಭೂ ಸ್ಪರ್ಶ ಮಾಡಿದರು. ಬಳಿಕ ತಜ್ಞರು 10 ನಿಮಿಷ ಹೆಲಿಕಾಪ್ಟರ್‌ ತಪಾಸಣೆ ನಡೆಸಿದರು.  ಎಲ್ಲವೂ ಸರಿ ಇದೆ ಎಂದು ತಜ್ಞರು ತಿಳಿಸಿದ ಮೇಲೆಯೇ ಅವರಿಬ್ಬರು  ಪ್ರಯಾಣ ಮಾಡಿದರು.

ADVERTISEMENT

ಆರಂಭದಲ್ಲಿ ಹೆಲಿಕಾಪ್ಟರ್‌ಗೆ ಅಪ್ಪಳಿಸಿದ್ದು ಯಾವ ಪಕ್ಷಿ ಎಂಬುದು ಗೊತ್ತಿರಲಿಲ್ಲ. ನಿಲ್ದಾಣದ ಸುತ್ತಮುತ್ತ ಹುಡುಕಾಟ ನಡೆಸಿದ ಪೊಲೀಸರು, ಹದ್ದು ಸತ್ತು ಬಿದ್ದಿರುವುದನ್ನು ಪತ್ತೆ ಹಚ್ಚಿದರು.

ಸಿಡಿದ ವಿಮಾನದ ಚಕ್ರ

ಕೊಯಿಕ್ಕೋಡ್‌ (ಪಿಟಿಐ): ಏರ್‌ ಇಂಡಿಯಾ ವಿಮಾನದ ಚಕ್ರಗಳು ಸಿಡಿದು ಸಂಭವಿಸಬಹುದಾಗಿದ್ದ ಭಾರಿ ಅನಾಹುತದಿಂದ 191 ಪ್ರಯಾಣಿಕರು ಮತ್ತು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಇಲ್ಲಿನ ಕರಿಪುರ್‌ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಸಿ937 ವಿಮಾನವು ಟೇಕ್‌ಆಫ್‌ ಆಗುವ ವೇಳೆಗೆ ಎಡ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿತು.

ಕೂಡಲೇ ವಿಮಾನದ ದಿಕ್ಕನ್ನು ಮಧ್ಯಮ ಪಥದಿಂದ ಎಡ ಮಾರ್ಗಕ್ಕೆ ಬದಲಿಸಲಾಯಿತು. ಸುಮಾರು 30 ಮೀಟರ್‌ ಚಲಿಸುತ್ತಿದ್ದಂತೆ ಎಡಭಾಗದಲ್ಲಿರುವ ಒಳ ಚಕ್ರ ರನ್‌ವೇಯ ದೀಪಕ್ಕೆ ಬಡಿದು ಸಿಡಿಯಿತು. ಆದರೆ, ವಿಮಾನದ ಮೇಲೆ ನಿಯಂತ್ರಣ ಪಡೆದುಕೊಳ್ಳುವಲ್ಲಿ ಪೈಲಟ್‌ ಯಶಸ್ವಿಯಾದರು ಎಂದು ವಿಮಾನ ನಿಲ್ದಾಣ ನಿರ್ದೇಶಕ ಕೆ. ಜನಾರ್ದನ್‌ ತಿಳಿಸಿದರು.

ವಿಮಾನದಲ್ಲಿದ್ದ ಎಲ್ಲ 191 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ.

‘ಎಂಜಿನ್‌ ವೈಫಲ್ಯದಿಂದ ಸಮಸ್ಯೆ ಕಾಣಿಸಿಕೊಂಡಿತು. ರನ್‌ವೇನಲ್ಲಿ ಸಾಗುವಾಗ ಅದರ ಒಳಭಾಗ ಒಡೆದು ಬೆಂಕಿ ಹೊತ್ತಿಕೊಂಡಿತು ಎಂದು ಅವರು ವಿವರಿಸಿದರು.

ರನ್‌ವೇನಿಂದ ವಿಮಾನ ತೆರವುಗೊಳಿಸಲು ಒಂದೂವರೆ ಗಂಟೆ ಬೇಕಾಗಿದ್ದರಿಂದ ನಾಲ್ಕು ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಯಿತು.
ದುಬೈ ಪ್ರಯಾಣಿಕರಿಗೆ ಸಂಜೆ ಮುಂಬೈನಿಂದ ಬದಲಿ ವಿಮಾನ ತರಿಸಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಯಿತು.

ಹಕ್ಕಿ ಡಿಕ್ಕಿ (ಕೋಲ್ಕತ್ತ ವರದಿ): ದೆಹಲಿಯಿಂದ ಬಂದ ಏರ್‌ಇಂಡಿಯಾ ವಿಮಾನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಹಕ್ಕಿ ಡಿಕ್ಕಿ ಹೊಡೆದಿದೆ.
ಅದರಲ್ಲಿದ್ದ 244 ಪ್ರಯಾಣಿಕರು ಹಾಗೂ 10 ಮಂದಿ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.