ADVERTISEMENT

ಸಿಯಾಚಿನ್‌: ರಾಜ್ಯದ ಮೂವರು ಕಣ್ಮರೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ನಾಗೇಶ್‌ ಅವರ ಮನೆಯ ಮುಂದೆ ಕಾಯುತ್ತಿರುವ ಅವರ ಸಂಬಂಧಿಕರು
ನಾಗೇಶ್‌ ಅವರ ಮನೆಯ ಮುಂದೆ ಕಾಯುತ್ತಿರುವ ಅವರ ಸಂಬಂಧಿಕರು   

ಹಾಸನ/ ಕುಂದಗೋಳ/ ಎಚ್‌ಡಿ ಕೋಟೆ: ಜಮ್ಮು– ಕಾಶ್ಮೀರದ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಬುಧವಾರ (ಫೆ. 3) ಹಿಮಕುಸಿತದಲ್ಲಿ ನಾಪತ್ತೆಯಾದ ಹತ್ತು ಯೋಧರಲ್ಲಿ ರಾಜ್ಯದ ಮೂವರು ಸೇರಿದ್ದಾರೆ.

ಇವರನ್ನು ಹಾಸನ ಜಿಲ್ಲೆ ತೇಜೂರಿನ ಸುಬೇದಾರ್‌ ಟಿ.ಟಿ. ನಾಗೇಶ್‌ (41), ಕುಂದಗೋಳ ತಾಲ್ಲೂಕು  ಬೆಟದೂರಿನ ಲ್ಯಾನ್ಸ್‌ನಾಯಕ್‌ ಹನುಮಂತಪ್ಪ ಕೊಪ್ಪದ ಮತ್ತು ಎಚ್‌.ಡಿ ಕೋಟೆ ಹಂಪಾಪುರದ ಯೋಧ ಮಹೇಶ (30)  ಎಂದು ಗುರುತಿಸಲಾಗಿದೆ.

ಮಡುಗಟ್ಟಿದ ದುಃಖ:  ಹಾಸನ ನಗರಕ್ಕೆ ಹೊಂದಿಕೊಂಡ ಪುಟ್ಟ ಹಳ್ಳಿ ತೇಜೂರಿನಲ್ಲಿ ನಾಗೇಶ್‌ ಅವರ ಪತ್ನಿ ಆಶಾ ಹಾಗೂ ಮಕ್ಕಳಾದ

ಅಮಿತ್‌ (11) ಮತ್ತು ಪ್ರೀತಮ್‌ (7)   ವಾಸವಾಗಿದ್ದಾರೆ. ಈ ಮನೆಯಲ್ಲಿ ಎರಡು ದಿನಗಳಿಂದ ದುಃಖ ಮಡುಗಟ್ಟಿದೆ.

ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಾಗೇಶ್‌ ಅವರ ಸಂಬಂಧಿಯೊಬ್ಬರಿಗೆ ಸೇನಾ ಕಚೇರಿಯಿಂದ ಕರೆ ಮಾಡಿ ‘ಸಿಯಾಚಿನ್‌ನಲ್ಲಿ ಮಂಜಿನಡಿ ಸಿಲುಕಿದ ಯೋಧರಲ್ಲಿ ನಾಗೇಶ್‌ ಸಹ ಸೇರಿದ್ದು, ಅವರ ಹುಡುಕಾಟ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ್ದರು. ಆ ನಂತರ ಅಲ್ಲಿಂದ ಯಾವುದೇ ಮಾಹಿತಿ ಬಂದಿಲ್ಲ’ ಎಂದು ನಾಗೇಶ್‌ ಅವರ ಭಾವ ಅಣ್ಣಪ್ಪ ತಿಳಿಸಿದ್ದಾರೆ.

ನಾಗೇಶ್‌ 22 ವರ್ಷಗಳಿಂದ ಸೇನೆಯಲ್ಲಿದ್ದಾರೆ. ಐದು ತಿಂಗಳ ಹಿಂದೆ ಮನೆಗೆ ಬಂದು ಹೋಗಿದ್ದರು. ಘಟನೆ ನಡೆದ ಹಿಂದಿನ ದಿನವಷ್ಟೇ ಅವರು ಸಿಯಾಚಿನ್‌ಗೆ ತೆರಳಿದ್ದರು. ಮನೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. 

ಸೇನೆಯಲ್ಲಿ: 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹನುಮಂತಪ್ಪ ಕೊಪ್ಪದ ಅವರಿಗೆ ಪತ್ನಿ ಜಯಮ್ಮ ಮತ್ತು ಪುತ್ರಿ ನೇತ್ರಾ

ADVERTISEMENT

ಇದ್ದಾರೆ.

4 ತಿಂಗಳ ಹಿಂದೆ ಬಂದಿದ್ದರು:  ಶಿಕ್ಷಕ ನಾಗರಾಜು ಮತ್ತು ಸರ್ವಮಂಗಳಾ ದಂಪತಿಯ ಪುತ್ರ ಮಹೇಶ್‌ 10 ವರ್ಷಗಳ ಹಿಂದೆ ಸೇನೆ ಸೇರಿದ್ದರು. ‘ನಾಲ್ಕು ತಿಂಗಳ ಹಿಂದೆ ಮನೆಗೆ ಬಂದಿದ್ದ ಮಗ, ಮತ್ತೆ ಸ್ನೇಹಿತನ ವಿವಾಹಕ್ಕೆ ಬರುವುದಾಗಿ ಹೇಳಿ ಹೋಗಿದ್ದ’ ಎಂದು ತಾಯಿ ಅಳುತ್ತಾ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.