ADVERTISEMENT

ಸೆರೆಮನೆಗೆ ಶಶಿಕಲಾ

ಪಿಟಿಐ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ಜಯಲಲಿತಾ ಸಮಾಧಿ ಮುಂದೆ ಶಶಿಕಲಾ ಶಪಥ ಪಿಟಿಐ ಚಿತ್ರ
ಜಯಲಲಿತಾ ಸಮಾಧಿ ಮುಂದೆ ಶಶಿಕಲಾ ಶಪಥ ಪಿಟಿಐ ಚಿತ್ರ   

ಚೆನ್ನೈ: ನ್ಯಾಯಾಲಯದ ಮುಂದೆ ಶರಣಾಗುವುದಕ್ಕಾಗಿ ಬೆಂಗಳೂರಿಗೆ ಹೊರಡುವ ಮುನ್ನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಜಯಲಲಿತಾ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಪಕ್ಷದ ಸ್ಥಾಪಕ ಎಂ.ಜಿ. ರಾಮಚಂದ್ರನ್‌ ಅವರ ರಾಮಪುರಂನ ನಿವಾಸಕ್ಕೂ ಭೇಟಿ ಕೊಟ್ಟರು.

ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಅವರಿಗೆ ಸುಪ್ರೀಂ ಕೋರ್ಟ್‌ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯಕ್ಕೆ ಶರಣಾಗಲು ಒಂದು ವಾರ ಸಮಯ ಕೊಡಬೇಕು ಎಂಬ ಅವರ ವಿನಂತಿಯನ್ನು ಮಾನ್ಯ ಮಾಡಿಲ್ಲ.

ಹಾಗಾಗಿ ತಮಿಳುನಾಡು ಮುಖ್ಯಮಂತ್ರಿ ಹುದ್ದೆಗಾಗಿ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಜತೆಗೆ ಸಂಘರ್ಷಕ್ಕೆ ಇಳಿದಿರುವ ಶಶಿಕಲಾ ಅನಿವಾರ್ಯವಾಗಿ ಬೆಂಗಳೂರಿಗೆ ಹೊರಡಬೇಕಾಯಿತು.

ಜಯಲಲಿತಾ ಸಮಾಧಿಗೆ ಪುಷ್ಪನಮನ ಅರ್ಪಿಸಿದ ಶಶಿಕಲಾ, ಶಪಥ ಮಾಡುವ ರೀತಿಯಲ್ಲಿ ಸಮಾಧಿಯ ಮೇಲೆ ಮೂರು ಬಾರಿ ಕೈಯನ್ನು ಅಪ್ಪಳಿಸಿದರು. ಬಾಯಿಯಲ್ಲಿ ಏನನ್ನೋ ಹೇಳಿದರು. ಆದರೆ ಅದು ಏನೆಂದು ಸ್ಪಷ್ಟವಾಗಿ ತಿಳಿಯಲಿಲ್ಲ.

ಸೆರೆಮನೆ ಸೇರುವುದು ಖಚಿತವಾದ ನಂತರ ಮಂಗಳವಾರ ರಾತ್ರಿಯೇ ಶಾಸಕರು ಮತ್ತು ಬೆಂಬಲಿಗರ ಜತೆಗೆ ಭಾವನಾತ್ಮಕ ಮಾತುಕತೆ ನಡೆಸಿದ್ದ ಶಶಿಕಲಾ ಏನೇ ಬಂದರೂ ದಿಟ್ಟವಾಗಿ ಎದುರಿಸುವಂತೆ ಮತ್ತು ಒಗ್ಗಟ್ಟಾಗಿ ಇರುವಂತೆ ಹೇಳಿದ್ದರು.

**

ಶಶಿಕಲಾ ಕೈದಿ ಸಂಖ್ಯೆ ‘9234’
ಬೆಂಗಳೂರು:
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ, ಅವರ ಸಂಬಂಧಿಗಳಾದ ವಿ.ಎನ್‌ ಸುಧಾಕರನ್‌ ಹಾಗೂ ಜೆ.ಇಳವರಸಿ ಬುಧವಾರ ಪರಪ್ಪನ ಅಗ್ರಹಾರ ಜೈಲು ಸೇರಿದರು.

ADVERTISEMENT

ಚೆನ್ನೈನಿಂದ ಕಾರಿನಲ್ಲಿ ಹೊರಟು ಸಂಜೆ 5.15ಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು. ಒಂದು ತಾಸು ವಿಚಾರಣೆ ನಡೆಸಿದ ಉಸ್ತುವಾರಿ ನ್ಯಾಯಾಧೀಶ ಅಶ್ವತ್ಥ ನಾರಾಯಣ್, ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು.

ಮೂರು ಬೇಡಿಕೆ:  ನ್ಯಾಯಾಧೀಶರ ಮುಂದೆ ಹಾಜರಾದ ಶಶಿಕಲಾ, ‘ನಾನು ಸರ್ಕಾರಕ್ಕೆ ಸಾಕಷ್ಟು ತೆರಿಗೆ ತುಂಬುತ್ತಿರುವ ಕಾರಣ ‘ಎ’ ದರ್ಜೆಯ ಸೆಲ್ ನೀಡಬೇಕು, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳು ಇರುವುದರಿಂದ ಕಾಲ ಕಾಲಕ್ಕೆ ಔಷಧಗಳನ್ನು ಪೂರೈಸಬೇಕು ಹಾಗೂ ಯೋಗ ಮಾಡಲು ಅವಕಾಶ ನೀಡಬೇಕು’ ಎಂಬ ಮೂರು ಬೇಡಿಕೆಗಳನ್ನು ಇಟ್ಟರು.

ಆಗ ನ್ಯಾಯಾಧೀಶರು, ‘ಈ ಬೇಡಿಕೆಗಳನ್ನು ಈಡೇರಿಸುವುದು ಜೈಲು ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು. ಅವರಲ್ಲೇ ಮನವಿ ಮಾಡಿಕೊಳ್ಳಿ. ಅನಾರೋಗ್ಯವಿದ್ದಾಗ ಮಾತ್ರ ಹೊರಗಿನ ಊಟ ತರಿಸಿಕೊಳ್ಳಬಹುದು’ ಎಂದರು.

ಕಲ್ಲು ತೂರಾಟ, ವಾಹನ ಜಖಂ ಶಶಿಕಲಾ ಅವರ ಬೆಂಬಲಿಗರ ವಾಹನಗಳು ಜೈಲು ರಸ್ತೆ ತಲುಪುತ್ತಿದ್ದಂತೆಯೇ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದರು. ಇದರಿಂದಾಗಿ ತಮಿಳುನಾಡು ನೋಂದಣಿ ಸಂಖ್ಯೆಯ ಏಳು ಕಾರುಗಳ ಗಾಜುಗಳು ಪುಡಿಪುಡಿಯಾದವು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ವಿದ್ಯಮಾನದಿಂದಾಗಿ ಸ್ಥಳದಲ್ಲಿ ಕೆಲ ಕಾಲ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣವಾಯಿತು.
ಕಲ್ಲು ತೂರಾಟ ನಡೆಯುವ ವೇಳೆಗಾಗಲೇ ಶಶಿಕಲಾ ಹಾಗೂ ಇಳವರಸಿ ಇದ್ದ ಟಿ.ಎನ್ 09 ಬಿಇ 5969 ನೋಂದಣಿ ಸಂಖ್ಯೆಯ ಬೆಂಜ್‌ ಕಾರು ಸುರಕ್ಷಿತವಾಗಿ ಜೈಲು ಆವರಣ ತಲುಪಿತ್ತು.

ನಾಗನಾಥಪುರ ರಸ್ತೆ ಮಾರ್ಗದಿಂದ ಕಾರಾಗೃಹ ಆವರಣ ಪ್ರವೇಶಿಸುವ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ಪೊಲೀಸರು, ಮಾಧ್ಯಮ ಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದರು.

ವೇಗವಾಗಿ ಬಂದ ಶಶಿಕಲಾ ಅವರ ಬೆಂಬಲಿಗರ ಕಾರುಗಳು, ಬ್ಯಾರಿಕೇಡ್‌ಗಳು ಇದ್ದ ಕಾರಣ ಆ ಪ್ರದೇಶದಲ್ಲಿ ನಿಧಾನಗತಿಯಲ್ಲಿ ಸಾಗಿದವು. ಇದೇ ಸಮಯದಲ್ಲಿ ದಾಳಿಗಿಳಿದ ಕಿಡಿಗೇಡಿಗಳು, ‘ಎಲ್ಲರೂ ಸೇರಿಕೊಂಡು ಅಮ್ಮನಿಗೆ (ಜಯಲಲಿತಾ) ಅನ್ಯಾಯ ಮಾಡಿದಿರಿ’ ಎಂದು ಗಲಾಟೆ ಪ್ರಾರಂಭಿಸಿದರು.

ಉದ್ರಿಕ್ತ ವ್ಯಕ್ತಿಯೊಬ್ಬ, ಶಶಿಕಲಾ ಬೆಂಬಲಿಗರ ಸ್ಕಾರ್ಪಿಯೊ ಕಾರಿಗೆ ಕೈಯಿಂದ ಗುದ್ದಿ ಹಿಂಬದಿ ಕಾರು ಪುಡಿ ಪುಡಿ ಮಾಡಿದ. ಇನ್ನೊಬ್ಬ, ಕಾರಿನ ಮೇಲೇರಿ ಮುಂಭಾಗದ ಗಾಜನ್ನು ಒಡೆದ. ಇನ್ನು ಕೆಲವರು ಕೈಯಲ್ಲಿ ಚಪ್ಪಲಿ ಹಿಡಿದು ಕಾರುಗಳ ಗಾಜುಗಳಿಗೆ ಪಟ ಪಟ ಬಡಿದು ಆಕ್ರೋಶ ಹೊರಹಾಕಿದರು. ಈ ಗಲಾಟೆಯಿಂದಾಗಿ ಹೊಸೂರು ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು.

‘ತಮಿಳುನಾಡಿನ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರ ಬೆಂಬಲಿಗರು ಈ ದಾಳಿ ನಡೆಸಿರುವ ಸಾಧ್ಯತೆ ಇದೆ’ ಎಂದು ಹಿರಿಯ ಅಧಿಕಾರಿಗಳು ಶಂಕಿಸಿದ್ದಾರೆ.

ಕೈದಿ ಸಂಖ್ಯೆ: ‘ಯಾರಿಗೂ ‘ಎ’ ದರ್ಜೆಯ ಕೊಠಡಿ ನೀಡಿಲ್ಲ. ಶಶಿಕಲಾ ಅವರನ್ನು ಮಹಿಳಾ ಬ್ಯಾರಕ್‌ನ ಸಾಮಾನ್ಯ ಕೊಠಡಿಯಲ್ಲಿ ಇರಿಸಲಾಗಿದ್ದು, ಅವರಿಗೆ ‘9234’ ಕೈದಿ ಸಂಖ್ಯೆ ನೀಡಲಾಗಿದೆ. ಇಳವರಸಿ ಅವರಿಗೆ ‘9235’ ಹಾಗೂ ಸುಧಾಕರ್‌ಗೆ ‘9236’ ಕೈದಿ ಸಂಖ್ಯೆಗಳನ್ನು ನೀಡಲಾಗಿದೆ. ಹೊರಗಿನ ಊಟಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು.

ಶಶಿಕಲಾ ಹಾಗೂ ಇಳವರಸಿ ಮೊದಲು ನ್ಯಾಯಾಲಯಕ್ಕೆ ಹಾಜರಾದರು. ಆದರೆ, ಸುಧಾಕರನ್‌ ಬರುವುದು ತಡವಾಯಿತು. ಈ ವಿಚಾರವಾಗಿ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ‘ಮೂವರೂ ಒಟ್ಟಿಗೇ ಹಾಜರಾಗಬೇಕು ಎಂದು ಸೂಚಿಸಿರಲಿಲ್ಲವೆ’ ಎಂದು ಏರು ಧ್ವನಿಯಲ್ಲೇ ಕೇಳಿದರು. ಆಗ ಶಶಿಕಲಾ, ‘ಸ್ವಲ್ಪ ಹೊತ್ತಿನಲ್ಲೇ ಸುಧಾಕರನ್‌ ಹಾಜರಾಗುತ್ತಾರೆ’ ಎಂದು ಲಿಖಿತ ಹೇಳಿಕೆ ಕೊಟ್ಟರು.

ಬಿಳಿ ಸೀರೆ ತೊಟ್ಟ ಚಿನ್ನಮ್ಮ
‘ಶಶಿಕಲಾ (ಚಿನ್ನಮ್ಮ) ಅವರಿಗೆ ಸಾಮಾನ್ಯ ಕೈದಿಯ ಉಪಚಾರ ನೀಡಲಾಗುತ್ತಿದ್ದು, ಬುಧವಾರ ರಾತ್ರಿ ಅವರು ಬಿಳಿ ಬಣ್ಣದ ಸೀರೆಯನ್ನು (ಕೈದಿ ಸಮವಸ್ತ್ರ) ತೊಟ್ಟುಕೊಂಡರು’ ಎಂದು ಕಾರಾಗೃಹದ ಸಿಬ್ಬಂದಿ ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಕಾರಾಗೃಹ ಇಲಾಖೆಯ ಡಿಜಿಪಿ ಎಚ್‌.ಎನ್. ಸತ್ಯನಾರಾಯಣ್, ‘ನ್ಯಾಯಾಲಯ ಮೂವರಿಗೂ ಸಾಧಾರಣ ಶಿಕ್ಷೆ ವಿಧಿಸಿರುವ ಕಾರಣ ಅವರಿಗೆ ಜೈಲಿನಲ್ಲಿ ಕೆಲಸ ನೀಡುವುದಿಲ್ಲ. ಅವರೇ ಸ್ವ–ಇಚ್ಛೆಯಿಂದ ಕೆಲಸಗಳನ್ನು ಮಾಡಬಹುದು’ ಎಂದು ಹೇಳಿದರು.

***

ನನ್ನನ್ನಷ್ಟೇ ಜೈಲಿಗೆ ಹಾಕಲು ಸಾಧ್ಯ.  ಪಕ್ಷದ ಮೇಲೆ ನನಗೆ ಇರುವ ಕಾಳಜಿಯನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಎಲ್ಲಿಯೇ ಇದ್ದರೂ ಪಕ್ಷದ ಬಗ್ಗೆಯೇ ಚಿಂತನೆ ನಡೆಸುತ್ತಿರುತ್ತೇನೆ.
- ಶಶಿಕಲಾ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.