ADVERTISEMENT

ಹತ್ತಿ ಖರೀದಿಗೆ ಮುಂದಾಗಬೇಕಿದೆ ಎಪಿಎಂಸಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 19:51 IST
Last Updated 19 ಸೆಪ್ಟೆಂಬರ್ 2014, 19:51 IST

ಕೊಪ್ಪಳ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಹತ್ತಿ ವ್ಯಾಪಾರಕ್ಕೆ ಸೂಕ್ತ ಅವಕಾಶ­ವಿಲ್ಲದೇ ರೈತರು ಖಾಸಗಿ ವ್ಯಾಪಾರಿಗಳ ಬಳಿ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

ಎಪಿಎಂಸಿ ಆರಂಭದಿಂದಲೂ ಇಲ್ಲಿ ಹತ್ತಿ ಖರೀದಿಗೆ ಬೇಕಾದ ವ್ಯವಸ್ಥೆ ಇಲ್ಲ. ಹಾಗಾಗಿ ನಾವು ಅತ್ತ ಹೋಗುತ್ತಿಲ್ಲ. ಖರೀದಿಯೂ ನಡೆದಿಲ್ಲ. ಖಾಸಗಿ ಖರೀದಿದಾರರು ತಮ್ಮ ಮನೆಬಾಗಿಲಿಗೇ ಬಂದು ಖರೀದಿಸುತ್ತಾರೆ. ಹಾಗೂ ಸ್ಥಳದಲ್ಲೇ ಹಣ ಪಾವತಿಯಾಗುತ್ತದೆ. ಹೀಗಿರುವಾಗ ಎಪಿಎಂಸಿಗೆ ಏಕೆ ಹೋಗಬೇಕು ಎಂಬುದು ರೈತರ ಪ್ರಶ್ನೆ.

ಅದಕ್ಕೆ ತಕ್ಕಂತೆ ಈ ವರ್ಷ ಜಿಲ್ಲೆಯಲ್ಲಿ ವ್ಯಾಪಕ­ವಾಗಿ ಹತ್ತಿ ಬೆಳೆಯಲಾಗಿದೆ. ಹೊಲಗಳಲ್ಲಿ ನಳನಳಿ­ಸುತ್ತಿರುವ ಫಸಲು ಮಳೆಗೆ ಸಿಲುಕಿ ಹಾನಿಯಾಗುವ ಮುನ್ನ ಅದು ಖರೀದಿಯಾಗಿಬಿಡಬೇಕು ಎಂಬುದು ರೈತರ ತವಕ.

ನಗರದಲ್ಲಿ ನಾಲ್ವರು ಪರವಾನಗಿ ಹೊಂದಿದ ಖರೀದಿ­ದಾರರು ಇದ್ದಾರೆ. ಹಲಗೇರಿ­ಯಲ್ಲಿ ಹತ್ತಿ ಸಂಸ್ಕರಣಾ ಘಟಕವೂ ಇದೆ. ಮಾರುಕಟ್ಟೆ ವ್ಯಾಪ್ತಿ­ಯಿಂದ ಹೊರಗೇ ವ್ಯವಹಾರ ನಡೆಯುತ್ತವೆ. ಇದ­ರಿಂದ ನಿಖರ ಲೆಕ್ಕಾಚಾರಗಳು ದಾಖಲಾಗು­ವುದೂ ಇಲ್ಲ ಎಂದು ಕೃಷಿ ಉತ್ಪನ್ನ ವ್ಯಾಪಾರಿಗಳ ಹೇಳಿಕೆ.

ತರಕಾರಿ ಸಹಿತ ಎಲ್ಲ ಉತ್ಪನ್ನಗಳು ಮಾರುಕಟ್ಟೆ­ಯಲ್ಲಿ ಹರಾಜು ಆಗುತ್ತವೆ. ಮೆಕ್ಕೆಜೋಳ, ಭತ್ತ, ಶೇಂಗಾ ಖರೀದಿ ಹಾಗೂ ಸಂಗ್ರಹಕ್ಕೆ ಉತ್ತಮ ಗೋದಾಮುಗಳೂ ಎಪಿಎಂಸಿಯಲ್ಲಿವೆ. ಆದರೆ, ಹತ್ತಿ ಖರೀದಿಗೆ ಇನ್ನಷ್ಟು ಮೂಲಸೌಲಭ್ಯ ಬೇಕು. ಹಾಗಾಗಿ ಹತ್ತಿ ಬೆಳೆಗಾರರು ಎಪಿಎಂಸಿಯತ್ತ ಸುಳಿ­ಯು­­ತ್ತಿಲ್ಲ ಎಂದು ಇದೇ ಯಾರ್ಡ್‌ನಲ್ಲಿದ್ದ ವ್ಯಾಪಾರಿಗಳು, ಕೂಲಿಕಾರರು ಮಾಹಿತಿ ನೀಡಿದರು.

ಎಪಿಎಂಸಿ ಮೂಲಗಳ ಪ್ರಕಾರ, ಈ ವರ್ಷ ಏ. 1ರಿಂದ ಆ.31ರವರೆಗೆ ನಗರದ ವಿವಿಧ ವ್ಯಾಪಾರಿ­ಗಳು ಒಟ್ಟು 27,986.65 ಕ್ವಿಂಟಲ್‌ ಹತ್ತಿ ಖರೀದಿಸಿದ್ದಾರೆ. ಇದಕ್ಕೂ ಆನ್‌ಲೈನ್‌ ಮೂಲಕವೇ ಖರೀದಿ ಪ್ರಕ್ರಿಯೆ ನಡೆಸಬೇಕು ಎಂದೂ ವ್ಯಾಪಾರಿ­ಗಳಿಗೆ ಸೂಚಿಸಲಾಗಿದೆ. ಅದರಂತೆ ಖರೀದಿ ನಡೆಯುತ್ತಿದೆ ಎಂದೂ ಇದೇ ಮೂಲಗಳು ತಿಳಿಸಿವೆ.

ಕೊಪ್ಪಳ ನಗರ, ಆಸುಪಾಸಿನಲ್ಲಿ ಎಪಿಎಂಸಿ­ಯಿಂದ ಅಧಿಕೃತ ಪರವಾನಗಿ ಪಡೆದ ಸುಮಾರು ನೂರರಷ್ಟು ವ್ಯಾಪಾರಿಗಳು ಇದ್ದಾರೆ. ಆದರೆ ಸ್ಥಳಾವಕಾಶದ ಕೊರತೆಯಿಂದ ಎಲ್ಲರಿಗೂ ಸಮಿತಿ ಪ್ರದೇಶದ ಆವರಣದೊಳಗೆ ಅವಕಾಶ ಕಲ್ಪಿಸಲು ಆಗಿಲ್ಲ ಎನ್ನುತ್ತವೆ ಇಲ್ಲಿನ ಮೂಲಗಳು.

ಬಳ್ಳಾರಿ, ಹಾವೇರಿ, ರಾಯಚೂರು, ಹುಬ್ಬಳ್ಳಿ ಜಿನ್ನಿಂಗ್‌­­ಮಿಲ್‌ನವರು ಇಲ್ಲಿ ಬಂದು ಹತ್ತಿ ಖರೀದಿ­ಸುತ್ತಾರೆ. ಆದರೆ, ಎಪಿಎಂಸಿ ಆವರಣದಲ್ಲಿ ಅಧಿ­ಕಾರಿ­ಗಳ ಸಮ್ಮುಖದಲ್ಲೇ ಪಾರದರ್ಶಕವಾಗಿ ನಡೆ­ದರೆ ರೈತರಿಗೆ ಇನ್ನೂ  ಒಳ್ಳೆಯದಲ್ಲವೇ ಎಂಬುದು ಬೆಳೆಗಾರರ ಪ್ರಶ್ನೆ. ಎಪಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್‌ ಹೇಳುವ ಪ್ರಕಾರ, ಹತ್ತಿಯನ್ನು ಎಪಿಎಂಸಿ ಆವರಣ­ದಲ್ಲೇ ಮಾರಾಟ ಮಾಡುವಂತೆ ಹಲವಾರು ಬಾರಿ, ರೈತರು, ವ್ಯಾಪಾರಿಗಳಲ್ಲಿ ಮನವಿ ಮಾಡಲಾಗಿದೆ. ಆದರೆ, ಯಾರೂ ಮುಂದಾ­ಗುತ್ತಿಲ್ಲ. ಭಾರತೀಯ ಹತ್ತಿ ನಿಗಮಕ್ಕೂ ಇಲ್ಲಿ ಖರೀದಿ ಪ್ರಕ್ರಿಯೆ ನಡೆಸಲು ಕೋರಲಾಗಿದೆ. ರೈತರು ಬಂದರೆ ಅವರಿಗೆ ಇರುವ ವ್ಯವಸ್ಥೆಯೊಳಗೆ ಖರೀದಿ ಪ್ರಕ್ರಿಯೆ ನಡೆಸಲು ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.