ADVERTISEMENT

ಹತ್ತು ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

8.8 ಕೋಟಿ ಅಕ್ರಮ ಆಸ್ತಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಬೆಂಗಳೂರು: ರಾಜ್ಯದ ಎಂಟು ಜಿಲ್ಲೆಗಳ 25 ಸ್ಥಳಗಳ ಮೇಲೆ ಶುಕ್ರವಾರ ಏಕಕಾಲಕ್ಕೆ ದಾಳಿಮಾಡಿ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ಹತ್ತು ಅಧಿಕಾರಿಗಳ ಬಳಿ ₨ 8.8 ಕೋಟಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಜನಾರ್ದನ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಕೃಷ್ಣಪ್ಪ ಲೋಹಾರ್‌, ಯಾದಗಿರಿ ಜಿಲ್ಲೆಯ ಭೀಮರಾಯನಗುಡಿ ಪಶ್ಚಿಮ ದಂಡೆ ಕಾಲುವೆ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಪ್ಪ ಆರ್‌.ಖಂಡ್ರೆ, ಬೀದರ್‌ನ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಅಶೋಕ ವಂಗಪಲ್ಲಿ, ಕೃಷ್ಣಾ ಭಾಗ್ಯ ಜಲನಿಗಮದ ಜೇವರ್ಗಿಯ ಸಹಾಯಕ ಎಂಜಿನಿಯರ್‌ ಜಗನ್ನಾಥ ರೆಡ್ಡಿ, ಪೌರಾಡಳಿತ ನಿರ್ದೇಶ ನಾಲಯದ ಪ್ರಥಮ ದರ್ಜೆ ಸಹಾಯಕ ಪಿ.ಆರ್‌.ರಂಗೇಗೌಡ, ಕೆಜಿಎಫ್‌ ಅಬಕಾರಿ ಡಿವೈಎಸ್‌ಪಿ ವಿ.ಚಂದ್ರಪ್ಪ, ರಾಜ್ಯ ಹಣಕಾಸು ಸಂಸ್ಥೆಯ ಮಂಡ್ಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್‌.ಜಿ.ಚಂದ್ರೇ ಗೌಡ, ರಾಯಚೂರಿನ ಅಬಕಾರಿ ಸಬ್‌ ಇನ್‌ಸ್ಪೆಕ್ಟರ್‌ ಹನುಮಂತು ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿ ಯರ್‌ ಈಶ್ವರಪ್ಪ ಗರುಡಪ್ಪ ದೇವರ ಅವರ ಮೇಲೆ ದಾಳಿ ನಡೆದಿದೆ.

‘ಹತ್ತು ಆರೋಪಿಗಳ ವಿರುದ್ಧವೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಲಾಗಿದೆ. ಬೆಂಗಳೂರು, ಬಾಗಲಕೋಟೆ, ಬೀದರ್‌, ಹಾಸನ, ಕೋಲಾರ, ಮಂಡ್ಯ, ರಾಯ ಚೂರು ಮತ್ತು ವಿಜಯಪುರ ಜಿಲ್ಲೆಗಳ 25 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ’ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರೇಮ್‌ ಶಂಕರ್‌ ಮೀನಾ ತಿಳಿಸಿದ್ದಾರೆ.

ಜನಾರ್ದನ್‌ ಬೆಂಗಳೂರಿನಲ್ಲಿ ಒಂದು ಮನೆ, ಮೂರು ನಿವೇಶನ ಮತ್ತು ಒಂದು ಎಕರೆ ಕೃಷಿ ಜಮೀನು ಹೊಂದಿ ದ್ದಾರೆ. ಇವರ ಮನೆಯಲ್ಲಿ ₨ 4.05 ಲಕ್ಷ ನಗದು ಪತ್ತೆಯಾಗಿದೆ. ಕೃಷ್ಣಪ್ಪ ಬಳಿ ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್‌, ಒಂದು ಕಟ್ಟಡ, ಮೂರು ನಿವೇಶನ ಇರುವುದು ಬಯಲಿಗೆ ಬಂದಿದೆ. ಇವರು ಎರಡು ಜೆಸಿಬಿ ಯಂತ್ರಗಳನ್ನೂ ಹೊಂದಿದ್ದಾರೆ.
ಜಗನ್ನಾಥ ರೆಡ್ಡಿ ಕಲಬುರ್ಗಿಯಲ್ಲಿ ಒಂದು ಮನೆ, ಐದು ನಿವೇಶನ ಮತ್ತು 16 ಎಕರೆ 10 ಗುಂಟೆ ಜಮೀನು ಹೊಂದಿರುವುದು ಪತ್ತೆಯಾಗಿದೆ. ಅಬಕಾರಿ ಎಸ್‌ಐ ಹನುಮಂತು ರಾಯ ಚೂರಿನ ವಿವಿಧೆಡೆ 20 ಎಕರೆ 24 ಗುಂಟೆ ಜಮೀನು, ಒಂದು ಮನೆ ಮತ್ತು ಎರಡು ನಿವೇಶನಗಳನ್ನು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಖರೀದಿ ಮಾಡಿರುವುದು ದಾಳಿ ವೇಳೆ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.