ADVERTISEMENT

ಹಲೋ ಹೋಮ್‌ ಮಿನಿಸ್ಟರ್‌ ಸರ್ ನಮ್ಮ ಶಿಕ್ಷಕರು ಇಲ್ಲೇ ಇರಲಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ‘ಹಲೋ ಹೋಮ್‌ ಮಿನಿಸ್ಟರ್‌ ಸರ್, ನಾನು ಸರ್ಕಾರಿ ಶಾಲೆ ವಿದ್ಯಾರ್ಥಿ. ಶಾಲೆಯಲ್ಲಿ ನಾಲ್ಕು ಮಂದಿ ಶಿಕ್ಷಕರನ್ನು ಬೇರೆಡೆಗೆ ಕಳುಹಿಸುತ್ತಿದ್ದಾರೆ. ದಯವಿಟ್ಟು ಕ್ಯಾನ್ಸಲ್‌ ಮಾಡ್ಸಿ’... ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕು ಹಾರಾಡಿಯ ಸರ್ಕಾರಿ ಶಾಲೆ 8ನೇ ತರಗತಿ ವಿದ್ಯಾರ್ಥಿ ದಿವಿತ್‌ ರೈ ರಾಜ್ಯದ ಗೃಹ ಸಚಿವ ಡಾ.  ಜಿ. ಪರಮೇಶ್ವರ ಅವರಿಗೆ ಮನವಿ ಮಾಡಿದ್ದು ಹೀಗೆ...

ವಿದ್ಯಾರ್ಥಿ ಮನವಿಗೆ ಸ್ಪಂದಿಸಿದ ಪರಮೇಶ್ವರ್ ಅವರು, ‘ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಅವರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ, ಮರು ನಿಯೋಜನೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹಾರಾಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ ಬೇರೆಡೆಗೆ ನಿಯೋಜಿಸಲಾಗುತ್ತಿದೆ. ಇದರಿಂದ ಬೇಸರಗೊಂಡ ವಿದ್ಯಾರ್ಥಿ ಅದನ್ನು ನೇರವಾಗಿ ಗೃಹ ಸಚಿವರ ಗಮನಕ್ಕೆ ತಂದಿದ್ದಾನೆ.

ಗೃಹ ಸಚಿವರೇ ಕರೆ ಮಾಡಿದರು: ‘ನಮ್ಮ ಶಿಕ್ಷಕರನ್ನು ಬೇರೆಡೆ ಕಳುಹಿಸಬೇಡಿ ಎಂದು ಮನವಿ ಮಾಡಲು ಗೃಹ ಸಚಿವರಿಗೆ ಮೊಬೈಲ್‌ಗೆ ಮಂಗಳವಾರ ಸಂಜೆ ಸಂದೇಶ ಕಳುಹಿಸಿದ್ದೆ. ‘ಸರ್, ನಾನು ಹಾರಾಡಿ ಶಾಲೆ ವಿದ್ಯಾರ್ಥಿ ದಿವಿತ್‌ ರೈ. ನಿಮ್ಮ ಜೊತೆ ಐದು ನಿಮಿಷ ಮಾತನಾಡಲಿಕ್ಕಿದೆ ಎಂದು ಮನವಿ ಮಾಡಿದೆ. ಬುಧವಾರ ಬೆಳಿಗ್ಗೆ ಮತ್ತೊಮ್ಮೆ ಸಂದೇಶ ಕಳುಹಿಸಿದೆ. 10 ನಿಮಿಷಗಳ ನಂತರ ಅವರೇ ಕರೆ ಮಾಡಿದರು’ ಎಂದು ದಿವಿತ್‌ ‘ಪ್ರಜಾವಾಣಿ’ಗೆ ತಿಳಿಸಿದ.
‘ಐದು ನಿಮಿಷ ನನ್ನ ಜತೆ ಮಾತನಾಡಿದ ಸಚಿವರು ಶಾಲೆಯ ವಿವರ ಪಡೆದರು. ಶಿಕ್ಷಕರನ್ನು ಬೇರೆಡೆ ನಿಯೋಜನೆ ಮಾಡುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದೂ ಹೇಳಿದೆ. ಅವರು ನನ್ನ ಮನವಿ ಕೇಳಿದ್ದಾರೆ. ನಮ್ಮ ಶಾಲೆ ಶಿಕ್ಷಕರನ್ನು ಬೇರೆ ಕಡೆ ಕಳುಹಿಸುವುದಿಲ್ಲ ಎಂಬ ವಿಶ್ವಾಸ ಇದೆ’ ಎಂದು ದಿವಿತ್‌ ವಿವರಿಸಿದ.

‘1ರಿಂದ 8ನೇ ತರಗತಿವರೆಗೆ ಇರುವ ಶಾಲೆಯಲ್ಲಿ 432 ವಿದ್ಯಾರ್ಥಿಗಳಿದ್ದಾರೆ. ಸದ್ಯ 15 ಮಂದಿ ಶಿಕ್ಷಕರಿದ್ದು, ಅದರಲ್ಲಿ ಒಬ್ಬರು ಮುಖ್ಯ ಶಿಕ್ಷಕರು, ಮತ್ತೊಬ್ಬರು ದೈಹಿಕ ಶಿಕ್ಷಕರು.  ಒಟ್ಟು 13 ತರಗತಿಗಳಿವೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಈ ಅನುಪಾತ ಸರಿ ಇದೆ.  ಅದರಲ್ಲಿ ನಾಲ್ವರು ಶಿಕ್ಷಕರನ್ನು ಬೇರೆ ಕಡೆ ಕಳುಹಿಸಿದರೆ ತೊಂದರೆ ಆಗುತ್ತದೆ’ ಎಂದು ದಿವಿತ್ ಸ್ಪಷ್ಟಪಡಿಸಿದ್ದಾನೆ.

ಪರಮೇಶ್ವರ್‌ ಜತೆ ದೂರವಾಣಿ ಯಲ್ಲಿ ಮಾತನಾಡಿದ ದಿವಿತ್‌ ಹಾರಾಡಿ ಶಾಲೆಯ ಗೃಹ ಮಂತ್ರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.