ADVERTISEMENT

ಹಸಿರಿಲ್ಲ, ನೀರಿಲ್ಲ, ಕಷ್ಟ ತೀರಿಲ್ಲ...

ಯತೀಶ್ ಕುಮಾರ್ ಜಿ.ಡಿ
Published 25 ಏಪ್ರಿಲ್ 2013, 15:34 IST
Last Updated 25 ಏಪ್ರಿಲ್ 2013, 15:34 IST
ಹಸಿರಿಲ್ಲ, ನೀರಿಲ್ಲ, ಕಷ್ಟ ತೀರಿಲ್ಲ...
ಹಸಿರಿಲ್ಲ, ನೀರಿಲ್ಲ, ಕಷ್ಟ ತೀರಿಲ್ಲ...   

ದೊಡ್ಡಬಳ್ಳಾಪುರ: `ನಮ್ಮ ಜಿಲ್ಲೆಲ್ಲಿ ಪ್ರತಿ ಮನೆಲೂ ಕೃಷಿಸಾಲ, ಐವತ್ತು ಮೀಟರ್‌ಗೊಂದು ಬೋರ್‌ವೆಲ್, ತಲೆಮೇಲೆ ಒಣಜಂಬ. ಇದೇ ಆಗೋಯ್ತು ನಮ್ಮ ಜನಕ್ಕೆ. ನಮ್ಮ ಜಿಲ್ಲೆ ತರಕಾರಿ ಬೆಂಗಳೂರಿಗೆ ಬೇಕು. ಆದ್ರೆ ನೀರು ಕೊಡಿಸುವ ದೊಡ್ಡಬುದ್ದಿ ರಾಜಕೀಯ ಮಾಡೋರಿಗೆ ಬರಲಿಲ್ಲ'

ಇದು ರಾಜ್ಯದ ರಾಜಧಾನಿ ಬೆಂಗಳೂರಿನ ಪಕ್ಕದಲ್ಲೇ ಇದ್ದರೂ ಬರ ಬಡಿದಂತೆ ಕಾಣುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕಮ್ಮಸಂದ್ರದ ಅರವತ್ತೈದು ವರ್ಷದ ಪೂಜಪ್ಪ ಹೇಳುವ ಮಾತು.

ಹೊಸಕೋಟೆಯಿಂದ ರಾಷ್ಟ್ರೀಯ ಹೆದ್ದಾರಿ 207ನಲ್ಲಿ ಹೊರಟರೆ ನೇರ ದೇವನಹಳ್ಳಿ, ದೊಡ್ಡಬಳ್ಳಾಪುರ ತಲುಪುತ್ತದೆ. ಹೆದ್ದಾರಿ ಮಾತ್ರ ಹೊಂಡವೂ ಇಲ್ಲದಂತೆ ಅದ್ಭುತವಾಗಿದೆ. ಇದು ಬಿಟ್ಟರೆ ಇದೇ ರಸ್ತೆಯಲ್ಲಿ ಬರುವ ಹಳ್ಳಿಗರಿಗೆ ಇನ್ಯಾವುದೇ ಮೂಲ ಸೌಲಭ್ಯ ಸಿಕ್ಕಂತೆ ಕಾಣುವುದಿಲ್ಲ. ಇದಕ್ಕೆ ಸೂಲಿಬೆಲೆಯಂತಹ ಹೋಬಳಿ ಕೇಂದ್ರವೂ ಹೊರತಾಗಿಲ್ಲ. ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಕೆಲ ಕೆರೆಗಳು ತುಂಬಿ 20 ವರ್ಷ ದಾಟಿವೆ. ಅಲ್ಲಿ ಕೆರೆಯ ಗೋಡುಮಣ್ಣು ಇಟ್ಟಿಗೆ ಮಾಡಲು ಬಳಕೆಯಾಗ್ತಿದೆ.

ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆಯವ ಕ್ಯಾರೆಟ್, ಹೂಕೋಸು, ಎಲೆಕೋಸು, ದ್ರಾಕ್ಷಿ, ಫಾರಂಕೋಳಿಗೆ ಬೆಂಗಳೂರೇ ದೊಡ್ಡ ಮಾರುಕಟ್ಟೆ. ನಿತ್ಯ ಇಲ್ಲಿಯ ಹಳ್ಳಿಗಳಿಂದ ಸಾವಿರಾರು ಟೆಂಪೋಗಳಲ್ಲಿ ತರಕಾರಿ ಬೆಂಗಳೂರಿನತ್ತ ಹೋಗುತ್ತದೆ. ತರಕಾರಿ ಬೆಲೆ ಗಗನಕ್ಕೆ ಏರುತ್ತಿದ್ದರೂ ಇಲ್ಲಿಯ ರೈತರೇನು ಕುಬೇರರಾಗಿಲ್ಲ. ನಷ್ಟದಲ್ಲೇ ದಿನ ನೂಕುತ್ತಿದ್ದಾರೆ.

ADVERTISEMENT

ಒಂದು ಕೊಳವೆಬಾವಿ ಕೈಕೊಟ್ಟರೂ ಪ್ರತಿಷ್ಠೆಗೆ ಕಟ್ಟುಬಿದ್ದು ಸಾಲ ಮಾಡಿ ಮತ್ತೊಂದು ಕೊಳವೆ ಬಾವಿ ಕೊರೆಸುವುದನ್ನು ಬಿಟ್ಟಿಲ್ಲ. ಹೀಗಾಗಿ ಒಂದು ತೋಟದಲ್ಲಿ ಐದಾರು ಕೊಳವೆ ಬಾವಿಗಳಿವೆ. ಅದರಲ್ಲಿ ನಾಲ್ಕರಲ್ಲಿ ನೀರೇ ಇರುವುದಿಲ್ಲ.

ದೊಡ್ಡಬಳ್ಳಾಪುರದ ಸಿದ್ಧ ಉಡುಪು ಉದ್ಯಮ, ರೇಷ್ಮೆ ಹಾಗೂ ಹೊಸಕೋಟೆಯ ವೋಲ್ವೊ ಕಾರ್ಖಾನೆ ಬಿಟ್ಟರೆ ದೊಡ್ಡ ಉದ್ಯಮಗಳು ಜಿಲ್ಲೆಗೆ ಬಂದಿಲ್ಲ. ಚಿಂತಾಮಣಿ ರಸ್ತೆಯಲ್ಲಿ ತಲೆಯೆತ್ತಬೇಕಿದ್ದ ವಿಶೇಷ ಕೈಗಾರಿಕಾ ವಲಯವೂ ಜನ ವಿರೋಧದಿಂದ ಸತ್ತೇ ಹೋಗಿದೆ. ಹೀಗಾಗಿ ನಿರುದ್ಯೋಗ ತಾಂಡವವಾಡುತ್ತಿದೆ.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುತ್ತಮುತ್ತಲ ಗ್ರಾಮದ ಭೂಮಿಯ ಬೆಲೆ ಗಗನಕ್ಕೆ ಏರಿದೆ. ಕೆಲ ರೈತರು ಭೂಮಿ ಮಾರಿ ಹಣ ಮಾಡಿಕೊಂಡಿದ್ದಾರೆ. ಆದರೆ ಕೃಷಿಯನ್ನೇ ನಂಬಿಕೊಂಡಿರುವ ರೈತರು ಒದ್ದಾಡುತ್ತಲೇ ಇದ್ದಾರೆ. ಹೀಗಾಗಿ ಇಡೀ ಜಿಲ್ಲೆಯಲ್ಲಿ ರಾಜಕೀಯದ ಮಾತಿಗಿಂತ ವ್ಯವಸಾಯದ ಮಾತೇ ಹೆಚ್ಚಾಗಿ ಕೇಳುತ್ತದೆ. ಯಾರನ್ನೂ ಮಾತಾಡಿಸಿದರೂ ರೈತರ ಕಷ್ಟ ನಷ್ಟವೇ ಮುಖ್ಯ ವಿಷಯವಾಗುತ್ತದೆ.

ಹೊಸಕೋಟೆಯಿಂದ ಕೊಂಚ ದೂರದಲ್ಲಿರುವ ಕಮ್ಮಸಂದ್ರದ ಕೆ.ಗೋಪಾಲ್ ದಾರಿಯಲ್ಲೇ ಸಿಕ್ಕರು. ಅವರೂ ಸಹ ಭೂಮಿಯ ಒಡೆಯ. ಕೃಷಿಕ. ಆದರೆ ಸಾಲಗಾರ. ಅವರು ಸಾಲ ಮಾಡಿದ್ದು ಕೃಷಿಗೆ ಹೊರತು ಮಜಾ ಮಾಡಲು ಅಲ್ಲ.

`ಕಳೆದ ವರ್ಷ ಐದು ಲಕ್ಷ ಖರ್ಚು ಮಾಡಿ 1250 ಅಡಿ ಆಳಕ್ಕೆ ಬೋರ್ ಕೊರೆಸಿ, ಮೋಟರ್ ಹಾಕಿಸಿದೆ. ಕ್ಯಾರೆಟ್, ಕೋಸು ಬೆಳೆದು ಒಂದಷ್ಟು ದುಡ್ಡು ಬಂತು. ಆ ಬೋರ್ ಫೇಲ್ ಆಯ್ತು. ಮೂರು ವರ್ಷದಲ್ಲಿ ಆರು ಬೋರ್ ಫೇಲ್ ಆಗದೆ. ಸಾಲ ಮಾಡೋದು ವ್ಯವಸಾಯಕ್ಕೆ ಹಾಕೋದು. ಕರೆಂಟ್ ಬೇರೆ ಸರಿಯಾಗಿ ಇರಲ್ಲ. ಅದಕ್ಕೆ ಕಾಯ್ತಾ ಕುತ್ಕೋಳೊದು. ಇಷ್ಟೇ ಆಗೈತೆ ನಮ್ಮ ಬದುಕು. ವ್ಯವಸಾಯ ಅಂದ್ರೆ ನಾ ಸಾಯ, ನಮ್ಮಪ್ಪ ಸಾಯ, ಮನೆ ಮಂದಿಯೆಲ್ಲಾ ಸಾಯ ಎನ್ನೋ ಗಾದೆ ಮತ್ತೆ ಮತ್ತೆ ನಿಜ ಆಯೈತೆ. ಮರ್ಯಾದೆ ಪ್ರಶ್ನೆ, ಕೂಲಿ ಮಾಡಂಗಿಲ್ಲ. ಬೇಸಾಯ ಬುಡಂಗಿಲ್ಲ' ಎನ್ನುತ್ತಾರೆ.

`ಆವಲಹಳ್ಳಿ ಫೀಡರ್ ಲೈನ್‌ನಿಂದ ಸುತ್ತಮುತ್ತ 24 ಗಂಟೆ ವಿದ್ಯುತ್ ಸಿಗುತ್ತೆ ಅನ್ನೋ ಸುದ್ದಿ ಹಬ್ಬಿತ್ತು. ಅದೂ ಸುಳ್ಳಾಯ್ತು. ಗಟ್ಟಿಗಿರೋರು ಕೂಲಿ ಮಾಡ್ತರೆ. ನಾವೋನು ಮಾಡೋದು. ತಿಂಗಳಿಗೆ ಅಷ್ಟೊ ಇಷ್ಟೋ ಅಂತ ಸರ್ಕಾರ ಕೊಡ್ತಿದ್ದ ದುಡ್ಡು ನಿಂತೋಗದೆ'. ಇದು ಹುಚ್ಚನಂಜಪ್ಪ ಅವರ ಮಾತು. ಇದೇ ರೀತಿಯ ಮಾತುಗಳು ಜಿಲ್ಲೆಯ ತುಂಬ ಕೇಳಿ ಬರುತ್ತಿವೆ.
ದೇವನಹಳ್ಳಿಯ ಸುತ್ತಲ ಭೂಮಿಗೆ ಪ್ರಖ್ಯಾತ ರಿಯಲ್ ಎಸ್ಟೇಟ್ ಕಂಪೆನಿಗಳು ಕೈಹಾಕಿವೆ. ಎಲ್ಲಿ ನೋಡಿದರಲ್ಲಿ ವಿಲ್ಲಾ, ಸೈಟ್‌ಗಳೇ. ಆದರೆ ಈ ಬಡಾವಣೆಗಳಲ್ಲಿ ಜನ ಮಾತ್ರ ಕಾಣೋದಿಲ್ಲ. ಬಹಳಷ್ಟು ರೈತರು ಭೂಮಿ ಮಾರಿಕೊಂಡಿದ್ದಾರೆ.

ಇಡೀ ಜಿಲ್ಲೆಯಲ್ಲಿ ನೀರಾವರಿಯಿಲ್ಲ. ವಿದ್ಯುತ್ ಕಣ್ಣುಮುಚ್ಚಾಲೆ. ಕುಡಿಯುವ ನೀರಿಗೂ ಭಾರಿ ಸಮಸ್ಯೆ. ಇಂತಹ ಕೆಟ್ಟ ಸ್ಥಿತಿಯಲ್ಲೂ ಕುಂದಣ ಹೋಬಳಿಯ ಜಾಲಗೆ ಗಾಮಸ್ಥರು ತೋಟಗಾರಿಕೆ, ಕೃಷಿ, ಹೈನು ಇವನ್ನೇ ನಂಬಿ ಭದ್ರವಾಗಿ ನಿಂತಿದ್ದಾರೆ. ವೆಂಕಟೇಗೌಡ, ಲೋಕೇಶ್ ಹಾಗೂ ನಾಗರಾಜು ಅವರಂತಹ ಕಾಂಗ್ರೆಸ್, ಜನತಾದಳ (ಎಸ್), ಬಿಜೆಪಿ ಪಕ್ಷದ ಕಾರ್ಯಕರ್ತರು ಜತೆಯಲ್ಲೇ ಓಡಾಡಿದರೂ ಪರಸ್ಪರ ದ್ವೇಷವಿಲ್ಲ. ರಾಜಕೀಯ ಬಿಸಿಯೂ ಹಳ್ಳಿಯಲ್ಲಿಲ್ಲ. ಇದೇ ವಾತಾವರಣ ಕೃಷಿಯನ್ನು ನಂಬಿರುವ ಅರದೇಶಹಳ್ಳಿಯಲ್ಲೂ. ಯಾವ ಪಕ್ಷದೋರು ಆರಿಸಿಬಂದ್ರೂ ಒಂದೇ.

ಗೆದ್ದವರು  ದುಡ್ಡು ಮಾಡಿಕೊಂಡು ಹೊಟ್ಟೆ ಬೆಳೆಸಿಕೊಳ್ಳುತ್ತಾರೆ ಅನ್ನುವ ಭಾವನೆಯಿದೆ. ಹೀಗಾಗಿ ಅಲ್ಲೂ ಕೃಷಿಯ ಮಾತೇ ಪ್ರಧಾನವಾಯಿತು.ಸಣ್ಣ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿದ್ದಾರೆ. ಎಲ್ಲಾ 1200 ಅಡಿಗಿಂತ ಹೆಚ್ಚು. ಊರ ಮುಂದೇ ಇರುವ ಜಾಲಗೆ ಕೆರೆ ತುಂಬಿ 30 ವರ್ಷ ಆಗಿದೆ. ಅದು ತುಂಬಿದ್ರೆ ಅಂತರ್ಜಲ ಮೇಲೆ ಬರುತ್ತದೆ ಅನ್ನುವುದು ಗ್ರಾಮಸ್ಥರಿಗೂ ಗೊತ್ತಿದೆ.

ಮಳೆ ಬಿದ್ದರೆ ತಾನೇ ಭೂಮಿಗೆ ನೀರು ಇಳಿಯೋದು. ಕೊಳವೆ ಬಾವಿ ಕೊರೆಯುವ ಲಾರಿ ಊರಿಗೆ ಬಂದರೆ ನಾಲ್ಕೈದು ಬಾವಿಗೆ ಬೇಡಿಕೆ ಬರುತ್ತದೆ ಎನ್ನುವುದು ಹಳ್ಳಿಯವರ ಮಾತು. ಕೃಷಿ ಕೈಕೊಟ್ಟರೂ ಇವರ ಬದುಕನ್ನು ಹಿಡಿದಿರುವುದು ಹೈನು. ಐದೇ ಕಿಲೋ ಮೀಟರ್ ದೂರದಲ್ಲಿ ದೊಡ್ಡಬಳ್ಳಾಪುರದ ಸಿದ್ಧ ಉಡುಪು ಘಟಕ ಇದ್ದರೂ ಸಹ ಅಲ್ಲಿಗೆ ಹೋಗುವವರ ಸಂಖ್ಯೆ ಕಡಿವೆು. ಇದಕ್ಕೆ ಕಾರಣ, ಸಂಬಳಕ್ಕೆ ಹೋಗುವುದಕ್ಕಿಂತ ಬೇಸಾಯ ಮಾಡೋಣ ಎನ್ನುವ ಛಲ. ಕೊಳವೆಬಾವಿ ತೋಡಿಯೇ ತರಕಾರಿ ಬೆಳೆಯುತ್ತಿದ್ದಾರೆ. ಈ ಗ್ರಾಮದಿಂದ ನಿತ್ಯ ಸುಮಾರು ಹತ್ತು ಟೆಂಪೊ ತರಕಾರಿ ಬೆಂಗಳೂರಿಗೆ ಹೋಗುತ್ತದೆ.

ಹೈನುಗಾರಿಕೆಯಿಂದ ಮಹಿಳೆಯರಲ್ಲಿ ಹಣ ಓಡಾಡುತ್ತಿದೆ. ಬೆಂಗಳೂರು ಡೇರಿ ಹಾಲಿನ ಖರೀದಿ ದರ ಹೆಚ್ಚಿಸಿದೆ. ಆದರೆ ಬೂಸಾ, ಮೇವಿನ ದರವನ್ನೂ ಏರಿಸಿದೆ. ಬೂಸಾ 50 ಕೆ.ಜಿಗೆ 850 ರೂಪಾಯಿ ಆಗಿದೆ. 30 ಕೆ.ಜಿ ಹಿಂಡಿಗೆ 1400 ರೂಪಾಯಿ. ಹಾಲಿನಿಂದ ಬರೋ ದುಡ್ಡು ಇದರಿಂದ ಅಲ್ಲಿಗಲ್ಲಿಗೆ ಆಗುತ್ತೆ. ಆದರೆ ಸಗಣಿಯಿಂದಾಗಿ ತೋಟಕ್ಕೆ ಗೊಬ್ಬರ ಆಗುತ್ತದೆ. ರೈತರಿಗೆ ಒಂದಿಷ್ಟು ಹಣ ಉಳಿಯುತ್ತದೆ.

ಹಳ್ಳಿಗೆ ಭೇಟಿ ನೀಡಿದಾಗ ಗ್ರಾಮದೇವರ ಹಬ್ಬಕ್ಕಾಗಿ ಸಿದ್ಧತೆ ನಡೆದಿತ್ತು. ಶಾಮಿಯಾನ, ಮೈಕ್ ಎಲ್ಲಾ ಸಿದ್ಧವಾಗಿತ್ತು. ಆದರೆ ಮೈಕಾಸುರ ಅರಚುತ್ತಿರಲಿಲ್ಲ. ಕಾರಣ ವಿದ್ಯುತ್ ಇರಲಿಲ್ಲ. ಬೆಂಗಳೂರಿಗೆ ಬೆಸ್ಕಾಂ 24 ಗಂಟೆ ವಿದ್ಯುತ್ ನೀಡುತ್ತಿದೆ. ಅಲ್ಲಿಂದ 50 ಕಿ.ಮೀ ದೂರದಲ್ಲಿರುವ ಜಾಲಗೆಯಲ್ಲಿ ಐದು ಗಂಟೆ ಮೂರು ಫೇಸ್, ಆರು ಗಂಟೆ ಒಂದು ಫೇಸ್ ವಿದ್ಯುತ್. ಉಳಿದಂತೆ ಪವರ್‌ಕಟ್! ಇಲ್ಲಿ ಯುಗಾದಿ ಹಬ್ಬದಂದೂ ವಿದ್ಯುತ್ ಇರಲಿಲ್ಲವಂತೆ. ರಾಮನವಮಿ ದಿನವೂ ಇದೇ ಕಥೆಯಂತೆ.

`ದೊಡ್ಡಬಳ್ಳಾಪುರದಲ್ಲಿ ಮಗ್ಗಕ್ಕೆ ಕರೆಂಟ್ ಕೊಡ್ತಾರೆ. ಅಪೆರಲ್ ಪಾರ್ಕ್‌ಗೆ ಕರೆಂಟ್ ಇರುತ್ತೆ. ರೈತ ಅಂದ್ರೆ ಸರ್ಕಾರಕ್ಕೆ ಅಷ್ಟಕ್ಕಷ್ಟೆ. ನಮಗೆ ಕರೆಂಟ್ ಪುಕ್ಸಟ್ಟೆ ಕೊಡಬೇಕು ಅಂತ ಆಟ ಆಡಿಸ್ತಾರೆ. ಆದರೆ ಕಾಸು ಕೊಡ್ತಾರೆ ಅಂತ  ಅವರಿಗೆ (ಕೈಗಾರಿಕೆ) ಕರೆಂಟ್ ಕೊಡ್ತಾರೆ. ವೋಟ್ ಕೇಳಕ್ಕೆ ಮಾತ್ರ ಹಳ್ಳಿಗೆ ಬರ್ತಾರೆ. ಊರ ಕೆರೆಲೂ ನೀರಿಲ್ಲ. ಭೂಮಿಲ್ಲೂ ನೀರಿಲ್ಲ. ಒಂದೆರಡು ತಿಂಗಳಲ್ಲಿ ಮಳೆ ಬೀಳದಿದ್ರೆ ನಮ್ಮ ಕಥೆ ಅಷ್ಟೇ'. ಇದು ವೆಂಕಟೇಶಗೌಡ ಅವರ ಅಭಿಪ್ರಾಯ.

ದೊಡ್ಡಬಳ್ಳಾಪುರ ಕೈಗಾರಿಕಾ ಕೇಂದ್ರವಾಗಿ ಬೆಳೆದಿದೆ ನಿಜ. ಕೈಗಾರಿಕಾ ಪ್ರದೇಶ, ಸಿದ್ಧ ಉಡುಪು ವಲಯದಿಂದ ಇಲ್ಲಿಯವರಿಗೆ ಸಾಕಷ್ಟು ಉದ್ಯೋಗ ದೊರಕಿದೆ. ಆದರೆ ಊರಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯವಿಲ್ಲ. ಊರ ಅಭಿವೃದ್ಧಿಯೂ ಆಗಿಲ್ಲ. ಕಸವಂತೂ ಕಣ್ಣಿಗೆ ರಾಚುತ್ತದೆ. ನೇಕಾರರೇ ಸಾಕಷ್ಟು ಸಂಖ್ಯೆಯಲ್ಲಿದ್ದರೂ ಆರ್.ಎಲ್.ಜಾಲಪ್ಪ ಕೇಂದ್ರ ಸಚಿವರಾಗಿದ್ದಾಗ ತಂದ ಸಿದ್ಧ ಉಡುಪು ವಲಯದಿಂದ ಇವರಿಗೆ ನೇರವಾಗಿ ಲಾಭವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾಲಪ್ಪ ಅವರ ಮಗ ಜೆ.ನರಸಿಂಹಸ್ವಾಮಿ ಅವರು ಗೆದ್ದಾಗ ಊರಿಗೆ ಜಕ್ಕಲಮಡುವಿನ ನೀರನ್ನು ತರುವೆ ಎಂದಿದ್ದರು. ಆದರೆ ಅವರ ಆಶ್ವಾಸನೆ ಹಾಗೇ ಉಳಿದಿದೆ ಎನ್ನುವ ಆಪಾದನೆ ಕೇಳುತ್ತದೆ.

ಮಂಚೇನಹಳ್ಳಿ ರಸ್ತೆಯಲ್ಲಿರುವ ಜಕ್ಕಲಮಡು ಕೆರೆ ತುಂಬಿ ಮುಂದೆ ಪಿನಾಕಿನಿಗೆ ಸೇರುತ್ತದೆ. ಇಲ್ಲಿಂದ ನೀರು ತರುವ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆತರೆ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ತಾಲ್ಲೂಕಿನ ಜನತೆಗೆ ಕುಡಿಯುವ ನೀರು ಸಿಗುತ್ತದೆ. ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿಯ ಜಲಾನಯನ ಪ್ರದೇಶದ ಒತ್ತುವರಿಯನ್ನು ತೆರವು ಮಾಡಿದ್ದರೆ ಚಿಕ್ಕಬಳ್ಳಾಪುರದ ಕೆರೆಗಳು ತುಂಬಿ ಒಣಗಿ ನಿಂತಿರುವ ಹೆಸರಘಟ್ಟ ಕೆರೆ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೂ ನೀರು ತರಬಹುದಿತ್ತು.

ಈ ಭಾಗದ ಸಂಸದರೂ ಆದ ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ ಅವರಿಗೆ ಈ ಯೋಜನೆಗೆ ಒಂದಿಷ್ಟು ಹಣ ತರಬಹುದಿತ್ತು. ಬೆಂಗಳೂರಿನ ಬಿಜೆಪಿ ಶಾಸಕರಾದ ಯಲಹಂಕದ ಎಸ್.ಆರ್.ವಿಶ್ವನಾಥ್, ದಾಸರಹಳ್ಳಿಯ ಎಸ್.ಮುನಿರಾಜು ಪಾದಯಾತ್ರೆ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಬದಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದರೆ ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಉತ್ತರ ಭಾಗಕ್ಕೆ ಕುಡಿಯುವ ನೀರು ದೊರಕುತ್ತಿತ್ತು ಎನ್ನುವ ಭಾವನೆ ಸ್ಥಳೀಯರಲ್ಲಿದೆ.

ಯಾವುದೇ ಪಕ್ಷಗಳು ಏನೇ ಆಮಿಷ ಒಡ್ಡಿದರೂ, ಏನೇ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದರೂ ವಿದ್ಯುತ್, ಕುಡಿಯುವ ನೀರು, ನೀರಾವರಿ, ಅಂತರ್ಜಲ ಕುಸಿತ, ಶಾಶ್ವತ ನೀರಾವರಿ ಯೋಜನೆಯಂತಹ ಕಾರ್ಯಕ್ರಮಗಳು ಬಾರದಿದ್ದರೆ ಹಸಿರು ನಳನಳಿಸಿ ರೈತರ ಮುಖದಲ್ಲಿ ನಗು ಅರಳುವುದೇ ಇಲ್ಲ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.