ADVERTISEMENT

ಹಿರಿಯ ಸಾಹಿತಿ ಚಿತ್ತಾಲ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 20:05 IST
Last Updated 22 ಮಾರ್ಚ್ 2014, 20:05 IST

ಮುಂಬೈ: ಕನ್ನಡದ ಹಿರಿಯ ಸಾಹಿತಿ ಯಶ­ವಂತ ಚಿತ್ತಾಲ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ತೀವ್ರ ಅನಾರೋಗ್ಯದಿಂದ ಬಳಲು­ತ್ತಿದ್ದ  ಅವರು, ಕಳೆದ ನಲವತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದರು. ಭಾನುವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ತಮ್ಮ ಕಥೆ ಕಾದಂಬರಿಗಳ ಮೂಲಕ ಕನ್ನಡದ ಸಾಹಿತ್ಯದ ಸಾಧ್ಯತೆಗಳನ್ನು ವಿಸ್ತರಿಸಿದ್ದು, ಯಶವಂತ ಚಿತ್ತಾಲರ ಪ್ರಮುಖ ಸಾಧನೆ.

ಕೊಂಕಣಿ – ಮರಾಠಿಯನ್ನು ಮನೆ­ಮಾತಾಗಿ ಹೊಂದಿದ್ದ ಅವರು ತಮ್ಮ ಅಭಿವ್ಯಕ್ತಿ ಭಾಷೆಯನ್ನಾಗಿ ಆರಿಸಿ­ಕೊಂಡಿದ್ದು ಕನ್ನಡವನ್ನು. ಉತ್ತರಕನ್ನಡ ಜಿಲ್ಲೆಯ ಹನೇಹಳ್ಳಿ ಚಿತ್ತಾಲರ ಹುಟ್ಟೂರು. ವಿಠೋಬಾ ಮತ್ತು ರುಕ್ಮಿಣಿ ಅವರ ತಂದೆ, ತಾಯಿ. ದಿವಂಗತ ಕವಿ ಗಂಗಾಧರ ಚಿತ್ತಾಲರು ಅವರ ಸಹೋದರ.

ಯಶವಂತ ಚಿತ್ತಾಲರ ಪ್ರಾಥಮಿಕ ವಿದ್ಯಾಭ್ಯಾಸ ನಡೆದಿದ್ದು ಹನೇಹಳ್ಳಿ ಮತ್ತು ಕುಮಟಾದಲ್ಲಿ. ಮುಂಬೈ ಮತ್ತು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಪಡೆದ ಅವರು ರಾಸಾ­ಯನಿಕ ತಂತ್ರ­ಜ್ಞರಾಗಿ ಹಲವು ಹುದ್ದೆ­ಗಳಲ್ಲಿ ಕಾರ್ಯ­ನಿರ್ವಹಿಸಿದ್ದಾರೆ.

ವೃತ್ತಿಯಲ್ಲಿನ ಅನುಭವಗಳನ್ನು, ಆಧುನಿಕ ಕೈಗಾರಿಕಾ ಜಗತ್ತಿನ ಕುರಿತ ತಮ್ಮ ವಿಶೇಷ ಒಳನೋಟಗಳನ್ನು ಸಾಹಿತ್ಯ ಕೃತಿಗಳನ್ನು ಮೂಡಿಸಿದ್ದಾರೆ. ಹನೇಹಳ್ಳಿ ಮತ್ತು ಮುಂಬೈ ಅವರ ಸಾಹಿತ್ಯ ಸೃಷ್ಟಿಯ ಪ್ರಮುಖ ದ್ರವ್ಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT