ADVERTISEMENT

ಹುಬ್ಬಳ್ಳಿಯಲ್ಲಿ ‘ಫಿಲ್ಮ್‌ ಸಿಟಿ’ ಸ್ಥಾಪನೆಯಾಗಲಿ: ನಾಗಾಭರಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 20:29 IST
Last Updated 22 ಜನವರಿ 2017, 20:29 IST
ಹುಬ್ಬಳ್ಳಿಯಲ್ಲಿ ‘ಫಿಲ್ಮ್‌ ಸಿಟಿ’ ಸ್ಥಾಪನೆಯಾಗಲಿ: ನಾಗಾಭರಣ
ಹುಬ್ಬಳ್ಳಿಯಲ್ಲಿ ‘ಫಿಲ್ಮ್‌ ಸಿಟಿ’ ಸ್ಥಾಪನೆಯಾಗಲಿ: ನಾಗಾಭರಣ   

ಹುಬ್ಬಳ್ಳಿ: ‘ಉತ್ತರ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಹುಬ್ಬಳ್ಳಿಯಲ್ಲಿ  ಅತ್ಯಾಧುನಿಕ ‘ಫಿಲ್ಮ್‌  ಸಿಟಿ’ ಸ್ಥಾಪಿಸುವಂತೆ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

‘ಫೆಬ್ರುವರಿಯಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಹುಬ್ಬಳ್ಳಿಗೆ ‘ಫಿಲ್ಮ್‌ ಸಿಟಿ’ ಘೋಷಣೆ ಮಾಡಿಸಬೇಕು ಹಾಗೂ ಅಗತ್ಯ ಅನುದಾನ ಮೀಸಲಿಡಲು ಸಂಸದ ಪ್ರಹ್ಲಾದ ಜೋಶಿ ಪ್ರಯತ್ನಿಸಬೇಕು’ ಎಂದು ಅವರು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉತ್ತರ ಕರ್ನಾಟಕ ಸಾಕಷ್ಟು ಬೆಳೆದಿದೆ. ಹುಬ್ಬಳ್ಳಿ ಕೇಂದ್ರಿತವಾಗಿ ಫಿಲ್ಮ್‌ ಸಿಟಿ ಆರಂಭವಾದರೆ ಈ ಭಾಗವು ಔದ್ಯೋಗಿಕವಾಗಿ ಮತ್ತಷ್ಟು ಪ್ರಗತಿ ಹೊಂದುತ್ತದೆ. ಈ ಭಾಗದ ಯುವಜನರಿಗೆ ಹೆಚ್ಚು ಅವಕಾಶಗಳು ಲಭಿಸಲಿವೆ’ ಎಂದು ಹೇಳಿದರು.

ADVERTISEMENT

‘ಬೆಂಗಳೂರು ಕೇಂದ್ರಿತವಾಗಿ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಇಂದು ಕೋಟ್ಯಂತರ ರೂಪಾಯಿ ಹಣ ತೊಡಗಿಸಲಾಗುತ್ತಿದೆ. ಆದರೆ, ಅಲ್ಲಿ ಉತ್ತರ ಕರ್ನಾಟಕದ ಕಲಾವಿದರು ಸ್ಥಿರವಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ತಕ್ಕ ಪಾತ್ರಗಳು, ಸಂಭಾವನೆ ಸಿಗುತ್ತಿಲ್ಲ, ಇದು ಬೇಸರದ ಸಂಗತಿ’ ಎಂದರು.

2 ಸಾವಿರ ಎಕರೆ: ‘ಎಂ.ಜಿ.ಆರ್‌. ಫಿಲ್ಮ್‌ ಸಿಟಿ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಎರಡು ಸಾವಿರ ಎಕರೆ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಫಿಲ್ಮ್‌ ಸಿಟಿ ಸ್ಥಾಪಿಸಲು ಸಂಸದ ಪ್ರಹ್ಲಾದ ಜೋಶಿ ಮುಂದಾಗಬೇಕು’ ಎಂದು ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ, ಮಹಾನಗರ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಮನವಿ ಮಾಡಿದರು.

ನಾಗರಾಜ ಗಂಜಿಗಟ್ಟಿ, ಯಲ್ಲಪ್ಪ ಕುಂದಗೋಳ,ಮಲ್ಲೇಶಪ್ಪ ಮಾಯಣ್ಣವರ, ಚಂದ್ರಣ್ಣ ಗೋಕಾಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಹುಬ್ಬಳ್ಳಿಯಲ್ಲಿ ಫಿಲ್ಮ್‌ ಸಿಟಿ ಆರಂಭಕ್ಕೆ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಸೇರಿಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು
ಟಿ.ಎಸ್‌.ನಾಗಾಭರಣ
ಸಿನಿಮಾ ನಿರ್ದೇಶಕ

‘ಅಲ್ಲಮ’ ಸಿನಿಮಾ

‘ಯಾರಿಗೂ ಅವಮಾನ ಮಾಡದೇ, ವಿವಾದಕ್ಕೆ ಎಡೆ ಇಲ್ಲದಂತೆ ಸತತ ಮೂರು ವರ್ಷ ಶ್ರಮವಹಿಸಿ ‘ಅಲ್ಲಮ’ ಸಿನಿಮಾ ಮಾಡಲಾಗಿದೆ. ಈ ಬಗ್ಗೆ ಅನಗತ್ಯ ಗೊಂದಲ, ಆರೋಪ ಮಾಡುವ ಮೊದಲು ಸಿನಿಮಾ ನೋಡಿದ ಬಳಿಕ ನನ್ನೊಂದಿಗೆ ಸಂವಾದ ನಡೆಸಿ’ ಎಂದು ಅವರು ವಿನಂತಿ ಮಾಡಿದರು.
‘ಅಲ್ಲಮ’ ಸಿನಿಮಾವನ್ನು ನನಗೆ ತಿಳಿದ ಹಾಗೆ ಮಾಡಿದ್ದೇನೆ. ಒಂದು ವೇಳೆ ಇಷ್ಟವಾಗದಿದ್ದರೇ ನಿಮಗೆ ಬೇಕಾದ ರೀತಿಯಲ್ಲಿ ಅಲ್ಲಮ ಕುರಿತು ಸಿನಿಮಾ ಮಾಡಿ, ಅಭ್ಯಂತರವಿಲ್ಲ’ ಎಂದರು. ನಟ ಧನಂಜಯ್‌ ಮಾತನಾಡಿ, ‘ಅಲ್ಲಮ’ ಸಿನಿಮಾದ ಪ್ರಥಮ ಪ್ರದರ್ಶನವನ್ನು ಹುಬ್ಬಳ್ಳಿಯ ಸಂಜೋತಾ ಚಿತ್ರಮಂದಿರಲ್ಲಿ ಪ್ರೇಕ್ಷಕರೊಂದಿಗೆ ವೀಕ್ಷಣೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.