ADVERTISEMENT

ಹುಬ್ಬಳ್ಳಿ: ಮುಖ್ಯಮಂತ್ರಿ ಮನೆಯಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:56 IST
Last Updated 27 ಮೇ 2018, 19:56 IST
ಹುಬ್ಬಳ್ಳಿಯ ಬೈರಿದೇವರಕೊಪ್ಪದ ಮಾಯಕಾರ ಕಾಲೊನಿಯಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮನೆ ‘ಏಕದಂತ ಕೃಪಾ’ (ಸಂಗ್ರಹ ಚಿತ್ರ)
ಹುಬ್ಬಳ್ಳಿಯ ಬೈರಿದೇವರಕೊಪ್ಪದ ಮಾಯಕಾರ ಕಾಲೊನಿಯಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮನೆ ‘ಏಕದಂತ ಕೃಪಾ’ (ಸಂಗ್ರಹ ಚಿತ್ರ)   

ಹುಬ್ಬಳ್ಳಿ: ಇಲ್ಲಿನ ಬೈರಿದೇವರಕೊಪ್ಪದ ಮಾಯಕಾರ ಕಾಲೊನಿಯಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬಾಡಿಗೆ ಮನೆ ‘ಏಕದಂತ ಕೃಪಾ’ದಲ್ಲಿ, ಭಾನುವಾರ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.

ಕುಮಾರಸ್ವಾಮಿ ಅವರ ಆಪ್ತರೂ ಆಗಿರುವ ಮನೆಯ ಮಾಲೀಕ ಸುರೇಶ ರಾಯರೆಡ್ಡಿ (ಮಾಜಿ ಸಚಿವ, ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಅವರ ಸಹೋದರ) ನೇತೃತ್ವದಲ್ಲಿ ಬೆಳಿಗ್ಗೆ ಪೂಜಾ ಕೈಂಕರ್ಯಗಳು ನಡೆದವು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸುರೇಶ ರಾಯರೆಡ್ಡಿ, ‘ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಲಿ ಎಂಬ ಆಶಯದೊಂದಿಗೆ ಹಾಗೂ ಯಾವುದೇ ವಿಘ್ನಗಳು ಬಾರದಿರಲಿ ಎಂದು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ’ ಎಂದರು.

ADVERTISEMENT

‘ಒಂದೂವರೆ ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ಮನೆ ಮಾಡುವ ಸಂಬಂಧ ಅವರು ಹಾಗೂ ಅವರ ಆಪ್ತರು, ಹತ್ತಾರು ಮನೆಗಳನ್ನು ಹುಡುಕಿದರು. ಯಾವೊಂದು ಮನೆಯೂ ಸರಿಹೊಂದಲಿಲ್ಲ. ಕೊನೆಗೆ ವಾಸ್ತು ಪ್ರಕಾರವಿರುವ ನಮ್ಮ ಮನೆಯನ್ನು ಆಯ್ಕೆ ಮಾಡಿಕೊಂಡರು. ಇದೀಗ ಅವರು ಮುಖ್ಯಮಂತ್ರಿಯೂ ಆಗಿರುವುದರಿಂದ ಈ ಭಾಗದ ಜನರಿಗೆ ಬಹಳ ಖುಷಿಯಾಗಿದೆ’ ಎಂದು ಹೇಳಿದರು.

‘ಸಚಿವ ಸಂಪುಟ ವಿಸ್ತರಣೆ ಬಳಿಕ ಹುಬ್ಬಳ್ಳಿಗೆ ಬರುವುದಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಈ ಭಾಗಕ್ಕೆ ಬಂದಾಗ ಜನಸಂಪರ್ಕ ಸಭೆಯನ್ನು ಇದೇ ಮನೆಯಲ್ಲಿ ಮಾಡುವಂತೆ ಅವರನ್ನು ಕೋರಿದ್ದು, ಇದಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ’ ಎಂದರು.

‘ಮನೆಯನ್ನು ಎಚ್‌.ಡಿ.ಕುಮಾರಸ್ವಾಮಿ ಅವರ ವಸತಿ ಮತ್ತು ಕಾರ್ಯಾಲಯಕ್ಕಾಗಿ ನೀಡಿರುವುದು ನಿಜ. ಹಾಗಂತ ಅವರಿಂದ ನಾವು ಬಾಡಿಗೆ ಹಣವನ್ನು ಪಡೆದಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಅವರಿಂದ ಉತ್ತಮ ಕೆಲಸಗಳಾದರೆ ಅದೇ ನಮಗೆ ಬಾಡಿಗೆ ಕೊಟ್ಟಂತೆ’ ಎಂದರು.

‘ರೈತ ಪರ ಕಾಳಜಿ ಇರುವ ಅವರು ರೈತರ ಸಾಲಮನ್ನಾ ಮಾಡುವುದಾಗಿ ಹೇಳಿರುವುದು ನಮಗೆ ಖುಷಿಯಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.