ADVERTISEMENT

ಹುಲಿ ಅರಣ್ಯದಲ್ಲಿ ಅಕ್ರಮ ಕಾಮಗಾರಿ

ಲೋಕೋಪಯೋಗಿ ಇಲಾಖೆ ವಿರುದ್ಧ ಕ್ರಮಕ್ಕೆ ಹುಲಿ ಪ್ರಾಧಿಕಾರದ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ಬೆಂಗಳೂರು: ‌ದಾಂಡೇಲಿ–ಅಣಶಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪೂರ್ವಾನುಮತಿ ಪಡೆಯದೆ ಸಾಕಳಿ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುವ ಕಾಮಗಾರಿ ಆರಂಭಿಸಿದ್ದ ಲೋಕೋಪಯೋಗಿ ಇಲಾಖೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ಅವರಿಗೆ ಸೂಚಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಬಾರಗದ್ದಾ ಸಮೀಪ ಹರಿಯುವ ಸಾಕಳಿ ಹಳ್ಳವು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾರವಾರ ಪ್ರಾದೇಶಿಕ ವಿಭಾಗ ಎರಡನ್ನೂ ಪ್ರತ್ಯೇಕಿಸುತ್ತದೆ. ಈ ಹಳ್ಳಕ್ಕೆ ಅಡ್ಡಲಾಗಿ ಸೇತುವೆಯನ್ನು ಕಟ್ಟಲು ನಿರ್ಧರಿಸಿದ ಲೋಕೋಪಯೋಗಿ ಇಲಾಖೆಯು ಕಳೆದ ವರ್ಷವೇ  ಟೆಂಡರ್‌ ಪ್ರಕ್ರಿಯೆ ಪೂರೈಸಿ ಕಾಮಗಾರಿಯನ್ನು ಗುತ್ತಿಗೆ ನೀಡಿತ್ತು. 

ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆ ಯಾದ ಮೇಲೆ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸಿದ್ದರು. ಸುಮಾರು 9 ಮೀಟರ್‌ ಅಗಲ, 3.5 ಮೀ ಎತ್ತರ ಹಾಗೂ ಒಂದು ಮೀ ದಪ್ಪದ ಎರಡು ಕಾಂಕ್ರೀಟ್ ಹಡಗುಕಟ್ಟೆ ಹಾಗೂ ಪ್ರವೇಶ ಮೆಟ್ಟಿಲೇಣಿಗಳನ್ನು ಕಾರವಾರ ಪ್ರಾದೇಶಿಕ ವಿಭಾಗ ವ್ಯಾಪ್ತಿಯಲ್ಲಿ (ಹಳ್ಳದ ಪಶ್ಚಿಮ ಭಾಗ) ನಿರ್ಮಿಸಲಾಯಿತು. ಅಲ್ಲದೇ ಸೇತುವೆಗೆ ಅಡಿಪಾಯ ಹಾಕಲು ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹಳ್ಳದ ಪೂರ್ವ ಭಾಗದಲ್ಲಿ ಸಡಿಲ ಬಂಡೆ ಹಾಗೂ ಕೆಸರನ್ನು ತೆರವುಗೊಳಿಸಲಾಗಿತ್ತು. 

ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಇಲ್ಲದೆ ಕಾಮಗಾರಿ ಆರಂಭಿಸಿದ್ದ ಲೋಕೋಪಯೋಗಿ ಇಲಾಖೆಯ ವಿರುದ್ಧ ವನ್ಯಜೀವಿ ಕಾರ್ಯಕರ್ತರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ದೂರು ಸಲ್ಲಿಸಿದ್ದರು.

ಸ್ಥಳ ಪರಿಶೀಲನೆ ಮಾಡಿದ ಪ್ರಾಧಿಕಾರದ ದಕ್ಷಿಣ ವಲಯ ಅರಣ್ಯ ಮಹಾ ನಿರೀಕ್ಷಕ ಪಿ.ಎಸ್. ಸೋಮಶೇಖರ್ ಅವರು ಸೇತುವೆ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು. ಅಲ್ಲದೆ ಕಾಮಗಾರಿ ಕೈಗೊಳ್ಳಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವ ಸಲ್ಲಿಸಿ ಒಪ್ಪಿಗೆ ಪಡೆಯಬೇಕು ಎಂದು ಸೂಚಿಸಿದ್ದರು. ಗೋಟೆಗಾಳಿ ಹಾಗೂ ಗೋಯರ ಗ್ರಾಮಗಳ ನಡುವೆ ನಡೆಯುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸಹ ಮುಂದುವರೆಸದಂತೆ ತಿಳಿಸಿದ್ದರು.

ಸ್ಥಳ ಪರಿಶೀಲನೆ ಮಾಡಿದ್ದ ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್. ಮೂರ್ತಿ ಅವರು ಸಹ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು, ಅರಣ್ಯ ಪಡೆ) ಅವರಿಗೆ ವರದಿ ಸಲ್ಲಿಸಿದ್ದು, ಕಾಮಗಾರಿಯಲ್ಲಿ 1980 ರ ಅರಣ್ಯ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದರು.

ಎರಡೂ ವರದಿಗಳನ್ನು ಪರಿಶೀಲಿಸಿದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಉಪ ಅರಣ್ಯ ಮಹಾ ನಿರೀಕ್ಷಕ ಸಂಜಯ್ ಕುಮಾರ್ ಅವರು, ಲೋಕೋಪಯೋಗಿ ಇಲಾಖೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ವನ್ಯಜೀವಿ ಸಂರಕ್ಷಣಾಧಿ
ಕಾರಿ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ವರ್ಷವೂ ಹುಲಿ ಕಾಡಿನಲ್ಲಿ ಅನಧಿಕೃತವಾಗಿ ರಸ್ತೆ ಹಾಗೂ ಪೈಪ್ ಲೈನ್ ಕಾಮಗಾರಿಗಳನ್ನು ಕೈಗೊಂಡಿರುವ ಕುರಿತು ಪರಿಶೀಲನೆ ನಡೆಸಿದ್ದ ಪ್ರಾಧಿಕಾರ, ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಸುಪ್ರೀಂ ಕೋರ್ಟ್‌ ಆದೇಶ ಹಾಗೂ ಪ್ರಾಧಿಕಾರದ ಸಲಹೆಗಳನ್ನು ಮೀರಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ‘ಗುಂದ್ ವನ್ಯಜೀವಿ ವಲಯದ ಶಿವಪುರ ಎಂಬಲ್ಲಿ ದೊಡ್ಡದಾದ ತೂಗು ಸೇತುವೆಯನ್ನೂ ಯಾವುದೇ ಅನುಮತಿ ಇಲ್ಲದೆ ಕಟ್ಟಲಾಗಿದೆ. ಈ ಕುರಿತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಗೆ ದೂರನ್ನು ಸಹ ನೀಡಲಾಗಿತ್ತು.

ಆದರೆ ತೂಗು ಸೇತುವೆ ಉದ್ಘಾಟನೆ ನೆರವೇರಿ ಕಾರ್ಯಾರಂಭ ಮಾಡಿದ್ದರೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ವನ್ಯಜೀವಿ ಕಾರ್ಯಕರ್ತರು. ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರಂತರವಾಗಿ ಅನಧಿಕೃತ ಕಾಮಗಾರಿಗಳು ನಡೆಯುತ್ತಿವೆ. ಅಂತಹ ಚಟುವಟಿಕೆಗಳ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ಕೇಂದ್ರೀಯ ಉನ್ನತಾಧಿಕಾರ ಸಮಿತಿಗೆ ದೂರನ್ನು ನೀಡಲಾಗಿದೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.