ADVERTISEMENT

ಹೆಂಡತಿ ಕೊಲೆ ಮಾಡಿಸಿದ ಪಿಎಸ್‌ಐ ಬಂಧನ

ಕೊಲೆಯಲ್ಲಿ ಅಮ್ಮ, ಸ್ನೇಹಿತನೂ ಭಾಗಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2016, 19:38 IST
Last Updated 10 ಜೂನ್ 2016, 19:38 IST

ಚೇಳೂರು/ ತುಮಕೂರು: ಹೊಸದುರ್ಗ ಪಿಎಸ್‌ಐ ಗಿರೀಶ್‌ ಪತ್ನಿ ಪ್ರಫುಲ್ಲಾ ಕೊಲೆ ಪ್ರಕರಣ ಭೇದಿಸಿರುವ ಪೊಲೀಸ್‌ ವಿಶೇಷ ತಂಡ ಪಿಎಸ್‌ಐ ಗಿರೀಶ್‌, ಪ್ರಫುಲ್ಲಾ ಅವರ ತಾಯಿ ಮಹಾದೇವಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ ಅವರನ್ನು ಶುಕ್ರವಾರ ಬಂಧಿಸಿದೆ.

ಜೂನ್‌ 4ರಂದು ಗುಬ್ಬಿ ತಾಲ್ಲೂಕು ಸಂಗನಹಳ್ಳಿಯ ಭೋವಿ ಕಾಲೋನಿ ಬಳಿ ಪ್ರಫುಲ್ಲಾ (26) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯನೂ ಆಗಿರುವ ಚಿದಾನಂದ ಅವರ ಮನೆಯಲ್ಲಿ ಪ್ರಫುಲ್ಲಾ  ಊಟ ಮಾಡಿಕೊಂಡು ವಾಪಸ್‌ ಹೋಗುವಾಗ ಕೊಲೆ ನಡೆದಿತ್ತು.

ಕಾರಣ: ಗಂಡ–ಹೆಂಡತಿ ಹಾಗೂ ಅಮ್ಮ– ಮಗಳ ನಡುವಿನ ಜಗಳವೇ ಕೊಲೆಗೆ ಕಾರಣವಾಗಿದೆ. ಗಂಡ ಮತ್ತು ಅಮ್ಮನೊಂದಿಗೆ ಪ್ರಫುಲ್ಲಾ ಯಾವಾಗಲೂ ಜಗಳ ಮಾಡುತ್ತಿದ್ದರು. ಇದರಿಂದ ಇಬ್ಬರೂ ಬೇಸತ್ತಿದ್ದರು ಎನ್ನಲಾಗಿದೆ. 

ಗಿರೀಶ್‌ ಅವರು ಅತ್ತೆ ಮಹಾದೇವಮ್ಮ ಅವರೊಂದಿಗೆ ಸಲುಗೆಯಿಂದ ಇದ್ದರು. ಇದೇ ಕಾರಣಕ್ಕಾಗಿ ಪ್ರಫುಲ್ಲಾ ಅವರು ಗಂಡನೊಟ್ಟಿಗೆ ಜಗಳವಾಡುತ್ತಿದ್ದರು. ಎರಡು ತಿಂಗಳ ಹಿಂದೆ ಗಂಡ– ಹೆಂಡತಿ ನಡುವೆ ಜಗಳ ವಿಕೋಪಕ್ಕೆ ಹೋಗಿತ್ತು. ಒಂದು ದಿನ ಠಾಣೆಗೆ ಹೋದ ಪ್ರಫುಲ್ಲಾ ಗಂಡನ ಬಟ್ಟೆ ಹಿಡಿದು ಜಗಳವಾಡಿದ್ದರು.

ಆಗ ಸ್ಥಳದಲ್ಲಿದ್ದ ಪೊಲೀಸರು ಜಗಳ ಬಿಡಿಸಿದ್ದರು. ಇದಾದ ನಂತರ ಅವರು ತವರು ಮನೆ ಗುಬ್ಬಿಯ ಸಂಗನಹಳ್ಳಿಗೆ  ಹಿಂದಿರುಗಿದ್ದರು.
‘ಸಂಗನಹಳ್ಳಿಯಲ್ಲಿ ನನ್ನೊಂದಿಗೂ ಜಗಳ ಮಾಡುತ್ತಿದ್ದಳು. ಬೆಂಕಿ ಹಚ್ಚಿ ಕೊಲೆ ಮಾಡುವ ಪ್ರಯತ್ನ ಕೂಡ ನಡೆಸಿದ್ದಳು.

ಇದರಿಂದ ಬೇಸತ್ತು ಕೊಲೆ ಮಾಡಲು ಅಳಿಯನಿಗೆ ಸಹಕರಿಸಿದೆ’  ಎಂದು ಮಹಾದೇವಮ್ಮ  ವಿಚಾರಣೆ ವೇಳೆ  ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಿದಾನಂದ ಪಾತ್ರ: ಪ್ರಫುಲ್ಲಾ ಹಾಗೂ ಚಿದಾನಂದ ಒಂದೇ ಗ್ರಾಮದವರಾದ ಕಾರಣ ಆತ್ಮೀಯತೆ ಇತ್ತು. ಚಿದಾನಂದ ಕುಟುಂಬ ಸ್ನೇಹಿತರಾಗಿದ್ದರು.
ಹೀಗಾಗಿ ಗಂಡನ ಮನೆಯಿಂದ ಊರಿಗೆ ಹಿಂತಿರುಗಿದ ಬಳಿಕ ಚಿದಾನಂದ ಮನೆಯಲ್ಲೇ ಪ್ರಫುಲ್ಲಾ ಊಟ,ತಿಂಡಿಗೆ ಹೋಗುತ್ತಿದ್ದರು. ಪ್ರಫುಲ್ಲಾ ತವರಿಗೆ ಬಂದ ಬಳಿಕ ತಾಯಿ ಮಹಾದೇವಮ್ಮ ಅವರು ಬೆಂಗಳೂರಿನ ತನ್ನ ಇನ್ನೊಬ್ಬ ಮಗಳ ಮನೆಗೆ ತೆರಳಿದ್ದರು.

ಚಿದಾನಂದ ಮನೆಯಲ್ಲಿ ಮಗಳು ಊಟ,ತಿಂಡಿಗೆ ಹೋಗುತ್ತಿರುವುದು ಗೊತ್ತಾದ ಬಳಿಕ ಚಿದಾನಂದ ಅವರನ್ನು ಕೊಲೆಗೆ ಬಳಸಿಕೊಳ್ಳಲು ಅಳಿಯ, ಅತ್ತೆ ನಿರ್ಧರಿಸಿ ಕೊಲೆ ಸಂಚು ರೂಪಿಸಿದ್ದಾರೆ ಎಂದು ತನಿಖೆಯಲ್ಲಿದ್ದ ಪೊಲೀಸರೊಬ್ಬರು ತಿಳಿಸಿದರು.

ಕೊಲೆ ಮಾಡಿದ ಬಳಿಕ  ಗೊತ್ತಾಗದಂತೆ ನೋಡಿಕೊಳ್ಳುವುದಾಗಿ ಪಿಎಸ್‌ಐ ಗಿರೀಶ್‌ ಅಭಯ ನೀಡಿದ್ದರು. ಹೀಗಾಗಿ ಕೊಲೆ ಮಾಡಿದೆ ಎಂದು ಚಿದಾನಂದ ವಿಚಾರಣೆ ವೇಳೆ ತಿಳಿಸಿದ್ದಾನೆ. ಕೊಲೆ ದಿನ ಚಿದಾನಂದ, ಪ್ರಫುಲ್ಲಾ ಅವರಿಗೆ ತಮ್ಮ ಮನೆಯಲ್ಲೇ ಊಟ ಮಾಡಿಸಿದ್ದಾರೆ. ನಂತರ ಅವರು ಮನೆಗೆ ಹೋಗುವಾಗ ಹಿಂದಿನಿಂದ  ಹೋಗಿ ಮಚ್ಚಿನಿಂದ  ಹೊಡೆದು ಕೊಲೆ ಮಾಡಿದ್ದಾನೆ.

ಮೊದಲ ಪತ್ನಿಗೆ ವಿಚ್ಛೇದನ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಬೀರನಹಳ್ಳಿ ಗ್ರಾಮದವರಾದ ಗಿರೀಶ್‌ ಮೊದಲ ಹೆಂಡತಿಗೆ  ವಿಚ್ಛೇದನ ನೀಡಿದ್ದರು. ಬಳಿಕ ಪ್ರಫುಲ್ಲಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಐದು ವರ್ಷದ ಗಂಡು ಮಗುವಿದೆ.

ಫಿನಾಯಿಲ್‌ ಕುಡಿದ ಗಿರೀಶ್‌
ಗುರುವಾರ ಚೇಳೂರು ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ವೇಳೆ ಶೌಚಕ್ಕೆ ಹೋಗುವುದಾಗಿ ಶೌಚಾಲಯಕ್ಕೆ ಹೋದ ಗಿರೀಶ್‌, ಅಲ್ಲಿದ್ದ ಫಿನಾಯಿಲ್‌ ಕುಡಿದು ಅಸ್ವಸ್ಥರಾಗಿದ್ದರು. ಅವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ಕೊಲೆ ಆರೋಪಿ ಚಿದಾನಂದ ಕೊಲೆಗೆ ಬಳಸಿದ್ದ ಮಚ್ಚನ್ನು ಕೊಲೆ ಮಾಡಿದ ಸ್ವಲ್ಪ ದೂರದಲ್ಲಿ ಕತ್ತಾಲೆ ಗಿಡಗಳ ಸಂದಿ ಅವಿತ್ತಿಟ್ಟಿದ್ದನು. ಪೊಲೀಸರು ಮಚ್ಚು ವಶಪಡಿಸಿಕೊಂಡರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.