ADVERTISEMENT

ಹೆಗ್ಗೋಡಿನಲ್ಲಿ ಇಂದಿನಿಂದ ಪ್ರಸನ್ನ ಸತ್ಯಾಗ್ರಹ

ಪಾರಂಪರಿಕ ನೇಕಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2014, 19:30 IST
Last Updated 29 ಜನವರಿ 2014, 19:30 IST
ಹೆಗ್ಗೋಡಿನಲ್ಲಿ ಇಂದಿನಿಂದ ಪ್ರಸನ್ನ ಸತ್ಯಾಗ್ರಹ
ಹೆಗ್ಗೋಡಿನಲ್ಲಿ ಇಂದಿನಿಂದ ಪ್ರಸನ್ನ ಸತ್ಯಾಗ್ರಹ   

ಸಾಗರ: ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕೈಮಗ್ಗ ಸತ್ಯಾಗ್ರಹದ ಅಂಗವಾಗಿ ಕರ್ನಾಟಕದ ವಿವಿಧೆಡೆ ಸರ್ವೋದಯ ದಿನವಾದ ಜ.30ರಂದು (ಗುರುವಾರ) ನೇಕಾರರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಅದರ ಭಾಗವಾಗಿ ಇಲ್ಲಿಗೆ ಸಮೀ­ಪದ ಹೆಗ್ಗೋಡು ಗ್ರಾಮದಲ್ಲಿ­ರುವ ಶ್ರಮ­ಜೀವಿ ಆಶ್ರಮ­ದಲ್ಲಿ ರಂಗಕರ್ಮಿ ಹಾಗೂ ಚರಕ ಸಂಸ್ಥೆಯ ಪ್ರಮುಖ–ರಾದ ಪ್ರಸನ್ನ ಅವರು ಅನಿ­ರ್ದಿಷ್ಟ ಅವ­ಧಿಯ ಉಪ­ವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಸರ್ಕಾರ ಪಾರಂಪರಿಕ ನೇಕಾರರ ರಕ್ಷಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವುದಾಗಿ ಘೋಷಿಸು­ವ­ವರೆಗೂ ಪ್ರಸನ್ನ ಅವರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಚರಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಗೌರಮ್ಮ ಅವರು ಬುಧವಾರ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು.

ಗುರುವಾರ ಬೆಳಿಗ್ಗೆ 10 ಗಂಟೆಗೆ ಶ್ರಮಜೀವಿ ಆಶ್ರಮ­ದಲ್ಲಿ ಸರ್ವೋದಯ ದಿನಾಚರಣೆ ಕಾರ್ಯ­ಕ್ರಮ ನಡೆಯ­ಲಿದ್ದು ರೈತ ಮುಖಂಡ ಕಡಿದಾಳು ಶಾಮಣ್ಣ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ವಿಮರ್ಶಕ ಡಿ.ಎಸ್.­ನಾಗಭೂಷಣ್‌, ಕವಯಿತ್ರಿ ಸವಿತಾ ನಾಗಭೂಷಣ್‌ ಇನ್ನಿತರರು ಪಾಲ್ಗೊಳ್ಳ­ಲಿದ್ದಾರೆ ಎಂದು ತಿಳಿಸಿದರು.

ಪ್ರಸನ್ನ ಮಾತನಾಡಿ ಪಾರಂಪರಿಕ ಕೈಮಗ್ಗ ನೇಕಾರಿಕೆಯನ್ನು ಉಳಿಸುವ ಸಂಬಂಧ ಐದು ಬೇಡಿಕೆ­ಗಳನ್ನು ಈಡೇರಿಸುವಂತೆ ಸರ್ಕಾರ­ವನ್ನು ಒತ್ತಾಯಿಸಲಾಗಿತ್ತು. ಈ ಸಂಬಂಧ ಗಜೇಂದ್ರ­ಗಡದಿಂದ ಬಾದಾಮಿ­ಯ­ವರೆಗೆ 13 ದಿನಗಳ ಕಾಲ 245 ಕಿ.ಮೀ ದೂರ ನೇಕಾರರು ಪಾದ­ಯಾತ್ರೆ ನಡೆಸಿ­ದ್ದಾರೆ. ಆದರೂ ಸರ್ಕಾರ­ದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆ­ಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸ­ಲಾಗುತ್ತಿದೆ ಎಂದು ಹೇಳಿದರು.

ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಉಪವಾಸ ಕೈಗೊಳ್ಳುವುದು ಬೇಡ ಎಂದು ಮಾಡಿ­ರುವ ಮನವಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಅನಂತಮೂರ್ತಿ ಅವರ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಆದರೆ ಇದು ಹಠಕ್ಕೆ ಬಿದ್ದು ಮಾಡುತ್ತಿರುವ ಉಪವಾಸ ಅಲ್ಲ.

ಅದೇ ರೀತಿ ಸರ್ಕಾರ ಅಥವಾ ಯಾವುದೇ ಪಕ್ಷದ ವಿರುದ್ದವೂ ಅಲ್ಲ. ಸರ್ಕಾರವನ್ನಷ್ಟೆ ಅಲ್ಲದೆ ಆಧುನಿಕ ನಾಗರಿ­ಕತೆಯ ಹುಸಿ ಅಭಿವೃದ್ಧಿಯ ಭ್ರಮೆಯಲ್ಲಿರುವ ಜನ­ರನ್ನು ಎಚ್ಚರಿ­ಸಲು ಕೈಗೊಳ್ಳುತ್ತಿರುವ ಉಪವಾಸ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.