ADVERTISEMENT

ಹೆಬ್ಬಾಳ ಕೆರೆಯಲ್ಲಿ ಮೀನುಗಳ ಸಾವು

ಕೆರೆಗೆ ಸೇರುತ್ತಿದೆ ಕಲುಷಿತ ನೀರು

​ಪ್ರಜಾವಾಣಿ ವಾರ್ತೆ
Published 31 ಮೇ 2016, 0:30 IST
Last Updated 31 ಮೇ 2016, 0:30 IST
ಹೆಬ್ಬಾಳ ಕೆರೆಯಲ್ಲಿ ಮೀನುಗಳು ಮೃತಪಟ್ಟಿವೆ  –ಪ್ರಜಾವಾಣಿ ಚಿತ್ರ
ಹೆಬ್ಬಾಳ ಕೆರೆಯಲ್ಲಿ ಮೀನುಗಳು ಮೃತಪಟ್ಟಿವೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಹೆಬ್ಬಾಳ ಕೆರೆಯಲ್ಲಿ ನೂರಾರು ಮೀನುಗಳು ಸಾವನ್ನಪ್ಪಿವೆ. ಸತ್ತ ಮೀನುಗಳು ಸೋಮವಾರ ನೀರಿನ ಮೇಲೆ ತೇಲುತ್ತಿರುವುದು ಕಂಡು ಬಂತು.

ಮಳೆ ನೀರಿನ ಕಾಲುವೆಗಳಲ್ಲಿ ಚರಂಡಿ ನೀರು ಹರಿದು ಬರುತ್ತಿದೆ. ಕಲುಷಿತ ನೀರು ಕೆರೆಯ ಒಡಲು ಸೇರಿ ಆಮ್ಲಜನಕ ಪ್ರಮಾಣ ಕಡಿಮೆ ಆಗಿರುವುದು ಮೀನುಗಳ ಸಾವಿಗೆ ಕಾರಣವಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪರಿಸರವಾದಿ ವಿಜಯ್‌ ನಿಶಾಂತ್‌ ಮಾತನಾಡಿ, ‘ಮೀನುಗಳು ಭಾನುವಾರ ಬೆಳಿಗ್ಗೆಯೇ ಮೃತಪಟ್ಟಿವೆ. ಆದರೆ ಬಹಳ ಸಮಯದವರೆಗೂ ಯಾರ ಗಮನಕ್ಕೂ ಬಂದಿಲ್ಲ. ಸೋಮವಾರ ಬೆಳಿಗ್ಗೆ ಸತ್ತ ಮೀನುಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ಕೆಲ ಮೀನುಗಳು ನೀರಿನ ಮೇಲೆ ಮೇಲೆ ತೇಲುತ್ತಿವೆ’  ಎಂದು ಹೇಳಿದರು.

ಹೆಬ್ಬಾಳ ಕೆರೆ ಸುಮಾರು 150 ಎಕರೆ ವಿಸ್ತೀರ್ಣ  ಹೊಂದಿದ್ದು ವಾಯುವಿಹಾರಿಗಳ ನೆಚ್ಚಿನ ತಾಣವಾಗಿದೆ. ಅಪರೂಪದ ಪಕ್ಷಿ ಸಂಕುಲದ ಆವಾಸ ಸ್ಥಾನವಾಗಿದ್ದು, ಪಕ್ಷಿ ವೀಕ್ಷಣೆಗೆಂದು ಸಾವಿರಾರು ಜನ ಕೆರೆಗೆ ಭೇಟಿ ನೀಡುತ್ತಾರೆ. ಕೆರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಈ ಕೆರೆ ಬರುತ್ತದೆ. ಈ ಕೆರೆಯ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ.

ನಗರದಲ್ಲಿ ಮೀನುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಮೇ 9ರಂದು ಹಲಸೂರು ಕೆರೆಯಲ್ಲಿ ಲಕ್ಷಾಂತರ ಮೀನುಗಳು ಮೃತಪಟ್ಟಿದ್ದವು.

‘ಹಲಸೂರು ಕೆರೆಯಲ್ಲಿ ಮೀನುಗಳು ಮೃತಪಟ್ಟ ಬಳಿಕ 25 ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕೆಲವು ಕೆರೆಗಳಿಗೆ ಮಲಿನಗೊಂಡ ನೀರು ಸೇರುತ್ತಿದೆ. ಕೆರೆಯ ಪಾತ್ರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸುವಂತೆ ಸೂಚನೆ ನೀಡಿದ್ದೇನೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

‘ಕಟ್ಟಡದ ಅವಶೇಷಗಳು ಹಾಗೂ ಕಸವನ್ನು ಕೆರೆಗೆ ಸುರಿಯಲಾಗುತ್ತಿದೆ. ಮಳೆನೀರಿನ ಕಾಲುವೆಗಳು ಉಕ್ಕಿ ಹರಿದಿರುವುದು ಮೀನುಗಳ ಸಾವಿಗೆ ಕಾರಣವಾಗಿದೆ’ ಎಂದರು.

‘ಕೆರೆಯಲ್ಲಿ ಮೀನುಗಳ ಸಾವಿಗೆ ಕಾರಣ ತಿಳಿಯಲು ಅಧ್ಯಯನ ನಡೆಸಿ, ಅದರ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.