ADVERTISEMENT

ಹೇಮಂತ ಸಾಹಿತ್ಯಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2015, 19:30 IST
Last Updated 10 ಮಾರ್ಚ್ 2015, 19:30 IST

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು ವಾರ್ಷಿಕವಾಗಿ ನೀಡುವ ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ 2013ನೇ ಸಾಲಿನಲ್ಲಿ ಬೆಂಗಳೂರಿನ ಹೇಮಂತ ಸಾಹಿತ್ಯ ಪ್ರಕಾಶನ ಸಂಸ್ಥೆ ಆಯ್ಕೆಯಾಗಿದೆ.

‘ಡಾ. ಜೆ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ತುಮಕೂರಿನ ಜಾಣಗೆರೆ ವೆಂಕಟರಾಮಯ್ಯ ಅಉ ಆಯ್ಕೆ­ಯಾಗಿ­ದ್ದರೆ, ‘ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಯು ಶಿವಮೊಗ್ಗದ ಈ.ಟಿ. ಪುಟ್ಟಯ್ಯ ಅವರ ಮುಡಿಗೇರಿದೆ.
ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಯ್ಕೆ­ಯಾದವರ ಹೆಸರುಗಳನ್ನು ಪ್ರಕಟಿಸಿದರು.

‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಯು ರೂ 1 ಲಕ್ಷ ನಗದು, ಪ್ರಶಸ್ತಿ ಫಲಕ, ಪುತ್ಥಳಿ ಒಳಗೊಂಡಿದೆ. ‘ಡಾ. ಜೆ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ ಮತ್ತು ‘ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಗಳು ಕ್ರಮವಾಗಿ ರೂ 50 ಸಾವಿರ ಮತ್ತು ರೂ25 ಸಾವಿರ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪುತ್ಥಳಿಗಳನ್ನು ಒಳಗೊಂ­ಡಿವೆ. ಇದೇ 17ರಂದು ಕನ್ನಡ ಭವನದ ನಯನ ಸಭಾಂಗಣ­ದಲ್ಲಿ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಲಿದೆ.

ರಕ್ಷಾಪುಟ ಕಲಾವಿದರಿಗೂ ಪ್ರಶಸ್ತಿ: ಪುಸ್ತಕಗಳ ರಕ್ಷಾಪುಟಗಳನ್ನು ವಿನ್ಯಾಸ ಮಾಡುವ ಕಲಾವಿದರನ್ನೂ ಗೌರವಿ­ಸುವ ಉದ್ದೇಶದಿಂದ, ಪ್ರಸ್ತುತ ಪುಸ್ತಕ ಸೊಗಸು ಬಹುಮಾನ ವಿಭಾಗದಲ್ಲಿ ನೀಡಲಾಗುತ್ತಿರುವ ನಾಲ್ಕನೇ ಮತ್ತು ಐದನೇ ಬಹುಮಾನದ ಬಲದು ಕಲಾವಿ­ದರಿಗೆ ಒಂದನೇ ಮತ್ತು ಎರಡನೇ ಬಹು­ಮಾನ ನೀಡಲು ಪ್ರಾಧಿ­ಕಾರದ ಮಂಡಳಿ ಸಭೆಯಲ್ಲಿ ತೀರ್ಮಾನಿ­ಸಲಾಗಿದೆ. ಪ್ರಸಕ್ತ ಸಾಲಿನಿಂದ ಇದು ಜಾರಿಗೆ ಬರಲಿದೆ ಎಂದು ಜಯಪ್ರಕಾಶ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT