ADVERTISEMENT

ಹೈಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆ ಕಷ್ಟ

ಕನ್ನಡದಲ್ಲಿ ಆದೇಶ ಕುರಿತು ಕಾನೂನು ಪಂಡಿತರ ಅಭಿಪ್ರಾಯ

ವಿಜಯ್ ಜೋಷಿ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST
ಹೈಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆ ಕಷ್ಟ
ಹೈಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆ ಕಷ್ಟ   

ಬೆಂಗಳೂರು: ಹೈಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು, ಅಂದರೆ ಕರ್ನಾಟಕ ಹೈಕೋರ್ಟ್‌ನ ಕಲಾಪ/ಆದೇಶಗಳಲ್ಲಿ ಕನ್ನಡವನ್ನು ಬಳಕೆ ಮಾಡಬಹುದು ಎನ್ನುವ ಶಿಫಾರಸನ್ನು ಅನುಷ್ಠಾನಕ್ಕೆ ತರುವುದು ಸವಾಲಿನ ಕೆಲಸ ಎಂಬುದು ಕಾನೂನು ಪಂಡಿತರ ಅಭಿಪ್ರಾಯ.

‘ಕಾನೂನಿನ ಪಾರಿಭಾಷಿಕ ಪದಗಳು ಕನ್ನಡದಲ್ಲಿ ಹೆಚ್ಚಿಲ್ಲ. ಹಾಗಾಗಿ, ಕನ್ನಡದಲ್ಲಿ ಆದೇಶ ನೀಡುವುದು ಅಥವಾ ಇಂಗ್ಲಿಷ್‌ನಲ್ಲಿ ನೀಡಿದ ಆದೇಶವನ್ನು ಕನ್ನಡಕ್ಕೆ ಅನುವಾದಿಸುವುದು ಕಷ್ಟದ ಕೆಲಸ’ ಎಂದು ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಉದಯ ಹೊಳ್ಳ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂವಿಧಾನದ 348ನೇ ವಿಧಿಯು ಹೈಕೋರ್ಟ್‌ಗಳಲ್ಲಿ ವಾದ–ಪ್ರತಿವಾದಗಳನ್ನು ಪ್ರಾದೇಶಿಕ ಭಾಷೆಯಲ್ಲಿ ನಡೆಸಲು ಅವಕಾಶ ಕಲ್ಪಿಸುತ್ತದೆ. ಆದರೆ ಆದೇಶಗಳು ಇಂಗ್ಲಿಷ್‌ನಲ್ಲಿಯೇ ಇರಬೇಕು ಎಂದು ಈ ವಿಧಿ ಹೇಳುತ್ತದೆ ಎಂದು ಹೊಳ್ಳ ವಿವರಿಸಿದರು.

ADVERTISEMENT

ಅಧಿಕೃತ ಭಾಷೆಗಳ ಕಾಯ್ದೆ – 1963ರ ಸೆಕ್ಷನ್ 7ರ ಅನ್ವಯ, ಹೈಕೋರ್ಟ್‌ಗಳು ಆದೇಶಗಳನ್ನು ಪ್ರಾದೇಶಿಕ ಭಾಷೆಯಲ್ಲಿ ನೀಡಲು ರಾಜ್ಯಪಾಲರು ಅನುಮತಿ ಕೊಡಬಹುದು. ಆದರೂ, ಆದೇಶದ ಒಂದು ಪ್ರತಿಯನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಲೇಬೇಕು. ಇಂಥದ್ದೊಂದು ಅನುಮತಿ ನೀಡುವ ಮುನ್ನ ರಾಜ್ಯಪಾಲರು ರಾಷ್ಟ್ರಪತಿಯಿಂದ ಒಪ್ಪಿಗೆ ಪಡೆದುಕೊಳ್ಳಬೇಕು.

ಅನುವಾದದ ಸಮಸ್ಯೆ: ‘ಸರ್ಕಾರಿ ಅಧಿಕಾರಿಗಳು ಕನ್ನಡದಲ್ಲಿ ಹೊರಡಿಸುವ ಆದೇಶಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ನಡೆಸಬೇಕಾದ ಹೆಣಗಾಟ ಅಷ್ಟಿಷ್ಟಲ್ಲ. ಹೀಗಿರುವಾಗ, ಹೈಕೋರ್ಟ್ ಆದೇಶಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅಥವಾ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸುವ ಕೆಲಸ ಮಾಡುವವರು ಯಾರು’ ಎಂದು ಹೊಳ್ಳ ಪ್ರಶ್ನಿಸಿದರು.

ದೇಶದ ಹೈಕೋರ್ಟ್‌ಗಳಿಗೆ ಹೊರ ರಾಜ್ಯಗಳ ನ್ಯಾಯಮೂರ್ತಿಗಳನ್ನೂ ವರ್ಗಾವಣೆ ಮೂಲಕ ನೇಮಿಸಲಾಗುತ್ತದೆ. ಬೇರೆ ರಾಜ್ಯಗಳಿಂದ ಬಂದ ನ್ಯಾಯಮೂರ್ತಿಗಳಿಗೆ, ಪ್ರಾದೇಶಿಕ ಭಾಷೆ ಮೇಲೆ ಹಿಡಿತ ಇಲ್ಲದಿದ್ದರೆ, ಕಲಾಪಗಳನ್ನು ಕನ್ನಡದಲ್ಲಿ ನಡೆಸುವುದು ಕಷ್ಟವಾಗುತ್ತದೆ ಎಂದು ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಹೇಳಿದರು.

‘ಹೈಕೋರ್ಟ್‌ನಲ್ಲಿ ಪ್ರಾದೇಶಿಕ ಭಾಷೆಗಳನ್ನೇ ಬಳಸಬೇಕು ಎಂಬ ಶಿಫಾರಸನ್ನು ಸಮಿತಿ ನೀಡಿಲ್ಲ.  ಪ್ರಾದೇಶಿಕ ಭಾಷೆಗಳನ್ನೂ ಬಳಸಬಹುದು ಎಂದು ಅದು ಹೇಳಿದೆ. ಭಾಷಾ ಬಳಕೆಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳುವ ಅಧಿಕಾರ ಸಂಸತ್ತಿಗೆ ಖಂಡಿತ ಇದೆ’ ಎಂದು ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ವಿವರಿಸಿದರು.

‘ನನ್ನ ರಾಜ್ಯ, ನನ್ನ ಭಾಷೆ’

ಎಚ್.ಎನ್. ನಾಗಮೋಹನ ದಾಸ್ ಅವರು ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ಮಂಡ್ಯದವರೊಬ್ಬರು ಕನ್ನಡದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

‘ನಿಯಮಗಳ ಅನ್ವಯ ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಬೇಕಲ್ಲವೇ’ ಎಂದು ನಾಗಮೋಹನ ದಾಸ್ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದರು.
ಆಗ ಆ ವ್ಯಕ್ತಿ, ‘ಇದು ನನ್ನ ರಾಜ್ಯ, ಕನ್ನಡ ನನ್ನ ಭಾಷೆ. ಆ ಬಗ್ಗೆ ನಿಮಗೆ ಗೊತ್ತಿಲ್ಲವಾದರೆ ನಾನೇನು ಮಾಡಲಿ ಎಂದು ಕೇಳಿದ್ದರು’ ಎಂದು ನಾಗಮೋಹನ ದಾಸ್ ನೆನಪಿಸಿಕೊಂಡರು.

‘ನಾನು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ, ಅವರ ಅರ್ಜಿಯನ್ನು ಇಂಗ್ಲಿಷ್‌ಗೆ ಅನುವಾದ ಮಾಡಿಸಿಕೊಂಡು ವಿಚಾರಣೆಗೆ ಕೈಗೆತ್ತಿಕೊಂಡೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಸತ್ ಸಮಿತಿ ಮಾಡಿರುವ ಶಿಫಾರಸನ್ನು ನಾನು ಸ್ವಾಗತಿಸುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.