ADVERTISEMENT

ಹೈಕೋರ್ಟ್‌ ತೀರ್ಪಿನಿಂದ ನ್ಯಾಯ ಸಿಕ್ಕಿದೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:23 IST
Last Updated 25 ನವೆಂಬರ್ 2015, 20:23 IST

ಕಲಬುರ್ಗಿ: ‘ನನ್ನ ಮೇಲೆ ಏನೇನು ಸೇಡು ತೀರಿಸಿಕೊಳ್ಳಬೇಕಿತ್ತೊ ಅದೆಲ್ಲತೀರಿಸಿಕೊಂಡರು. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವ ಎಂದು ಪದೇ ಪದೇ ಹೇಳುತ್ತಿದ್ದರು. ಹೈಕೋರ್ಟ್‌ ಆದೇಶದಿಂದ ನನಗೆ ನ್ಯಾಯ ದೊರಕಿದೆ. ಇನ್ನಾದರೂ ಹೀಗೆ ಹಂಗಿಸುವುದನ್ನು ಬಿಡಲಿ’ ಎಂದು ಸಂಸದ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

‘ಅಕ್ರಮ ಡಿನೋಟಿಫಿಕೇಷನ್‌ ಆರೋಪಗಳಿಗೆ ಸಂಬಂಧಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಅಂದಿನ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ನೀಡಿದ್ದ ಪೂರ್ವಾನುಮತಿ ನಿರ್ಧಾರ ಕಾನೂನು ಬಾಹಿರ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ತೀರ್ಪು ನೀಡಿದೆ. ಲೋಕಾಯುಕ್ತ ನ್ಯಾಯಾಲಯದಲ್ಲಿರುವ ಈ ಪ್ರಕರಣಗಳು ಹೈಕೋರ್ಟ್‌ ತೀರ್ಪಿನಿಂದಾಗಿ ವಜಾಗೊಳ್ಳಲಿವೆ’ ಎಂದು ಯಡಿಯೂರಪ್ಪ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಇದು ಖಾಸಗಿ ಪ್ರಕರಣ. ಅನುಮತಿ ನೀಡಿದ್ದನ್ನು ರದ್ದು ಮಾಡಿ ಎಂದು ಹೈಕೋರ್ಟ್‌ ರಾಜ್ಯಪಾಲರಿಗೆ ಹೇಳಿದೆ. ಮುಂದಿನ ನಿರ್ಧಾರ ರಾಜ್ಯಪಾಲರಿಗೆ ಬಿಟ್ಟದ್ದು. ಈಗಲೂ ಅಷ್ಟೆ, ನಾನು ಕೇಂದ್ರ ಸರ್ಕಾರದಲ್ಲಿ ಯಾವ ಸ್ಥಾನಮಾನವನ್ನೂ ನಿರೀಕ್ಷಿಸುವುದಿಲ್ಲ ಮತ್ತು ಪಡೆಯುವುದಿಲ್ಲ. ರಾಜ್ಯದಲ್ಲಿಯೇ ಪಕ್ಷ ಕಟ್ಟುತ್ತೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ’ ಎಂದು ಹೇಳಿದರು.

‘ಉಪ ಲೋಕಾಯುಕ್ತ ಸುಭಾಷ್ ಅಡಿ ಅವರ ಪದಚ್ಯುತಿಗೆ ಮುಖ್ಯಮಂತ್ರಿಗಳು ತರಾತುರಿಯಲ್ಲಿ ನಿರ್ಣಯ ಕೈಗೊಂಡಿದ್ದು ಏಕೆ’ ಎಂದು ಪ್ರಶ್ನಿಸಿದ, ‘ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಕಿವಿಹಿಂಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.