ADVERTISEMENT

ಹೊಗಳು ಭಟ್ಟರನ್ನು ದೂರವಿಡಿ: ಸಿ.ಎಂಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 20:36 IST
Last Updated 30 ಜನವರಿ 2015, 20:36 IST
ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಅರ್ಕಾವತಿ ಬಡಾವಣೆಯ ಸತ್ಯ ಮತ್ತು ಮಿಥ್ಯೆ’ ವಿಚಾರ ಸಂಕಿರಣದಲ್ಲಿ ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಮಾತನಾಡಿದರು. ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್‌ ಚಿತ್ರದಲ್ಲಿದ್ದಾರೆ 	–ಪ್ರಜಾವಾಣಿ ಚಿತ್ರ
ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಅರ್ಕಾವತಿ ಬಡಾವಣೆಯ ಸತ್ಯ ಮತ್ತು ಮಿಥ್ಯೆ’ ವಿಚಾರ ಸಂಕಿರಣದಲ್ಲಿ ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಮಾತನಾಡಿದರು. ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್‌ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷ­ಣವೇ ಮಾಡಬೇಕಾ­ಗಿರುವ ಕೆಲಸವೆಂದರೆ ತಮ್ಮನ್ನು ಹೊಗಳುವ ‘ಭಜನಾ ಮಂಡಳಿ’­ಯವ­ರನ್ನು ಹೊರಗಿ­ಡಬೇಕು. ಕಚೇರಿ ತುಂಬಾ ಇಂಥವರನ್ನು ತುಂಬಿಸಿ­ಕೊಂಡು ದೊಡ್ಡ ತಪ್ಪು ಮಾಡಿದ್ದಾರೆ. ಇವರನ್ನೆಲ್ಲಾ ದೂರವಿಡಲು ಇದು ಸಕಾಲ’ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಸಲಹೆ ನೀಡಿದರು.

ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ನಗರದ ಭಾರತೀಯ ವಿದ್ಯಾಭವನದಲ್ಲಿ ಶುಕ್ರ­ವಾರ ಆಯೋಜಿಸಿದ್ದ ‘ಅರ್ಕಾವತಿ ಬಡಾವಣೆಯ ಸತ್ಯ ಮತ್ತು ಮಿಥ್ಯೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಆರಂಭದಿಂದಲೇ ಈ ಪ್ರಕರಣದ ತನಿಖೆ ಮಾಡಿ­ದರೆ ವಿರೋಧ ಪಕ್ಷದವರೇ ಹೆಚ್ಚು ಮಂದಿ ಜೈಲಿಗೆ ಹೋಗುತ್ತಾರೆ. ಸಾವಿರಾರು ಕೋಟಿ ಆಸ್ತಿ ಮಾಡಿ­ಕೊಂ­ಡಿರುವ ಬಂಧು ಬಳಗದವರು ಕಂಬಿ ಎಣಿಸ­ಬೇಕಾ­ಗು­ತ್ತದೆ. ಇಂಥವರಿಂದ ನಮಗೆ ಸರ್ಟಿಫಿಕೇಟ್‌ ಬೇಕಾ ಸ್ವಾಮಿ?  ಅವ­ರನ್ನು ದಶಕ­ಗ­ಳಿಂದ ನೋಡು­ತ್ತಿ­ದ್ದೇನೆ. ‘ಹಣ ಹೊಡೆ­ದಿದ್ದಾರೆ’ ಎಂಬ ಒಂದೂ ಆರೋಪವನ್ನು ನಾನು ಕೇಳಿಲ್ಲ. ಮೊದಲ ಬಾರಿ ಅವರ ಮೇಲೆ ಆರೋಪ ಎದುರಾಗಿದೆ’ ಎಂದರು.

‘ಅನ್ನದಲ್ಲಿ ಅಥವಾ ಬೇಳೆ ಸಾರಿನಲ್ಲಿ ಕಲ್ಲು ಹುಡುಕಿದರೆ ಪರವಾಗಿಲ್ಲ. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ನವರು ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿದ್ದಾರೆ. ಅವರ ಈ ನಡೆ ಹೊಸ ಕಳ್ಳನನ್ನು ಹುಡುಕಲು ಪೊಲೀಸರು ಹಳೆಯ ಕಳ್ಳನ ನೆರವು ಪಡೆದಂತಾಗಿದೆ. ಹಿಂದೆ ಲೂಟಿ ಮಾಡಿರುವ ಇವರಿಗೆ ಮುಂದಿನವರೂ ಹಣ ಮಾಡಿಕೊಳ್ಳುತ್ತಾರೆ ಎಂಬ ಆತಂಕ’ ಎಂದು ವ್ಯಂಗ್ಯವಾಡಿದರು.

ಸಿ.ಎಂ. ಎಚ್ಚೆತ್ತುಕೊಳ್ಳಬೇಕು: ‘ಸಿದ್ದರಾಮಯ್ಯ ಅವ­ರಿಗೂ ಕೆಲ ಸಮಸ್ಯೆಗಳಿವೆ. ಅವರು ಸೂಕ್ಷ್ಮ ವ್ಯಕ್ತಿ. ಅಂತರ್ಮುಖಿ. ಇದು ಕೆಲವು ಸಲ ಒಳ್ಳೆ­ಯದು, ಹಲವು ಬಾರಿ ಕೆಟ್ಟದು. ಮಾನಸಿಕ ಹಿಂಸೆಗೆ ಗುರಿ­ಯಾಗಿದ್ದಾರೆ. ಸದಾ ಮುಖ ಗಂಟು ಹಾಕಿ­ಕೊಂ­ಡಿ­ರುತ್ತಾರೆ. ಕೆಲ ವಿಷಯ­ಗಳಲ್ಲಿ ರಾಜಿ ಮಾಡಿ­ಕೊಳ್ಳು­ತ್ತಿದ್ದಾರೆ. ಈ ಷಡ್ಯಂತ್ರಗಳಿಗೆ ಹರಕೆಯ ಕುರಿಯಾ­ಗ­ಬೇಡಿ. ಈಗಲಾದರೂ ಎಚ್ಚೆತ್ತುಕೊಳ್ಳಿ’ ಎಂದರು.

ಛೀಮಾರಿ ತಪ್ಪಿಸಲು ಸಹಿ:  ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್‌, ‘ನ್ಯಾಯಾಂಗ ಸೂಚಿಸಿದ ಆರು ಮಾರ್ಗಸೂಚಿಗಳ ಅನ್ವಯ ಪರಿಷ್ಕೃತ ಯೋಜ­ನೆಗೆ ಸಹಿ ಹಾಕುವ ಅನಿವಾರ್ಯ ಸಿದ್ದರಾಮಯ್ಯ ಅವ­ರಿ­­ಗಿತ್ತು. ಆ ರೀತಿ ಮಾಡದೆ ಬೇರೆ ದಾರಿಯೇ ಇರ­ಲಿಲ್ಲ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾ­ಗು­ತಿತ್ತು. ಅಲ್ಲದೇ, ನ್ಯಾಯಾಲಯ ಛೀಮಾರಿ ಹಾಕು­ತ್ತಿತ್ತು. ಅಧಿಕಾರದಿಂದ ಕೆಳಗಿಳಿ­ಯ­ಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು’ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಲ್‌.ಹನುಮಂತಯ್ಯ, ಹಿರಿಯ ವಕೀಲ ಎಂ.ಟಿ.ನಾಣಯ್ಯ ಮಾತನಾಡಿದರು. ವೇದಿಕೆ ಅಧ್ಯಕ್ಷ ಬಿ.ಎಸ್‌.ಶಿವಣ್ಣ ಇದ್ದರು.

ತೀರ್ಪಿನ ಅರಿವಿಲ್ಲ
ಪ್ರಕರಣದ ಕುರಿತು ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ವಿರೋಧ ಪಕ್ಷದವರಿಗೆ ಕೊಂಚವೂ ಅರಿವಿಲ್ಲ. ಆದರೆ, ಅವರೀಗ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಬುದ್ಧ ಚರ್ಚೆ ನಡೆಸಲು ಯಾರೂ ಮುಂದಾಗುತ್ತಿಲ್ಲ. ಬದಲಾಗಿ ಸರ್ಕಾರವನ್ನು ದುರ್ಬಲಗೊಳಿಸುವ ಕೆಲಸಕ್ಕಿಳಿದಿದ್ದಾರೆ.
–ಕೋ.ಚನ್ನಬಸಪ್ಪ, ಹಿರಿಯ ಸಾಹಿತಿ

ಬಿಜೆಪಿಯವರಿಂದಲೇ ದಾಖಲೆ
ಕುಮಾರಸ್ವಾಮಿ, ಜಗದೀಶ ಶೆಟ್ಟರ್‌, ಸದಾನಂದಗೌಡ ಹಾಗೂ ಯಡಿಯೂರಪ್ಪ ಭೂ ಹಗರಣದಿಂದ ಮುಕ್ತರಾಗಿದ್ದಾರೆಯೇ? ಅರ್ಕಾವತಿ ಬಡಾವಣೆ ವಿಷಯವನ್ನು ಬೆಳಗಾವಿ ಅಧಿವೇಶನದಲ್ಲಿ ಏಕೆ ಇವರು ಪ್ರಸ್ತಾಪಿಸಲಿಲ್ಲ. ಇವರ ಹಗರಣಗಳ ಬಗ್ಗೆ ಬಿಜೆಪಿ ನಾಯಕರೇ ನನಗೆ ಕೆಲವು ದಾಖಲೆ ನೀಡಿದ್ದಾರೆ.
–ವಿ.ಎಸ್‌.ಉಗ್ರಪ್ಪ, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT