ADVERTISEMENT

‘ಅಂಬೇಡ್ಕರ್‌ ವಿಚಾರಕ್ಕೆ ಮಹತ್ವ ನೀಡಿದ್ದು ಬಿಜೆಪಿ’

​ಪ್ರಜಾವಾಣಿ ವಾರ್ತೆ
Published 1 ಮೇ 2016, 19:50 IST
Last Updated 1 ಮೇ 2016, 19:50 IST

ಹುಬ್ಬಳ್ಳಿ: ‘ಬಿಜೆಪಿಯವರು ನೀವು, ಈಗ್ಯಾಕೆ ಅಂಬೇಡ್ಕರ್ ಅವರನ್ನು ಹಿಡಕೊಂಡ್ರಿ ಎಂದು ಅನೇಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಅಂಬೇಡ್ಕರ್ ಅವರ ವೈಚಾರಿಕತೆಗೆ ಹೆಚ್ಚು ಮಹತ್ವ ನೀಡಿದ್ದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಪೌರ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಸ್ಪೃಶ್ಯತೆ ಎಂಬ ಪಿಡುಗನ್ನು ನೀವು ಅಪರಾಧ ಎಂದು ಪರಿಗಣಿಸದಿದ್ದರೆ, ಜಗತ್ತಿನಲ್ಲಿನ ಯಾವ ಅಪರಾಧವೂ ಅಪರಾಧವೇ ಅಲ್ಲ ಎಂದು ತಿಳಿಯಬೇಕಾಗುತ್ತದೆ ಎಂದು ಸಂಘ ಪರಿವಾರದ ಹಿರಿಯರು ಆಗಲೇ ಹೇಳಿದ್ದರು. ಅಂಬೇಡ್ಕರ್ ತತ್ವವನ್ನು ಆಗಲೇ ಅಳವಡಿಸಿಕೊಂಡ ಸಂಘಟನೆ ನಮ್ಮದು’ ಎಂದು ಅವರು ಹೇಳಿದರು.

‘ಅಂಬೇಡ್ಕರ್ ಅವರನ್ನು ಅಮಾನವೀಯವಾಗಿ ನಡೆಸಿಕೊಂಡ ಪಕ್ಷ ಕಾಂಗ್ರೆಸ್‌. 1952ರ ಚುನಾವಣೆಯಲ್ಲಿ ಡಾ. ಅಂಬೇಡ್ಕರ್ ಅವರು ಬಾಂಬೆ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ, ಅವರ ವಿರುದ್ಧ ಅವರ ಆಪ್ತ ಸಹಾಯಕ ನಾರಾಯಣ ಕಜ್ರೋಲ್ಕರ್ ಅವರನ್ನೇ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿತು. ಚುನಾವಣೆಯಲ್ಲಿ ಅಂಬೇಡ್ಕರ್ ಪರಾಭವಗೊಂಡರು. ಆ ಮೂಲಕ ಅಂಬೇಡ್ಕರ್ ಅವರ ಸೋಲಿಗೆ ಕಾಂಗ್ರೆಸ್‌ ಕಾರಣವಾಯಿತು’ ಎಂದು ಹೇಳಿದರು.

‘ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್ ಮರಣ ಹೊಂದಿದಾಗ, ಆಗ ಪ್ರಧಾನಿಯಾಗಿದ್ದವರು ಅವರ ಪಾರ್ಥೀವ ಶರೀರದ ದರ್ಶನ ಪಡೆಯಲಿಲ್ಲ. ಅವರ ಅಂತ್ಯಸಂಸ್ಕಾರಕ್ಕೂ ಹೋಗಲಿಲ್ಲ. ಆದರೆ, ಈಗ ಅವರು ಅಂಬೇಡ್ಕರ್ ವಾರಸುದಾರರಂತೆ ಮಾತನಾಡುತ್ತಿದ್ದಾರೆ’ ಎಂದು ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.