ADVERTISEMENT

‘ಇ–ಕಾಮರ್ಸ್‌’ ತಾಣಗಳತ್ತ ಜನರ ಒಲವು

ರಿಯಾಯ್ತಿ ಇರಬೇಕು: ‘ಇನ್‌­ಸ್ಟಾವಾಣಿ’ ಸಮೀಕ್ಷೆ ತೆರೆದಿಟ್ಟ ಸತ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST
‘ಇ–ಕಾಮರ್ಸ್‌’ ತಾಣಗಳತ್ತ ಜನರ ಒಲವು
‘ಇ–ಕಾಮರ್ಸ್‌’ ತಾಣಗಳತ್ತ ಜನರ ಒಲವು   

ಬೆಂಗಳೂರು: ದೀಪಾವಳಿ ಹಬ್ಬದ ಸುಗ್ಗಿಯ ನಡುವೆ ವಿಶೇಷ ರಿಯಾಯ್ತಿ ದರದ ಮಾರಾಟದ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ‘ಇ–ಕಾಮರ್ಸ್’ ತಾಣಗಳು ಸಂಚಲನ ಸೃಷ್ಟಿಸಿವೆ. ಇದರಿಂದ ಭಾರಿ ಆತಂಕಕ್ಕೆ ಒಳಗಾಗಿರುವ ಸಾಂಪ್ರದಾಯಿಕ ಮಾರಾ­ಟ­ಗಾರರು ಸರ್ಕಾರಕ್ಕೆ ದೂರು ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಈ ಕಿತ್ತಾಟದ ನಡುವೆ ಗ್ರಾಹಕರ  ಚಿತ್ತ ಹರಿದಿರುವುದು ಮಾತ್ರ ‘ಇ–ಕಾಮರ್ಸ್‌’ ಕಂಪೆನಿಗಳತ್ತ. ‘ಇನ್‌ಸ್ಟಾ­ವಾಣಿ’ ನಡೆಸಿದ ಸಮೀಕ್ಷೆ ಪ್ರಕಾರ ಗ್ರಾಮೀಣ ಹಾಗೂ ನಗರ ಭಾಗದ ಜನರು ಆನ್‌ಲೈನ್‌ ಮಾರಾಟ ಕಂಪೆನಿ ‘ಫ್ಲಿಪ್‌ಕಾರ್ಟ್‌’ನತ್ತಲೇ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೆ.

ಯಾರತ್ತ ಜನರು ಹೆಚ್ಚು ಒಲವು ಹೊಂದಿದ್ದಾರೆ ಎಂಬುದರ ಕುರಿತು ‘ಇನ್‌ಸ್ಟಾವಾಣಿ’ಯು 1,780 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿತ್ತು. ಭಾರಿ ರಿಯಾಯ್ತಿ ನೀಡಲು ಮುಂದಾ­ಗಿರುವ ಫ್ಲಿಪ್‌ಕಾರ್ಟ್‌ ಕ್ರಮವನ್ನು ಬೆಂಬಲಿಸುತ್ತೀರಾ? ಸಾಂಪ್ರದಾಯಿಕ ಮಾರಾಟಗಾರರಿಗೆ ಭಾರಿ ಹೊಡೆತ ಬಿದ್ದಿದ್ದರೂ ಫ್ಲಿಪ್‌ಕಾರ್ಟ್‌ ಕಂಪೆನಿಯ  ನಿಲುವಿಗೆ ನಿಮ್ಮ ಒಪ್ಪಿಗೆ ಇದೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಇವರಲ್ಲಿ ಕೇಳಲಾಯಿತು.

ಆನ್‌ಲೈನ್‌ ಕಂಪೆನಿಗಳ ಮೂಲಕ ಎಂದಾದರೂ ಖರೀದಿ ಮಾಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶೇ 85ರಷ್ಟು ನಗರ ಹಾಗೂ ಶೇ 30ರಷ್ಟು ಗ್ರಾಮೀಣ ಭಾಗದ ಜನರು ಸಕಾರಾತ್ಮಕ ಉತ್ತರ ನೀಡಿದ್ದಾರೆ.

ಸರಕುಗಳನ್ನು ಭಾರಿ ರಿಯಾಯ್ತಿ ಬೆಲೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಫ್ಲಿಪ್‌ಕಾರ್ಟ್‌ ನಿಲುವನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಶೇ 77ರಷ್ಟು ನಗರ ಹಾಗೂ ಶೇ 61ರಷ್ಟು ಗ್ರಾಮೀಣ ಭಾಗದ ಜನರು ಕಂಪೆನಿಯ ನಿಲುವಿಗೆ ಬೆಂಬಲ ಸೂಚಿಸಿದ್ದಾರೆ.

ವಾದಕ್ಕೆ ವಿರೋಧ: ಫ್ಲಿಪ್‌ಕಾರ್ಟ್‌ ಕಂಪೆನಿಯು ಶೇ 15ಕ್ಕಿಂತ ಅಥವಾ ತಾವು ನೀಡುವು­ದಕ್ಕಿಂತ ಹೆಚ್ಚಿನ ರಿಯಾಯ್ತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡ­ಬಾರದು ಎಂಬ ಸಾಂಪ್ರದಾಯಿಕ ಮಾರಾಟಗಾರರ ವಾದಕ್ಕೆ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶೇ 72ರಷ್ಟು ನಗರದ ಹಾಗೂ ಶೇ 65ರಷ್ಟು ಗ್ರಾಮೀಣ ಭಾಗದ ಜನರು, ಎಷ್ಟಾದರೂ ರಿಯಾಯ್ತಿ ನೀಡಲು ಫ್ಲಿಪ್‌­ಕಾರ್ಟ್‌ಗೆ ಅವಕಾಶ ಮಾಡಿಕೊಡ­ಬೇಕು ಎಂದಿದ್ದಾರೆ.

ರಿಯಾಯ್ತಿ ದರ ಮಾರಾಟ ಮಾಡುತ್ತಿರುವ ಸಂಬಂಧ ಫ್ಲಿಪ್‌­ಕಾರ್ಟ್‌ ಕಂಪೆನಿ ವಿರುದ್ಧ ತನಿಖೆಗೆ ಮುಂದಾಗಿರುವ ಸರ್ಕಾರದ ನಿಲುವಿಗೂ ವಿರೋಧ ವ್ಯಕ್ತವಾಗಿದೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೇ 56ರಷ್ಟು ನಗರದ ಹಾಗೂ ಶೇ 65ರಷ್ಟು ಗ್ರಾಮೀಣ ಭಾಗದ ಜನರು, ಕಂಪೆನಿ ಮೇಲೆ ಯಾವುದೇ ರೀತಿಯ ದಂಡ ವಿಧಿಸಬಾರದು ಎಂದಿದ್ದಾರೆ.

ಈ ಸಮೀಕ್ಷೆಯನ್ನು ಪರಿಗಣಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಫ್ಲಿಪ್‌ಕಾರ್ಟ್‌ ಕಂಪೆನಿಯತ್ತ ನಗರ ಹಾಗೂ ಗ್ರಾಮೀಣ ಭಾಗದ ಜನರ ಒಲವು ವ್ಯಕ್ತವಾಗಿ­ರುವುದು ಗೊತ್ತಾಗುತ್ತದೆ. ಗ್ರಾಮೀಣ ಭಾಗದ ಜನರು ಕಡಿಮೆ ಸಂಖ್ಯೆಯಲ್ಲಿ ಆನ್‌ಲೈನ್‌ ಮೂಲಕ ವಹಿವಾಟು ನಡೆಸಿದ್ದರೂ ರಿಯಾಯ್ತಿ ಮಾರಾಟದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.