ADVERTISEMENT

‘ಕೃಷಿಕರತ್ತ ಚಿತ್ತ ಹರಿಸದ ಪತ್ರಕರ್ತರು’

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2014, 19:30 IST
Last Updated 14 ಅಕ್ಟೋಬರ್ 2014, 19:30 IST
ಮೈಸೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಮರಳಿ ಬಾ ಮಣ್ಣಿಗೆ’ ವಿಚಾರ ಸಂಕಿರಣದಲ್ಲಿ ‘ಕೃಷಿ ಮತ್ತು ಮಾಧ್ಯಮ’ ಕುರಿತು ಹಿರಿಯ  ಪತ್ರಕರ್ತ ನಾಗೇಶ ಹೆಗಡೆ ಮಾತನಾಡಿದರು. ಕೃಷಿ ಪತ್ರಕರ್ತ ಶ್ರೀಪಡ್ರೆ ಇದ್ದಾರೆ
ಮೈಸೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಮರಳಿ ಬಾ ಮಣ್ಣಿಗೆ’ ವಿಚಾರ ಸಂಕಿರಣದಲ್ಲಿ ‘ಕೃಷಿ ಮತ್ತು ಮಾಧ್ಯಮ’ ಕುರಿತು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಮಾತನಾಡಿದರು. ಕೃಷಿ ಪತ್ರಕರ್ತ ಶ್ರೀಪಡ್ರೆ ಇದ್ದಾರೆ   

ಮೈಸೂರು:  ‘ದೇಶದಲ್ಲಿ ಎರಡನೇ ಅತಿ ದೊಡ್ಡ ಬರಗಾಲ ರಾಜ್ಯ ಕರ್ನಾಟಕ’ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.

ನಗರದ ರಾಣಿ ಬಹದ್ದೂರು ಸಭಾಂಗಣ­ದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮರಳಿ ಬಾ ಮಣ್ಣಿಗೆ’ ವಿಚಾರ ಸಂಕಿರಣದಲ್ಲಿ ‘ಕೃಷಿ ಮತ್ತು ಮಾಧ್ಯಮ’ ಕುರಿತು ಅವರು ಮಾತನಾಡಿದರು. ‘ದೇಶದಲ್ಲಿ ಬರಗಾಲದ ಮೊದಲ ರಾಜ್ಯ ರಾಜಸ್ತಾನ. ಆದರೆ, ಕರ್ನಾಟಕ­ದಲ್ಲಿ ಬರಗಾಲವೆಂದರೆ ಮಳೆ ಬರದಿ­ರುವುದಲ್ಲ. ಮಣ್ಣು, ಕೆರೆ ಹಾಗೂ ಅರಣ್ಯಕ್ಕೂ ಬರಗಾಲ ಬಂದಿದೆ. 230 ಕ್ಯೂಬಿಕ್‌ ಕಿಲೊಮೀಟರ್‌ ನೀರನ್ನು ಪ್ರತಿ ವರ್ಷ ಖಾಲಿ ಮಾಡುತ್ತಿದ್ದೇವೆ. ನದಿ­ಗಳು ಒಣಗುತ್ತಿವೆ, ಕೊಳವೆ ಬಾವಿಗಳು ಬತ್ತುತ್ತಿವೆ.

ಇದರೊಂದಿಗೆ ಜಾಗತೀ ಕರಣ, ಜಾಗತಿಕ ತಾಪಮಾನ ಹಾಗೂ ನಗರಗಳತ್ತ ಕೃಷಿಕರ ವಲಸೆ ಹೋಗುತ್ತಿರುವುದು ಆತಂಕಕಾರಿ ಸಂಗತಿಗಳು. ಹೀಗಾಗಿ, ‘ಮರಳಿ ಬಾ ಮಣ್ಣಿಗೆ’ ಎಂದು ಕರೆ ಕೊಡುವುದು ಮನುಷ್ಯರಿಗೆ ಮಾತ್ರವಲ್ಲ. ಎರೆಹುಳು, ಕಪ್ಪೆಗಳು, ಎತ್ತುಗಳಿಗೂ ಹೇಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ 3.5 ಕೋಟಿ ಕೃಷಿಕರಿ­ದ್ದರೂ ಪತ್ರಿಕೆಗಳಿಂದ ವಂಚಿತರಾ­ಗುತ್ತಿದ್ದಾರೆ. ಹೇಗೆಂದರೆ, ದೂರವಾಣಿ, ಮೊಬೈಲ್, ಕಂಪ್ಯೂಟರ್, ಟಿವಿ ಮೊದಲಾದ ಮಾಹಿತಿಗಳ ಮಹಾ ಪೂರದಲ್ಲಿ ಪತ್ರಕರ್ತರು ಮುಳುಗಿ ದ್ದಾರೆ. ಹೀಗಾಗಿ, ಕೃಷಿಕರತ್ತ ಚಿತ್ತ ಹರಿಸುವ ಪತ್ರಕರ್ತರು ಅಪರೂಪ. ಕೃಷಿಗೆಂದೇ ಪ್ರತ್ಯೇಕ ಪತ್ರಕರ್ತರು ಇರುವುದು ಇನ್ನೂ ಅಪರೂಪ. ಇದಕ್ಕಾಗಿ ಹೈದರಾಬಾದಿನ ಡೆಕ್ಕನ್‌ ಡೆವಲಪ್‌ಮೆಂಟ್ ಸೊಸೈಟಿಯ ಡಾ.ಪಿ.ವಿ. ಸತೀಶ್‌ ಅವರು ರೈತರಿಗೇ ಮೈಕ್‌, ಕ್ಯಾಮೆರಾ ಕೊಟ್ಟಿದ್ದಾರೆ. ತಮ್ಮ ಮಾಹಿತಿ, ಸಂಶೋಧನೆಗಳನ್ನು ಚಿತ್ರೀಕರಿ­ಸಿ ಕೊಂಡು ಟಿವಿ ಮಾಧ್ಯಮ­ಗಳಿಗೆ ನೀಡುತ್ತಿರುವುದು ಉತ್ತಮ ಪ್ರಯೋಗ.

ಹೀಗೆಯೇ, 20 ವರ್ಷಗಳ ಹಿಂದೆ ಪತ್ರಕರ್ತ ಶ್ರೀಪಡ್ರೆ ಅವರು ಕೃಷಿಕರ ಕೈಗೆ ಲೇಖನಿ ಕೊಟ್ಟ ಪರಿಣಾಮ ಒಳ್ಳೆಯ­ದಾಯಿತು. ಆದರೆ, ಈಗ ಕೃಷಿಗೆ ಸಂಬಂಧಿಸಿ ಕಂಪೆನಿಗಳಿಗೆ ಲೇಖನಿ ಸಿಗುತ್ತಿದೆ. ಇದಕ್ಕಾಗಿ ಕೃಷಿ ಪದವೀಧರರೇ ಬೇಕು. ಹಾಗೆಯೇ, ಬೀಜ ಉತ್ಪನ್ನ, ಮಾರಾಟ ಈಗ ರೈತರ ಕೈಯಲ್ಲಿಲ್ಲ. ಕಂಪೆನಿಗಳ ಕೈಯಲ್ಲಿವೆ. ಇದನ್ನು ಮಾಧ್ಯಮಗಳು ಎಚ್ಚರಿಸ ಬೇಕು’ ಎಂದು ಸಲಹೆ ನೀಡಿದರು.

ಅಮಿತಾಭ್‌ ಮತ್ತು ಅಪಚಾರ...
ಟಿವಿಯ ವಾಹಿನಿಯೊಂದರಲ್ಲಿ ನಟ ಅಮಿತಾಭ್‌ ಬಚ್ಚನ್‌ ಅವರು ನಡೆಸಿಕೊಡುವ ‘ಕೌನ್ ಬನೇಗಾ ಮಹಾನ್‌ ಕರೋಡ್‌ಪತಿ?’ ಕಾರ್ಯಕ್ರಮವನ್ನು 20 ಕೋಟಿ ಜನರು ನೋಡುತ್ತಾರೆ. ಕಾರ್ಯಕ್ರಮದ ಕೊನೆಗೆ ಅಮಿತಾಭ್‌ ನಿತ್ಯ ಸಂದೇಶವೊಂದನ್ನು ನೀಡುತ್ತಾರೆ.

ಅ. 13ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಅವರು, ನಾಳೆ ಬೆಳಿಗ್ಗೆ ನೀವು ನಿಮ್ಮ ಮನೆಯವರನ್ನು ಕಾಫಿ ಕೊಡಿರೆಂದು ಕೇಳಬೇಡಿ. ಒಂದು ಸೇಬು ಕೊಡಿ ಎಂದು ಕೇಳಿ. ಸೇಬು ತಿಂದರೆ ಬುದ್ಧಿ ಚುರುಕಾಗುತ್ತದೆ ಎಂದರು. ಶಕ್ತಿಶಾಲಿ ಮಾಧ್ಯಮ ಹಾಗೂ ಜನಪ್ರಿಯ ನಟನಿಂದಾಗಿ ಆಗುವ ಅಪಚಾರವಿದು. ಸೇಬು ಯಾಕೆ ಬೇಕು? ಆಯಾ ಪ್ರಾದೇಶಿಕವಾಗಿ ಸಿಗುವ ಹಣ್ಣು­ಗಳಾದರೆ ಸಾಕು.
–ನಾಗೇಶ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT