ADVERTISEMENT

‘ಕೈಮಗ್ಗಕ್ಕೆ ಬೇಕು ಫೇಸ್‌ಬುಕ್‌ ಪ್ರಚಾರ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:55 IST
Last Updated 19 ಅಕ್ಟೋಬರ್ 2014, 19:55 IST

ಬೆಂಗಳೂರು: ‘ಕೈಮಗ್ಗ ವಸ್ತ್ರಗಳ ಬಗೆಗೆ ಫೇಸ್‌­ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಸಬೇಕು’, ‘ಗಾಂಧಿ ಯುಗದಲ್ಲಿ ಖಾದಿ ಚಳವಳಿ ನಡೆದಂತೆ ಮಧ್ಯಮ ವರ್ಗದ ಜನ ಕೈಮಗ್ಗ ವಸ್ತ್ರ ತೊಡುವ ಚಳವಳಿಯನ್ನು ಆರಂಭಿಸಬೇಕು’, ‘ಹತ್ತಿ ಬಟ್ಟೆಗಳು ಜೀವನ ಸಂಸ್ಕೃತಿಯಲ್ಲಿ ಅವಿಭಾಜ್ಯ ಅಂಗವಾಗಬೇಕು...’
-–ಎಂ.ಜಿ. ರಸ್ತೆಯ ‘ರಂಗೋಲಿ’ ಮೆಟ್ರೊ ಕಲಾಕೇಂದ್ರದಲ್ಲಿ ಭಾನುವಾರ ಕೈಮಗ್ಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಏರ್ಪಡಿಸಲಾಗಿದ್ದ ಕೇಳಿಬಂದ ಸಲಹೆಗಳಿವು.

ಸಾಫ್ಟ್‌ವೇರ್‌ ಸಂಸ್ಥೆಯಲ್ಲಿದ್ದ ಉದ್ಯೋಗ ತ್ಯಜಿಸಿ ‘ಲಿಟಲ್‌ ಗ್ರೀನ್‌ ಕಿಡ್‌’ ಎಂಬ ಸಂಸ್ಥೆ ಆರಂಭಿಸಿರುವ ರಶ್ಮಿ ವಿಠಲ್‌, ‘ಸಾಮಾಜಿಕ ಜಾಲತಾಣ ಅತ್ಯಂತ ಕ್ರಿಯಾಶೀಲವಾಗಿರುವ ಕಾಲ ಇದು. ಅಲ್ಲಿ ಹಂಚಿಕೊಳ್ಳುವ ಮಾಹಿತಿ ಬಹುಬೇಗ ಪ್ರಚಾರ ಪಡೆಯುತ್ತಿದೆ. ಕೈಮಗ್ಗ ಚಳವಳಿ ಮುನ್ನಡೆಸಲು ಅದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿ­ಕೊಳ್ಳಬೇಕು’ ಎಂದು ಹೇಳಿದರು.

‘ಉತ್ಕೃಷ್ಟವಾದ ವಸ್ತ್ರಗಳ ವಿವರ, ಅದು ತಯಾರಾಗುವ ವಿಧಾನ, ಅದರ ಹಿಂದಿನ ಶ್ರಮ ಇತ್ಯಾದಿ ವಿವರವನ್ನು ಸಾಧ್ಯವಾದರೆ ವಿಡಿಯೊ ತುಣುಕು­ಗಳೊಂದಿಗೆ ಅಪ್‌ಲೋಡ್‌ ಮಾಡಿದರೆ ಗ್ರಾಹಕರು ಅಂತಹ ಬಟ್ಟೆಯನ್ನು ಹುಡುಕಿ­ಕೊಂಡು ಬರುತ್ತಾರೆ’ ಎಂದು ವಿವರಿಸಿದರು.

ರಶ್ಮಿ ಅವರ ಮಾತಿಗೆ ದನಿಗೂಡಿಸಿದ ಪತ್ರಕರ್ತ ಚಿದಾನಂದ ರಾಜಘಟ್ಟ, ‘ಕೈಯಿಂದ ಮಾಡಿದ ಸರಕುಗಳಿಗೆ ಅಮೆರಿಕ­ದಲ್ಲೂ ಭಾರಿ ಬೆಲೆ. ಶ್ರಮದ ಮಹತ್ವ ಅರಿತರೆ ಇಲ್ಲಿನ ಜನರೂ ಕೈಮಗ್ಗದ ಬಟ್ಟೆಗಳಿಗೆ ತಕ್ಕ ಮೌಲ್ಯ ನೀಡ­ಲಿದ್ದಾರೆ’ ಎಂದು ಅಭಿಪ್ರಾಯ­ಪಟ್ಟರು.

‘ನೇಚರ್‌ ಅಲಾಯ್ಸ್‌’ ಸಂಸ್ಥೆಯ ಸ್ಥಾಪಕಿ ತಾರಾ ಅಸ್ಲಂ, ‘ಹೌದು, ಉತ್ಕೃಷ್ಟ­ವಾದ ಯಾವುದೇ ಸರಕಿಗೆ ಬೆಲೆ ಜಾಸ್ತಿ. ಸಾವಯವ ಆಹಾರ ಸಾಮಗ್ರಿಗೆ ನಾವೀಗ ಹೆಚ್ಚಿನ ದುಡ್ಡು ಕೊಡುತ್ತಿಲ್ಲವೆ’ ಎಂದು ಪ್ರಶ್ನಿಸಿದರು. ‘ಕೈಮಗ್ಗದ ವಸ್ತ್ರ ದುಬಾರಿ ಎಂಬ ಸೊಲ್ಲು ಸಲ್ಲ’ ಎಂದು ಖಡಕ್‌ ಆಗಿ ಹೇಳಿದರು.

ಲೇಖಕಿ ಅಂಜುಮ್‌ ಹಾಸನ್‌, ಅಂಚಿನ ಮೇಲೆ ಅಡಿಕೆ ಗಿಳಿಗಳಿದ್ದ ಮೊಳ­ಕಾಲ್ಮೂರು ಸೀರೆಯನ್ನು ಹುಡುಕಿ­ಕೊಂಡು ಮೂರು ರಾಜ್ಯ ಸುತ್ತಿದ ತಮ್ಮ ಅನುಭವ ಕಥನ ಹೇಳಿದರು. ಕಲಾವಿದೆ ಶೀಲಾ ಗೌಡ, ತಮ್ಮ ಮನೆಯಲ್ಲಿ ಮೊಳಕಾಲ್ಮೂರು ಸೀರೆ ಇದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಕೈಮಗ್ಗ ಕ್ಷೇತ್ರದಲ್ಲಿ ದಶಕಗಳಿಂದ ತೊಡಗಿಸಿಕೊಂಡಿರುವ ಪವಿತ್ರಾ ಮುದ್ದಯ್ಯ, ‘ಹಲವು ದೇಸಿ ವಸ್ತ್ರಗಳ ವಿನ್ಯಾಸ, ಹೆಣೆಯುವ ತಂತ್ರದ ಕುರಿತು ದಾಖಲೀಕರಣ ಮಾಡಿದ್ದೇನೆ’ ಎಂದು ಹೇಳಿದರು. ‘ಕೈಮಗ್ಗದ ಬಟ್ಟೆಗಳಿಗೆ ಮಾರುಕಟ್ಟೆ ಸಮಸ್ಯೆಯೇ ಅಲ್ಲ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ‘ಪಾಲಿಸ್ಟರ್‌ ಬಟ್ಟೆ ಕೈಬಿಟ್ಟು ಕೈಮಗ್ಗದ ವಸ್ತ್ರ ತೊಡಬೇಕು’ ಎಂದು ಮನವಿ ಮಾಡಿದರು. ‘ಶಾಲಾ–ಕಾಲೇಜು ಸೇರಿ­ದಂತೆ ಎಲ್ಲ ಕಡೆಗಳಲ್ಲಿ ಕೈಮಗ್ಗದ ಬಟ್ಟೆಯನ್ನೇ ಸಮವಸ್ತ್ರ ಮಾಡಬೇಕು’ ಎಂದು ಆಗ್ರಹಿಸಿದರು.

ಇಎಸ್‌ಜಿ ಇಂಡಿಯಾ ಸಂಸ್ಥೆಯ ಲಿಯೊ ಸಲ್ಡಾನಾ, ಎನ್‌.ಕೆ. ರಾಮ್‌, ಕೆ.ವಿನಯ್‌, ಚಂದನ್‌ ಗೌಡ ಮತ್ತಿತ­ರರು ಪಾಲ್ಗೊಂಡಿದ್ದರು. ಕೈಮಗ್ಗದ ಥರಾವರಿ ವಸ್ತ್ರಗಳನ್ನು ತೊಟ್ಟು ಬಂದಿದ್ದ ಖ್ಯಾತ ವಿನ್ಯಾಸಕಾರ ಪ್ರಸಾದ್‌ ಬಿದ್ದಪ್ಪ ಅವರ ಸಂಸ್ಥೆಯ ರೂಪದರ್ಶಿ­ಗಳು ಗಮನ ಸೆಳೆದರು. ಛಾಯಾ­ಗ್ರಾಹಕ ಅರ್ಜುನ್‌ ಸ್ವಾಮಿ­ನಾಥನ್‌ ಅವರು ತೆಗೆದ ಛಾಯಾ­ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

‘ಸಾಯುತ್ತಿಲ್ಲ; ಕೊಲ್ಲುತ್ತಿದ್ದಾರೆ’
ಕೈಮಗ್ಗ ಕ್ಷೇತ್ರದ ಉಳಿವಿಗಾಗಿ ಹೋರಾಟ ನಡೆಸಿರುವ ಹಿರಿಯ ರಂಗಕರ್ಮಿ ಪ್ರಸನ್ನ, ‘ಕೈಮಗ್ಗ ಕ್ಷೇತ್ರ ಸಾಯುತ್ತಿಲ್ಲ; ಷಡ್ಯಂತ್ರ ನಡೆಸಿ ಕೊಲ್ಲಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ತನ್ನ ಕುರುಡು ನೀತಿಯ ಮೂಲಕ ಕೈಮಗ್ಗದ ಸದ್ದು ಅಡಗಿಸಲು ಹುನ್ನಾರ ನಡೆಸಿದೆ. ಆದರೆ, ಐದು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಇರುವ ಈ ಕಲೆ ಅಷ್ಟು ಸುಲಭವಾಗಿ ಕಣ್ಮುಚ್ಚು­ವುದಿಲ್ಲ’ ಎಂದು ಹೇಳಿದರು.

‘ಕೈಮಗ್ಗದ ಬಟ್ಟೆಗಳಿಗೆ ವರ್ಷ­ದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಅದೇ ಸಂದರ್ಭದಲ್ಲಿ ಉತ್ಪಾದನೆ ಮಾತ್ರ ಕುಸಿಯುತ್ತಿದೆ. ಸರ್ಕಾರದ ಕ್ರಮಕ್ಕೆ ಕಾಯದೆ ನಾವೇ ಈ ಕ್ಷೇತ್ರವನ್ನು ಮೇಲಕ್ಕೆ ಎತ್ತ­ಬೇಕಿದೆ. ಈ ಬಟ್ಟೆಗಳನ್ನು ತೊಡುವ ಮೂಲಕ ಜನಸಾಮಾನ್ಯರು ಚಳವಳಿಗೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT