ADVERTISEMENT

‘ಚಾಯ್‌ ವಾಲಾ’ ಎಂದು ದೇಶದ ಮಾನ ಕಳೆಯಬೇಡಿ–ಖರ್ಗೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 20:22 IST
Last Updated 17 ಏಪ್ರಿಲ್ 2015, 20:22 IST

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ‘ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಹೋದ ಕಡೆಗಳಲ್ಲಿ ತಾವು ದೇಶದ 125 ಕೋಟಿ ಜನರ ಪ್ರತಿನಿಧಿ ಎಂಬುದನ್ನು ಮರೆತು ಮೈ ಚಾಯ್‌ ವಾಲಾ ಹೂಂ (ನಾನು ಚಹಾ ಮಾರುವವನು) ಎಂದು ಹೇಳುತ್ತಿರುವುದು ಭಾರತೀಯರಿಗೆ ಮಾಡಿದ ಅವಮಾನ’ ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ತಾಲ್ಲೂಕಿನ ಮೋಘಾ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತ್ಯುತ್ಸವದಲ್ಲಿ ಮಾತನಾಡಿದರು.‘ಮೋದಿ ಅವರು ಮೈ ಗುಜರಾತಿ ಹೂಂ. ಮೇರಾ ಶರೀರ್‌ ಕಾಮರ್ಸ್‌ ಹೈ, ಔರ್‌ ಮೇರಾ ಶರೀರ್‌ ಮೇ ಖೂನ್‌ಕೆ ಬದಲ್‌ ಮೇ ಪೈಸಾ ಬೆಹತಿಹೈ (ನಾನು ಗುಜರಾತಿ ಇದ್ದೇನೆ.

ನನ್ನ ದೇಹ ವ್ಯಾಪಾರಿ ಮತ್ತು ನನ್ನ ದೇಹದಲ್ಲಿ ರಕ್ತದ ಬದಲಾಗಿ ಹಣ ಹರಿಯುತ್ತದೆ) ಎಂದು ಹೇಳುತ್ತಿದ್ದಾರೆ. ಈ ಹೇಳಿಕೆಯಿಂದ ಅವರ ಉದ್ದೇಶ ಗೊತ್ತಾಗುತ್ತದೆ. ಯಾರ ಮೈಯಲ್ಲಾದರೂ ರಕ್ತದ ಬದಲಾಗಿ ಹಣ ಹರಿದರೆ ಏನಾಗುತ್ತದೆ? ಅವರು ಬದುಕಲು ಸಾಧ್ಯವೇ?’ ಎಂದಾಗ ಜನ ಗೊಳ್ಳೆಂದು ನಕ್ಕರು.

‘ಇಂತಹ ವಿಚಾರಧಾರೆ ಇರುವವರ ವಿರುದ್ಧ ಹೋರಾಟ ನಡೆಸದಿದ್ದರೆ ಬಹುದೊಡ್ಡ ಆಪತ್ತು ಎದುರಾಗಲಿದೆ’ ಎಂದರು. ‘ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ದಲಿತರ ಮನೆಯಲ್ಲಿ ಊಟ ಮಾಡಿ ದಲಿತ ಮಹಿಳೆಯ ಕೈಯಿಂದ ಬಾಯಿಗೆ ತುತ್ತು ಇಟ್ಟುಕೊಳ್ಳುತ್ತಿರುವುದು ನೋಡಿದರೆ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ ಎಂಬ ಸಂದೇಶ ಜಗತ್ತಿಗೆ ಹೋಗುತ್ತದೆ. ಈ ದೇಶದಲ್ಲಿ ಇಂತಹದ್ದೂ ಸುದ್ದಿಯಾಗುತ್ತದೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಯಾವುದು’ ಎಂದು ಖರ್ಗೆ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.