ADVERTISEMENT

‘ಬೇರೆ ನೂಡಲ್ಸ್‌ಗಳೂ ಪರೀಕ್ಷೆಗೆ’

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:51 IST
Last Updated 3 ಜೂನ್ 2015, 19:51 IST

ಬೆಂಗಳೂರು: ನೆಸ್ಲೆ ಇಂಡಿಯಾ ಕಂಪೆನಿಯ ‘ಮ್ಯಾಗಿ’ ನೂಡಲ್ಸ್‌ನ ಗುಣಮಟ್ಟ ಮಾತ್ರವಲ್ಲದೆ, ಇತರ ಕಂಪೆನಿಗಳ ನೂಡಲ್ಸ್‌ನ ಗುಣಮಟ್ಟವನ್ನೂ ಸರ್ಕಾರ ಪರೀಕ್ಷಿಸಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮ್ಯಾಗಿ ನೂಡಲ್ಸ್‌ನಲ್ಲಿ ವಿಷಕಾರಿ ಅಂಶ ಇದೆಯೇ ಎಂಬ ಬಗ್ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದನ್ನು ಕೋರಲಾಗಿದೆ. ವರದಿ ಒಂದೆರಡು ದಿನಗಳಲ್ಲಿ ದೊರೆಯಲಿದೆ’ ಎಂದರು.

‘ಮ್ಯಾಗಿ ನೂಡಲ್ಸ್‌ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸಬೇಕೇ ಎಂಬ ಬಗ್ಗೆ ವರದಿ ಬಂದ ನಂತರವಷ್ಟೇ ತೀರ್ಮಾನಿಸಲು ಸಾಧ್ಯ’ ಎಂದರು.

‘ಮ್ಯಾಗಿ ನೂಡಲ್ಸ್‌ನಿಂದ ಆರೋಗ್ಯಕ್ಕೆ ಹಾನಿ ಆಗುತ್ತದೆಯೇ ಎಂಬುದು ಮಾತ್ರ ನಮ್ಮ ಮುಂದಿರುವ ಪ್ರಶ್ನೆ ಅಲ್ಲ. ಇತರ ಕಂಪೆನಿಗಳ ನೂಡಲ್ಸ್‌ನಲ್ಲೂ ಆರೋಗ್ಯಕ್ಕೆ ಹಾನಿಕರವಾದ ಅಂಶಗಳು ಇವೆಯೇ ಎಂಬುದನ್ನು ನಾವು ಪರಿಶೀಲಿಸಬೇಕಿದೆ. ಹಾಗಾಗಿ, ಎಲ್ಲ ಕಂಪೆನಿಗಳ ನೂಡಲ್ಸ್‌

ಗಳನ್ನು ಮಾರುಕಟ್ಟೆಯಿಂದ ಖರೀದಿಸಿ, ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಮ್ಯಾಗಿ ನೂಡಲ್ಸ್‌ನಲ್ಲಿರುವ ವಿಷಕಾರಿ ಅಂಶಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಗೆ (ಸಿಎಫ್‌ಟಿಆರ್‌ಐ) ಸಲ್ಲಿಸಿದ್ದ ಕೋರಿಕೆ ತಾಂತ್ರಿಕ ಕಾರಣಕ್ಕೆ ತಿರಸ್ಕೃತಗೊಂಡಿದೆ ಎಂದು ಸಚಿವರು ಹೇಳಿದರು.
ಕೊಚ್ಚಿಯ ಒಂದು ಪ್ರಯೋಗಾಲಯಕ್ಕೂ ‘ಮ್ಯಾಗಿ’ಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದರು.
*****
ಕೇವಲ ಸೀಸದ ಅಂಶ ಮಾತ್ರವಲ್ಲ. ನೂಡಲ್ಸ್‌ಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಯಾವುದೇ ಅಂಶ ಇದ್ದರೂ ಆ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಬೇರೆ ರಾಜ್ಯಗಳು ನಿಷೇಧಿಸಿವೆ ಎಂಬ ಕಾರಣಕ್ಕೆ ನಾವು ಮ್ಯಾಗಿ ನಿಷೇಧಿಸಲು ಆಗದು. ಆದರೆ ಇನ್ನೆರಡು ದಿನ ಮ್ಯಾಗಿ ನೂಡಲ್ಸ್‌ ಖರೀದಿಸಬೇಡಿ ಎನ್ನುವುದು ಪೋಷಕರಿಗೆ ನನ್ನ ಮನವಿ
-ಯು.ಟಿ. ಖಾದರ್‌, ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT