ADVERTISEMENT

‘ವಿಶೇಷ ಅಧಿಕಾರಿ ನೇಮಿಸಿ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 19:57 IST
Last Updated 4 ಸೆಪ್ಟೆಂಬರ್ 2015, 19:57 IST

ಬೆಂಗಳೂರು: ಅಡ್ವೊಕೇಟ್‌ ಜನರಲ್‌ ಕಚೇರಿ ಮತ್ತು ಸರ್ಕಾರದ ವಿವಿಧ ಇಲಾಖೆಗಳ ನಡುವೆ ತುರ್ತು ಸಂವಹನಕ್ಕಾಗಿ ಹಾಗೂ ವ್ಯಾಜ್ಯಗಳ ಕುರಿತಂತೆ ಕಾಲಕಾಲಕ್ಕೆ ಸೂಕ್ತ ನಿರ್ದೇಶನ ಪಡೆಯಲು ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ, ಕಾನೂನು ಸಚಿವರನ್ನು  ಒತ್ತಾಯಿಸಿದ್ದಾರೆ.

ಶುಕ್ರವಾರ ಸಂಜೆ ಅಡ್ವೊಕೇಟ್‌ ಜನರಲ್‌ ಕಚೇರಿಗೆ ಔಪಚಾರಿಕ ಭೇಟಿ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಅಡ್ವೊಕೇಟ್‌ ಜನರಲ್‌ ಕಚೇರಿಯ ಪ್ಲೀಡರ್‌ಗಳು, ಸರ್ಕಾರಿ ವಕೀಲರು, ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ ಜೊತೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

ಈ ವೇಳೆ ಸರ್ಕಾರಿ ವಕೀಲರ ಅಡಚಣೆಗಳನ್ನು ವಿವರಿಸಿದ ಪೊನ್ನಣ್ಣ, ‘ಕಂದಾಯ, ಶಿಕ್ಷಣ, ಸೇವಾ ವಿಭಾಗ ಮತ್ತು ತೆರಿಗೆ ಸಂಬಂಧಿತ ವ್ಯಾಜ್ಯಗಳಲ್ಲಿ ಸರ್ಕಾರದಿಂದ ಯಾವುದೇ ನಿರ್ದೇಶನಗಳನ್ನು ಪಡೆಯುವಲ್ಲಿ ಸಂವಹನದ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದು ವ್ಯಾಜ್ಯಗಳ ಶೀಘ್ರ ವಿಲೇವಾರಿಗೆ ಅಡ್ಡಿಯುಂಟು ಮಾಡಿದೆ’ ಎಂದು ತಿಳಿಸಿದರು.

ಇದೇ ವೇಳೆ ಹಲವು ಪ್ಲೀಡರ್‌ಗಳು ತಮ್ಮ ಕುಂದು ಕೊರತೆಗಳನ್ನು ಸಚಿವರಿಗೆ ವಿವರಿಸಿದರು. ಎಲ್ಲವನ್ನೂ ಆಲಿಸಿದ ಸಚಿವರು ಪರಿಶೀಲಿಸುವ ಭರವಸೆ ನೀಡಿದರು. ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ದಕ್ಷಿಣ ಪ್ರಾಂತ್ಯದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಜಿ.ಶಿವಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.