ADVERTISEMENT

‘ವ್ಯಾಕರಣ–ಮುದ್ರಣ ದೋಷ, ಗ್ರಂಥಸೂಚಿ ಕೊರತೆ’

ಕುವೆಂಪು ಅವರ 12 ನಾಟಕಗಳ ಹಿಂದಿ, ಇಂಗ್ಲಿಷ್‌ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 19:30 IST
Last Updated 27 ಫೆಬ್ರುವರಿ 2015, 19:30 IST
ಮೈಸೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕುವೆಂಪು ಅನುವಾದಿತ ನಾಟಕಗಳ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ದೇ. ಜವರೇಗೌಡ ಅವರು ಕೃತಿಗಳನ್ನು ಬಿಡುಗಡೆಗೊಳಿಸಿ ಮೈಸೂರು ವಿ.ವಿ. ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಅವರಿಗೆ ನೀಡಿದರು. ಡಾ.ಆರ್‌. ರಾಮಕೃಷ್ಣ, ಡಾ.ಡಿ.ಕೆ. ರಾಜೇಂದ್ರ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ಸಿ.ಎನ್‌. ರಾಮಚಂದ್ರನ್‌ ಇದ್ದಾರೆ
ಮೈಸೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕುವೆಂಪು ಅನುವಾದಿತ ನಾಟಕಗಳ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ದೇ. ಜವರೇಗೌಡ ಅವರು ಕೃತಿಗಳನ್ನು ಬಿಡುಗಡೆಗೊಳಿಸಿ ಮೈಸೂರು ವಿ.ವಿ. ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಅವರಿಗೆ ನೀಡಿದರು. ಡಾ.ಆರ್‌. ರಾಮಕೃಷ್ಣ, ಡಾ.ಡಿ.ಕೆ. ರಾಜೇಂದ್ರ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ಸಿ.ಎನ್‌. ರಾಮಚಂದ್ರನ್‌ ಇದ್ದಾರೆ   

ಮೈಸೂರು: ಕುವೆಂಪು ಕಾವ್ಯಾಧ್ಯಯನ ಪೀಠದ ವತಿಯಿಂದ ಕುವೆಂಪು ಅವರ 12 ನಾಟಕಗಳನ್ನು ಇಂಗ್ಲಿಷ್‌ ಮತ್ತು ಹಿಂದಿಗೆ ಅನುವಾದಿಸಿದ್ದು, ಈ ಅನುವಾದ ಸಂಕಲನಗಳಲ್ಲಿ ವ್ಯಾಕರಣ ದೋಷ, ತಪ್ಪು ಪದಗಳು, ಗ್ರಂಥಸೂಚಿ ಕೊರತೆ, ಅಚ್ಚಿನ ದೋಷಗಳ ಬಗ್ಗೆ ವಿಮರ್ಶಕರು ತರಾಟೆಗೆ ತೆಗೆದು ಕೊಂಡರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕುವೆಂಪು ಕಾವ್ಯಾಧ್ಯಯನ ಪೀಠದ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕುವೆಂಪು ಅನುವಾದಿತ ನಾಟಕಗಳ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಸಿ.ಎನ್‌. ರಾಮ ಚಂದ್ರನ್‌ ಮತ್ತು ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಈ ದೋಷಗಳತ್ತ ಗಮನ ಸೆಳೆದರು.

ಡಾ.ರಾಮಚಂದ್ರನ್‌ ಮಾತನಾಡಿ, ಯಾವುದೇ ಭಾಷೆಯಿಂದ ಇನ್ನೊಂದು ಭಾಷೆಗೆ ಮಾಡುವ ಅನುವಾದ ಅರ್ಥಪೂರ್ಣವಾಗಿದೆ, ಶ್ರೇಷ್ಠವಾಗಿದೆ ಎಂದು ತೀರ್ಮಾನಿಸಲು ಸಾಧ್ಯವೇ ಇಲ್ಲ. ಏಕೆಂದರೆ, ಭಾಷಾಂತರ ಕ್ಷೇತ್ರ ದಲ್ಲಿ ಅನೇಕ ವಾದ–ವಿವಾದ­ಗಳು ಬಂದುಹೋಗಿವೆ. ಯಾವೊಂದು ವಾದವನ್ನು ಎಲ್ಲರೂ ಒಪ್ಪುವುದಿಲ್ಲ ಎಂದು ವಿಶ್ಲೇಷಿಸಿದರು.

ಎ.ಕೆ. ರಾಮಾನುಜನ್‌ ಪ್ರತಿಪಾ ದಿಸಿದ ಅನುವಾದದ ಚೌಕಟ್ಟನ್ನು ಮುಂದಿಟ್ಟುಕೊಂಡು ಹೇಳುವು ದಾದರೆ, ಪ್ರತಿಯೊಂದು ಅನುವಾದಕ್ಕೂ ಆವರಣ ಇರಬೇಕು. ಕೃತಿಕಾರನ ವೈಚಾರಿಕತೆ, ಸಾಮಾಜಿಕ ಸಂದರ್ಭ ಕುರಿತು ದೀರ್ಘವಾದ ವಿದ್ವತ್‌ಪೂರ್ಣ ವಿಮರ್ಶಾತ್ಮಕ ಲೇಖನ ಇರಬೇಕು.ಅನುವಾದಿತ ಕೃತಿ ಯಾವ ಬಗೆಯದ್ದು, ಆ ಕಾಲಘಟ್ಟದ ಸಾಂಸ್ಕೃತಿಕ ಲೋಕದ ಪರಿಚಯ, ಅರ್ಥಕೋಶ, ಗ್ರಂಥಕೋಶ ಒಳಗೊಂಡಿರಬೇಕು. ಅನುವಾದದ ಉದ್ದೇಶ ಅನುವಾದಿತ ಕೃತಿಯ ಓದುಗನನ್ನು ಮೂಲಕೃತಿಯ ಓದುಗನಂತಾಗಿ ಪರಿವರ್ತಿಸುವು ದಾಗಿದೆ ಎಂದು ಹೇಳಿದರು.

ಈ ದೃಷ್ಟಿಯಿಂದ ನೋಡಿದಾಗ ಕುವೆಂಪು ಅವರ 12 ನಾಟಕಗಳ ‘ಅಲ್ಕೆಮಿ ಆಫ್‌ ಕ್ರಿಯೆಟಿವಿಟಿ ಟ್ವೆಲ್‌ ಪ್ಲೇಸ್‌ ಆಫ್‌ ಕುವೆಂಪು’ ಇಂಗ್ಲಿಷ್‌ ಸಂಕಲನದಲ್ಲಿ ಈ ಚೌಕಟ್ಟು ಇಲ್ಲದಿರುವುದು ಕೊರತೆಯೇ ಎಂಬ ಪ್ರಶ್ನೆ ನನಗೆ ಮೂಡಿದೆ. 12 ನಾಟಕಗಳ ಕುರಿತು ದೀರ್ಘ ಲೇಖನ ಇರಬೇಕಿತ್ತು ಅನಿಸುತ್ತದೆ. ಇಲ್ಲಿ ಡಾ.ಪ್ರಭುಶಂಕರ ಅನುವಾದ ಮಾಡಿರುವ ನಾಟಕಗಳಿಗೆ ದೀರ್ಘವಾದ ಮುನ್ನುಡಿಗಳು ಇವೆ. ಕೆಲವು ನಾಟಕಗಳಿಗೆ ಕಿರು ಟಿಪ್ಪಣಿಗಳು ಇವೆ. ಎರಡು ನಾಟಕಗಳಿಗೆ ಇದಾ ವುದೂ ಇಲ್ಲ. ಗ್ರಂಥಸೂಚಿಯಂಥೂ ಇಲ್ಲವೇ ಇಲ್ಲ. ಅಚ್ಚಿನ ದೋಷಗಳು ಸಾಕಷ್ಟು ಉಳಿದುಕೊಂಡಿವೆ. ಎರಡನೇ ಮುದ್ರಣದಲ್ಲಿ ಈ ಲೋಪಗಳನ್ನು ಸರಿಪಡಿಸಲು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಕುವೆಂಪು ನಾಟಕಗಳ ‘ಅಕ್ಷಯ್‌ ಪ್ರತಿಭಾ ಕೆ ಘನಿ ರಾಷ್ಟ್ರಕವಿ ಕುವೆಂಪು ಕೆ ಬಾರಹ್‌ ನಾಟಕ’ ಹಿಂದಿ ಸಂಕಲನದ ಅನುವಾದಕರು ಒಂದೆಡೆ ಕಲೆತು ಪರಿಷ್ಕರಣೆ ಕೈಗೊಂಡು ತಪ್ಪುಗಳನ್ನು ಸರಿಪಡಿಸಬಹು ದಿತ್ತು. ಅನುವಾದಕರು ತಪ್ಪು ಮಾಡಿದರೆ ಕುವೆಂಪು ಅವರಿಗೆ ಅನ್ಯಾಯ ವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.