ADVERTISEMENT

‘ಸಿಬಿಐ ತನಿಖೆ ಬೇಡ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 20:00 IST
Last Updated 3 ಸೆಪ್ಟೆಂಬರ್ 2015, 20:00 IST

ಬೆಂಗಳೂರು: ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬಾರದು ಎಂದು ನ್ಯಾಯಕ್ಕಾಗಿ ಸಂಘಟನೆ ಆಗ್ರಹಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಸಂಘಟನೆಯ ಸಂಚಾಲಕ ಅಗ್ನಿ ಶ್ರೀಧರ್‌ ಮಾತನಾಡಿ, ಸಿಬಿಐಗೆ ನೀಡಿದ ಹಲವು ಪ್ರಕರಣಗಳು ಹಳ್ಳ ಹಿಡಿದಿವೆ. 

ಬೆಳ್ತಂಗಡಿಯ ಸೌಜನ್ಯ ಕೊಲೆ, ತೀರ್ಥಹಳ್ಳಿಯ ನಂದಿತಾ ಮತ್ತು ಐಎಎಸ್‌ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣಗಳಲ್ಲಿ ತನಿಖೆ ನಡೆಸಿದ ಸಿಬಿಐ ಈವರೆಗೂ ಸ್ಪಷ್ಟ ವರದಿ ನೀಡಿಲ್ಲ. ಹಾಗಾಗಿ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ನೀಡಿ ಜವಾಬ್ದಾರಿಯಿಂದ ಜಾರಿಕೊಳ್ಳಬಾರದು’ ಎಂದು ಮನವಿ ಮಾಡಿದರು. 

ಕಲಬುರ್ಗಿಯವರ ಹತ್ಯೆಯ ಹಿಂದೆ ಯಾವುದೋ ಒಂದು ಸಂಘಟನೆಯ  ಕೈವಾಡ ಇದೆ ಎಂದು ಸಾಹಿತಿಗಳು, ಸರ್ಕಾರ, ಮಾಧ್ಯಮಗಳು  ಊಹೆ ಮಾಡುವುದು ಸರಿಯಲ್ಲ. 1989ರಲ್ಲಿಯೇ ಕಲಬುರ್ಗಿಯವರು ‘ಚನ್ನಬಸವಣ್ಣ ಬ್ರಾಹ್ಮಣ ಅಲ್ಲ ಮಾದಿಗ’ ಎಂದು ಬರೆದಾಗ  ಪಂಚಪೀಠಗಳು ಕೊಲೆ ಯತ್ನ ಮಾಡಿದ್ದವು. ಹಾಗಾಗಿ ಈ ಕೊಲೆಯ ಹಿಂದೆ ಅನೇಕ ಅನುಮಾನಗಳಿವೆ.  ಸಾರ್ವಜನಿಕರು   ಪೊಲೀಸರಿಗೆ ಮುಕ್ತ  ತನಿಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಪತ್ರಕರ್ತ ಇಂದೂಧರ ಹೊನ್ನಾಪುರ, ಪ್ರೊ. ನರಸಿಂಹಯ್ಯ ಮಾತನಾಡಿದರು.
*
ಭುವಿತ್‌ ಶೆಟ್ಟಿಗೆ ಜಾಮೀನು ಸರಿಯಲ್ಲ
ಪ್ರೊ.ಕಲಬುರ್ಗಿಯವರ ಹತ್ಯೆಯನ್ನು ಸಮರ್ಥಿಸಿಕೊಂಡು ಮುಂದೆ ಸಾಹಿತಿ ಪ್ರೊ.ಭಗವಾನ್‌ ಅವರನ್ನು ಕೊಲೆ ಮಾಡುವುದಾಗಿ ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿರುವ ಭುವಿತ್‌ ಶೆಟ್ಟಿಗೆ 24 ಗಂಟೆಯೊಳಗೆ ಜಾಮೀನು ನೀಡಿರುವುದು ಸರಿಯಲ್ಲ. ಕೊಲೆ ಮಾಡುತ್ತೇನೆ ಎಂದು ಬೆದರಿಸುವುದು ಮಾಡಿದಷ್ಟೇ ಅಪಾಯಕಾರಿ. ಅಂಥವರಿಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 307 ಅಡಿಯಲ್ಲಿ ಕೇಸು ದಾಖಲಿಸಿ ಕನಿಷ್ಠ ಮೂರು ತಿಂಗಳಾದರೂ ಜಾಮೀನು ನೀಡಬಾರದು. ಜಾಮೀನು ಮಂಜೂರು ಮಾಡುವ ನ್ಯಾಯಾಧೀಶರು ಈ ಬಗ್ಗೆ ಯೋಚಿಸಬೇಕು ಎಂದು ಶ್ರೀಧರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.