ADVERTISEMENT

‘ಸಿಬ್ಬಂದಿ ತಪ್ಪಿನಿಂದ ನನಗೆ ಬಂದ ಕಡತ’

ವ್ಯಾಪ್ತಿ ಮೀರಿಲ್ಲ: ನ್ಯಾಯಮೂರ್ತಿ ಅಡಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST
ನ್ಯಾಯಮೂರ್ತಿ, ಸುಭಾಷ್ ಬಿ. ಅಡಿ
ನ್ಯಾಯಮೂರ್ತಿ, ಸುಭಾಷ್ ಬಿ. ಅಡಿ   

ಬೆಂಗಳೂರು: ಡಾ. ಶೀಲಾ ಪಾಟೀಲ ವಿರುದ್ಧದ ದೂರನ್ನು ಕೈಬಿಡಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡುವಾಗ ವ್ಯಾಪ್ತಿ ಮೀರಿ ವರ್ತಿಸಿದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ, ‘ಒಂದನೆಯ ಉಪ ಲೋಕಾಯುಕ್ತ ಎಸ್.ಬಿ. ಮಜಗೆ ಅವರಿಗೆ ಹೋಗಬೇಕಿದ್ದ ತನಿಖಾ ವರದಿ ನನ್ನ ಬಳಿ ಬಂದಿದ್ದು ಸಿಬ್ಬಂದಿ ಮಾಡಿದ ತಪ್ಪಿನಿಂದ’ ಎಂದರು.

ತಮ್ಮ ವಿರುದ್ಧ ಕಾಂಗ್ರೆಸ್‌ ಮಾಡಿರುವ ಆರೋಪ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಡಿ ಅವರು, ‘ಡಾ. ಶೀಲಾ ವಿರುದ್ಧ ಅನಾಮಧೇಯ ವ್ಯಕ್ತಿಯೊಬ್ಬರಿಂದ ಆರೋಪ ಕೇಳಿಬಂದಾಗ ಅದರ ಬಗ್ಗೆ ಲೋಕಾಯುಕ್ತ ವಿಚಕ್ಷಣಾ ವಿಭಾಗದಿಂದ ತನಿಖೆ ನಡೆಯಿತು.

ಆರೋಪದಲ್ಲಿ ಹುರುಳಿಲ್ಲ ಎಂಬ ವರದಿ 2014ರ ಜನವರಿ 16ರಂದು ಬಂತು. ನಾನು ಅದನ್ನು ಆಧರಿಸಿ, ಶೀಲಾ ವಿರುದ್ಧದ ಆರೋಪ ಕೈಬಿಡಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ’ ಎಂದು ವಿವರಿಸಿದರು. ನ್ಯಾಯಮೂರ್ತಿ ಅಡಿ ಅವರ ಶಿಫಾರಸನ್ನು ಸಿದ್ದರಾಮಯ್ಯ ಸರ್ಕಾರ 2014ರ ಫೆಬ್ರುವರಿಯಲ್ಲಿ ಒಪ್ಪಿಕೊಂಡಿದೆ.

‘ತನಿಖಾ ವರದಿಯು ನ್ಯಾಯಮೂರ್ತಿ ಮಜಗೆ ಅವರ ಕಚೇರಿಗೆ ಸಲ್ಲಿಕೆಯಾಗಬೇಕಿತ್ತು. ಆದರೆ ಅದು ಅವರ ಕಚೇರಿಯ ಸಿಬ್ಬಂದಿಯೊಬ್ಬರ ತಪ್ಪಿನಿಂದಾಗಿ ನನ್ನ ಕಚೇರಿಗೆ ಬಂದಿದೆ. ಇದು ಲೋಕಾಯುಕ್ತ ಆಂತರಿಕ ತನಿಖೆಯಿಂದ ಪತ್ತೆಯಾಗಿದೆ.

ಆಂತರಿಕ ತನಿಖೆ ಸರಿಯಾಗಿಲ್ಲ ಎಂದು ಅನಿಸಿದ್ದರೆ, ಮತ್ತೊಂದು ತನಿಖೆಗೆ ನ್ಯಾಯಮೂರ್ತಿ ಮಜಗೆ ಆದೇಶಿಸಬಹುದಿತ್ತಲ್ಲವೇ?’ ಎಂದು ನ್ಯಾ. ಅಡಿ ಪ್ರಶ್ನಿಸಿದರು. ವರ್ಷಕ್ಕೂ ಹೆಚ್ಚು ಕಾಲ ತನಿಖಾ ವರದಿಯನ್ನು ತಮ್ಮ ಬಳಿ ಇರಿಸಿಕೊಂಡು, ನಿವೃತ್ತಿಯ ದಿನ ‘ಸುಭಾಷ್‌ ಅಡಿ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿದ್ದರು’ ಎಂಬ ಆರೋಪ ಮಾಡಿದ್ದೇಕೆ ಎಂದೂ ಪ್ರಶ್ನಿಸಿದರು. 

‘ನನ್ನ ವ್ಯಾಪ್ತಿಯದ್ದು...’: ನ್ಯಾಯಮೂರ್ತಿ ಮಜಗೆ ಅವರೂ ತಮ್ಮ ವ್ಯಾಪ್ತಿ ಮೀರಿ ಕೆಲಸ ಮಾಡಿದ್ದಾರೆ. ನನ್ನು ವ್ಯಾಪ್ತಿಗೆ ಬಂದಿದ್ದ ಎರಡು ದೂರುಗಳ ಬಗ್ಗೆ (ಸಂಖ್ಯೆ: 11176/2015 ಮತ್ತು 745/2007) ನ್ಯಾಯಮೂರ್ತಿ ಮಜಗೆ ವಿಚಾರಣೆ ನಡೆಸಿದ್ದಾರೆ. ಇದನ್ನು ನಾನು ತಪ್ಪು ಎನ್ನಲಾರೆ’ ಎಂದು ನ್ಯಾಯಮೂರ್ತಿ ಅಡಿ ಹೇಳಿದರು.
*
‘ಭ್ರಷ್ಟಾಚಾರ ಎಸಗಿದ್ದರೆ ರಾಜೀನಾಮೆ ನೀಡುವೆ’
ಬೆಂಗಳೂರು:
‘ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಬಂದಾಗ ಅದರ ಬಗ್ಗೆ ತನಿಖೆ ನಡೆಸುವಂತೆ ನಾನು ಸೂಚಿಸಿದ್ದೇ ನ್ಯಾಯಮೂರ್ತಿ ಮಜಗೆ ಅವರು ನನ್ನನ್ನು ಗುರಿಯಾಗಿಸಿಕೊಳ್ಳಲು ಕಾರಣ’ ಎಂದು ಸುಭಾಷ್ ಅಡಿ ಆರೋಪಿಸಿದರು.

‘ನಾನು ಭ್ರಷ್ಟಾಚಾರದಲ್ಲಿ ತೊಡಗಿದ್ದ ಒಂದು ಉದಾಹರಣೆ ನೀಡಲಿ, ಉಪ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಲೋಕಾಯುಕ್ತ ಸಂಸ್ಥೆಯನ್ನು  ಅಸ್ಥಿರ ಮಾಡುವ ಉದ್ದೇಶದಿಂದಲೇ ಇಂಥ ಸ್ಥಿತಿ ಸೃಷ್ಟಿಸಲಾಗಿದೆ. ನಾನು ಇರುವವರೆಗೆ ಈ ಸಂಸ್ಥೆ ಕುಸಿಯಲು ಬಿಡುವುದಿಲ್ಲ’ ಎಂದು ನ್ಯಾಯಮೂರ್ತಿ ಅಡಿ ಹೇಳಿದರು. ‘ನನ್ನ ಪದಚ್ಯುತಿಗೆ ಮನವಿ ಸಲ್ಲಿಸಲಾಗಿದೆ ಎಂಬ ಸುದ್ದಿ ತಿಳಿದು ನೋವಾಯಿತು. ಸತ್ಯ ಹೊರಗೆ ಬಂದೇ ಬರುತ್ತದೆ ಎಂಬ ವಿಶ್ವಾಸ ಇದೆ’ ಎಂದರು.

‘ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಸೋನಿಯಾ ನಾರಂಗ್‌ ವರದಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಜರುಗಿಸಿಲ್ಲ ಎಂದು ನನ್ನ ಬಳಿ ದೂರು ಬಂತು. ಈ ವಿಚಾರವನ್ನು ನಾನು ಲೋಕಾಯುಕ್ತ ವೈ. ಭಾಸ್ಕರ ರಾವ್ ಮತ್ತು ನ್ಯಾಯಮೂರ್ತಿ ಮಜಗೆ ಅವರ ಜೊತೆ ಚರ್ಚಿಸಿದ್ದೆ. ಭ್ರಷ್ಟಾಚಾರ ಆರೋಪದ ತನಿಖೆಯನ್ನು ಸಿಸಿಬಿಗೆ ವಹಿಸುವ ನಿಲುವು ರಾವ್‌ ಮತ್ತು ಮಜಗೆ ಅವರದಾಗಿತ್ತು. ಕಾಣದ ಶಕ್ತಿಗಳು ನನ್ನ ಹೆಸರು ಕೆಡಿಸಲು ಯತ್ನಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT