ADVERTISEMENT

‘ಹುಚ್ಚಾ’ಟಕ್ಕೆ ಟಿವಿಯಲ್ಲಿ ಅಭಿಮಾನಿಗಳಿಲ್ಲ

ವೆಂಕಟ್‌ ಹೊರಬಿದ್ದ ನಂತರ ‘ಬಿಗ್‌ ಬಾಸ್‌’ ವೀಕ್ಷಕರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 19:35 IST
Last Updated 26 ನವೆಂಬರ್ 2015, 19:35 IST

ಬೆಂಗಳೂರು: ಹುಚ್ಚ ವೆಂಕಟ್ ಜನಪ್ರಿಯತೆ ಸಾಮಾಜಿಕ ಜಾಲತಾಣಗಳಿಗೆ ಸೀಮಿತವೇ? ಟಿ.ವಿ. ಕಾರ್ಯಕ್ರಮಗಳ ಜನಪ್ರಿಯತೆಯನ್ನು ಅಳೆಯುವ ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ ಆಫ್ ಇಂಡಿಯಾ (ಬಾರ್ಕ್) ನೀಡುತ್ತಿರುವ ಅಂಕಿ–ಅಂಶಗಳು ಹೇಳುತ್ತಿರುವಂತೆ ‘ಬಿಗ್ ಬಾಸ್’ ಮನೆಯಿಂದ ವೆಂಕಟ್ ಹೊರ ಹೋದನಂತರ ಆ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ ಹೆಚ್ಚಿದೆ.

‘ಕಲರ್ಸ್ ಕನ್ನಡ’ ಟಿ.ವಿ. ಚಾನೆಲ್‌ನಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ಇದ್ದದ್ದು ಮೂರು ವಾರಗಳ ಕಾಲ. ಮೊದಲ ವಾರ ಈ ಕಾರ್ಯಕ್ರಮವನ್ನು ಪ್ರತಿದಿನ ಸರಾಸರಿ 29.99 ಲಕ್ಷ ಮಂದಿ ವೀಕ್ಷಿಸಿದ್ದರು. ಎರಡನೇ ವಾರ ಈ ಸಂಖ್ಯೆ 28.21 ಲಕ್ಷಕ್ಕೆ ಕುಸಿದಿತ್ತು. ಮೂರನೇ ವಾರ ಇದು ಸ್ವಲ್ಪ ಚೇತರಿಸಿಕೊಂಡು 28.44 ಲಕ್ಷಕ್ಕೆ ಏರಿತ್ತು. ಈ ವಾರವೇ ಸಹ ಸ್ಪರ್ಧಿ ಮೂರೂರು ರವಿ ಮೇಲೆ ಹಲ್ಲೆ ನಡೆಸಿದ್ದರ ಪರಿಣಾಮವಾಗಿ ವೆಂಕಟ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು.

ಈಗ ‘ಬಿಗ್ ಬಾಸ್’ ಮನೆಯಲ್ಲಿ ವೆಂಕಟ್ ಇಲ್ಲದೇ ಇರುವ ವಾರದ ಬಾರ್ಕ್ ರೇಟಿಂಗ್‌ಗಳು ಪ್ರಕಟವಾಗಿದ್ದು  ಪ್ರತಿದಿನದ ಸರಾಸರಿ ವೀಕ್ಷಕರ ಸಂಖ್ಯೆ 32.94 ಲಕ್ಷಕ್ಕೆ ಏರಿದೆ. ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಏರಿಕೆ ಕಂಡುಬಂದಿದೆ. ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ಇದ್ದ ಕೊನೆಯ ವಾರ ಈ ಕಾರ್ಯಕ್ರಮವನ್ನು ವೀಕ್ಷಿಸಿದ ಬೆಂಗಳೂರಿಗರ ಸಂಖ್ಯೆ 8.22 ಲಕ್ಷ. ಬಿಗ್ ಬಾಸ್ ಮನೆಯಿಂದ ವೆಂಕಟ್ ನಿರ್ಗಮಿಸಿದ ನಂತರದ ವಾರದಲ್ಲಿ ಈ ಸಂಖ್ಯೆ 9.67 ಲಕ್ಷಕ್ಕೇರಿದೆ.

ಇದೇ ರೀತಿ ಬೆಂಗಳೂರು ಸೇರಿದಂತೆ ಕರ್ನಾಟಕದ ನಗರ ಪ್ರದೇಶಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದವರ ಸಂಖ್ಯೆ 15.99 ಲಕ್ಷದಿಂದ 18. 62 ಲಕ್ಷಕ್ಕೆ ತಲಪಿದೆ. ಹಾಗೆಯೇ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವೀಕ್ಷಕರ ಸಂಖ್ಯೆ 28.44 ಲಕ್ಷದಿಂದ 32.94 ಲಕ್ಷಕ್ಕೆ ಏರಿದೆ.

‘ಬಿಗ್ ಬಾಸ್’ ಕಾರ್ಯಕ್ರಮ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಜನಪ್ರಿಯ ಎಂಬ ಹೆಗ್ಗಳಿಕೆಯನ್ನು ಹೊಂದಿದೆಯಾದರೂ ಒಟ್ಟಾರೆ ಟಿ.ವಿ.ಕಾರ್ಯಕ್ರಮಗಳನ್ನು ಪರಿಗಣಿಸಿದರೆ ಇದರ ಸ್ಥಾನ ಬಹಳ ಹಿಂದಿದೆ. ನವೆಂಬರ್ 20ಕ್ಕೆ ಕೊನೆಗೊಳ್ಳುವ ವಾರದ ಅಂಕಿ–ಅಂಶಗಳಂತೆ ಜನಪ್ರಿಯತೆಯಲ್ಲಿ ‘ಬಿಗ್ ಬಾಸ್’ಗೆ ಇರುವ ಸ್ಥಾನ ಆರನೆಯದ್ದು. ಮೊದಲ ಸ್ಥಾನ ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರವಾಹಿಯದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.