ADVERTISEMENT

‘₹172 ಕೋಟಿ ಅಘೋಷಿತ ಆಸ್ತಿ ಪತ್ತೆ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 19:42 IST
Last Updated 20 ಫೆಬ್ರುವರಿ 2017, 19:42 IST

ಮಂಗಳೂರು: ಫೆಬ್ರುವರಿ 1ರ ಬಳಿಕ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗವು ನಡೆಸಿದ ಕಾರ್ಯಾಚರಣೆಯಲ್ಲಿ ₹172 ಕೋಟಿ ಮೊತ್ತದ ಅಘೋಷಿತ ಆದಾಯವನ್ನು ಪತ್ತೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಕರ್ನಾಟಕ– ಗೋವಾ ಮಹಾನಿರ್ದೇಶಕ ಬಿ.ಆರ್‌. ಬಾಲಕೃಷ್ಣನ್‌ ತಿಳಿಸಿದರು.

ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಮಂಗಳೂರು ವಲಯದ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದೇ ಗುಂಪಿಗೆ ಸೇರಿದ ಸಹಕಾರ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು, ಟ್ರಸ್ಟ್‌ಗಳು, ರಿಯಲ್‌ ಎಸ್ಟೇಟ್‌ ಉದ್ದಿಮೆಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ ಈ ದಾಳಿಯನ್ನು ಸಂಘಟಿಸಲಾಗಿತ್ತು. ಈ ಸಂದರ್ಭದಲ್ಲಿ ವಶಕ್ಕೆ ಪಡೆದ ದಾಖಲೆಗಳ ಪರಿಶೀಲನೆಯಲ್ಲಿ ₹172 ಕೋಟಿ ಮೊತ್ತದ ಅಘೋಷಿತ ಆಸ್ತಿ ಪತ್ತೆಯಾಗಿದೆ’ ಎಂದರು.

ಮಂಗಳೂರು, ಉಡುಪಿ, ಪುತ್ತೂರು, ಕಾರ್ಕಳ, ಚಿಕ್ಕಮಗಳೂರು, ಬೆಂಗಳೂರು ಮತ್ತು ಮುಂಬೈನ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ತನಿಖಾ ವಿಭಾಗದ ಅಧಿಕಾರಿಗಳು ಏಕಕಾಲಕ್ಕೆ ಈ ದಾಳಿ ನಡೆಸಿದ್ದರು. ಈ ಎಲ್ಲಾ ಸ್ಥಳಗಳೂ ಒಂದೇ ಗುಂಪಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಿಸಿದ್ದವು ಎಂದು ತಿಳಿಸಿದರು.

ADVERTISEMENT

₹ 4,300 ಕೋಟಿ ಪತ್ತೆ: ಕರ್ನಾಟಕ ಮತ್ತು ಗೋವಾ ತನಿಖಾ ವಿಭಾಗವು 2016ರ ಏಪ್ರಿಲ್‌ನಿಂದ ಈವರೆಗೆ ₹4,300 ಕೋಟಿ ಮೊತ್ತದ ಅಘೋಷಿತ ಆಸ್ತಿಯನ್ನು ಪತ್ತೆ ಮಾಡಿದೆ. ಈ ಪೈಕಿ ₹1,000 ಕೋಟಿಯಷ್ಟು ಅಘೋಷಿತ ಆಸ್ತಿ ನವೆಂಬರ್‌ 8ರಂದು ₹1,000 ಮತ್ತು ₹500ರ ನೋಟುಗಳನ್ನು ರದ್ದು ಮಾಡಿದ ಬಳಿಕ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.