ADVERTISEMENT

ದೀಪಕ್ ಹತ್ಯೆ: ಮಂಗಳೂರಿನಾದ್ಯಂತ ಪ್ರತಿಬಂಧಕಾಜ್ಞೆ ಜಾರಿ; ದೌಡಾಯಿಸಿದ ಎಡಿಜಿಪಿ ಕಮಲ್ ಪಂತ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ದೀಪಕ್‌ ರಾವ್‌ ಮೃತದೇಹ ಇರಿಸಿರುವ ಮಂಗಳೂರಿನ ಎ.ಜೆ.ಆಸ್ಪತ್ರೆಯ ಶವಾಗಾರದ ಬಳಿ ಬುಧವಾರ ಸಂಜೆ ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ಬಿಜೆಪಿ ಮತ್ತು ಬಜರಂಗದಳದ ಮುಖಂಡರೊಂದಿಗೆ ಚರ್ಚೆ ನಡೆಸಿದರು. –ಪ್ರಜಾವಾಣಿ ಚಿತ್ರ
ದೀಪಕ್‌ ರಾವ್‌ ಮೃತದೇಹ ಇರಿಸಿರುವ ಮಂಗಳೂರಿನ ಎ.ಜೆ.ಆಸ್ಪತ್ರೆಯ ಶವಾಗಾರದ ಬಳಿ ಬುಧವಾರ ಸಂಜೆ ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ಬಿಜೆಪಿ ಮತ್ತು ಬಜರಂಗದಳದ ಮುಖಂಡರೊಂದಿಗೆ ಚರ್ಚೆ ನಡೆಸಿದರು. –ಪ್ರಜಾವಾಣಿ ಚಿತ್ರ   

ಮಂಗಳೂರು: ಸುರತ್ಕಲ್‌ ಸಮೀಪ ಬುಧವಾರ ಕೊಲೆಗೀಡಾದ ದೀಪಕ್‌ ರಾವ್ ಅವರ ಶವಯಾತ್ರೆಯನ್ನು ಗುರುವಾರ ಬೆಳಿಗ್ಗೆ ಎ.ಜೆ.ಆಸ್ಪತ್ರೆಯಿಂದ ಕಾಟಿಪಳ್ಳದವರೆಗೆ ನಡೆಸಲು ಬಿಜೆಪಿ ಮತ್ತು ಬಜರಂಗದಳ ಸಿದ್ಧತೆ ನಡೆಸಿವೆ. ಆದರೆ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಾದ್ಯಂತ ಪ್ರತಿಬಂಧಕಾಜ್ಞೆ ಹೊರಡಿಸುವ ಮೂಲಕ ಪೊಲೀಸರು ಮೆರವಣಿಗೆಗೆ ಅವಕಾಶ ನಿರಾಕರಿಸಿದ್ದಾರೆ.

ಜುಲೈ ತಿಂಗಳಿನಲ್ಲಿ ಬಂಟ್ವಾಳದಲ್ಲಿ ಕೊಲೆಗೀಡಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಶವಯಾತ್ರೆ ಸಂದರ್ಭದಲ್ಲಿ ಕಲ್ಲುತೂರಾಟ, ಹಿಂಸಾಚಾರ ನಡೆದಿತ್ತು. ದೀಪಕ್‌ ಶವಯಾತ್ರೆಗೆ ಅವಕಾಶ ನೀಡಿದರೆ ಅದೇ ರೀತಿಯ ಘಟನೆಗಳು ಮರುಕಳಿಸಬಹುದು ಎಂಬ ಗುಪ್ತದಳದ ವರದಿ ಆಧರಿಸಿ ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌.ಸುರೇಶ್‌ ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿ 10ಗಂಟೆಯವರೆಗೆ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್‌ 35ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಮೆರವಣಿಗೆ, ಜಾಥಾ, ರಸ್ತೆ ತಡೆ, ಪ್ರತಿಭಟನೆ, ಮುತ್ತಿಗೆ ಹಾಕುವುದನ್ನು ನಿಷೇಧಿಸಲಾಗಿದೆ. ಮಾರಕಾಸ್ತ್ರ ಹಿಡಿದು ತಿರುಗುವುದು, ಸ್ಫೋಟಕಗಳನ್ನು ಸಾಗಿಸುವುದು, ಘೋಷಣೆ ಕೂಗುವುದು, ರಾಜ್ಯದ ಭದ್ರತೆಗೆ ವಿರುದ್ಧವಾದ ಭಾಷಣ ಮಾಡುವುದು, ಭಿತ್ತಿಪತ್ರ, ಕರಪತ್ರ, ಚಿತ್ರಗಳ ಪ್ರದರ್ಶನ ಮತ್ತು ವಿತರಣೆಯನ್ನು ನಿಷೇಧಿಸಲಾಗಿದೆ.

ADVERTISEMENT

ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಎ.ಜೆ.ಆಸ್ಪತ್ರೆ ಆವರಣ ಪ್ರವೇಶಿಸದಂತೆ ಪೊಲೀಸರು ಭದ್ರತಾ ಯೋಜನೆ ರೂಪಿಸಿಕೊಂಡಿದ್ದಾರೆ. ಹೆಚ್ಚುವರಿ ‍ಪೊಲೀಸ್‌ ಮಹಾನಿರ್ದೇಶಕ ಕಮಲ್‌ ಪಂತ್‌ ನಗರಕ್ಕೆ ಬಂದ ಬಳಿಕ ಅದನ್ನು ಅಂತಿಮಗೊಳಿಸಲಾಗುತ್ತದೆ. ಅಗತ್ಯ ಕಂಡುಬಂದಲ್ಲಿ ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಗರದಾದ್ಯಂತ ಪೊಲೀಸ್‌ ಗಸ್ತು ಹೆಚ್ಚಿಸಲಾಗಿದೆ. ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್‌ ಹಾಗೂ ಎಲ್ಲ ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದಾರೆ. ನಗರದ ಸೂಕ್ಷ್ಮ ಪ್ರದೇಶಗಳನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದೆ.

ಪಿಎಫ್‌ಐ ವಿರುದ್ಧ ಆರೋಪ: ಸತ್ಯಜಿತ್‌ ಸುರತ್ಕಲ್, ಜೆ.ಕೃಷ್ಣ ಪಾಲೇಮಾರ್, ಡಾ.ಭರತ್‌ ಶೆಟ್ಟಿ, ಶರಣ್‌ ಪಂಪ್‌ವೆಲ್‌, ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರೇ ಈ ಕೊಲೆ ಮಾಡಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು. ಪಿಎಫ್‌ಐ ನಿಷೇಧಕ್ಕೆ ಕ್ರಮ ಜರುಗಿಸಬೇಕು’ ಎಂದು ಪೊಲೀಸ್ ಕಮಿಷನರ್‌ ಅವರನ್ನು ಆಗ್ರಹಿಸಿದರು.

ಕುಟುಂಬಕ್ಕೆ ಆಧಾರವಾಗಿದ್ದ
ದೀಪಕ್‌ ರಾವ್‌ ತಂದೆ ಮೃತಪಟ್ಟಿದ್ದು, ತಾಯಿ ಮತ್ತು ತಮ್ಮ ಇದ್ದಾರೆ. ತಮ್ಮ ಶ್ರವಣದೋಷ ಹೊಂದಿದ್ದು, ಮಾತನಾಡಲು ಬಾರದು. ಆತ ಗಾರೆ ಕೆಲಸಕ್ಕೆ ಹೋಗುತ್ತಿದ್ದಾನೆ. ದೀಪಕ್‌ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು ಎಂದು ಶವಾಗಾರದ ಬಳಿ ಬಂದಿದ್ದ ಮೃತನ ಸಂಬಂಧಿಗಳು ತಿಳಿಸಿದರು.

ಮಂಗಳೂರಿಗೆ ದೌಡಾಯಿಸಿದ ಎಡಿಜಿಪಿ ಕಮಲ್ ಪಂತ್

ಬೆಂಗಳೂರು: ದೀಪಕ್ ಹತ್ಯೆ ಬಳಿಕ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕಮಲ್‌ ಪಂತ್ ಮಂಗಳೂರಿಗೆ ದೌಡಾಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ವಿವರ ಪಡೆದ ಗೃಹ ಸಚಿವ ರಾಮಲಿಂಗಾರೆಡ್ಡಿ, ಕೂಡಲೇ ಮಂಗಳೂರಿಗೆ ಧಾವಿಸುವಂತೆ ಕಮಲ್ ಪಂತ್‌ಗೆ ಸೂಚನೆ ನೀಡಿದರು.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ತುಕಡಿಗಳನ್ನು ನಿಯೋಜಿಸಬೇಕು, ಶಾಂತಿಭಂಗ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೆಡ್ಡಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.