ADVERTISEMENT

ಸಾರಿಗೆ ನೌಕರರ ಬಲವಂತದ ವರ್ಗಾವಣೆ ಇಲ್ಲ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST

ಬೆಂಗಳೂರು: ಸಾರಿಗೆ ಸಂಸ್ಥೆಗಳ ನೌಕರರ ಅಂತರ ನಿಗಮ ವರ್ಗಾವಣೆ ಗೊಂದಲ ನಿವಾರಣೆ ಮಾಡಲಾಗಿದ್ದು, ನಿಯೋಜಿತ ನಿಗಮಗಳಿಗೆ ಬಲವಂತವಾಗಿ ಕಳುಹಿಸದಿರಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಸ್ಪಷ್ಟಪಡಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿರುವ(ಬಿಎಂಟಿಸಿ) ಉತ್ತರ ಕರ್ನಾಟಕ ಭಾಗದ ನೌಕರರು, ತಮ್ಮ ಊರಿಗೆ ಹತ್ತಿರದ ಜಿಲ್ಲೆಗಳಿಗೆ ವರ್ಗಾವಣೆ ಬಯಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ(ಕೆಎಸ್‌ಆರ್‌ಟಿಸಿ) ವರ್ಗಾವಣೆ ಕೋರಿದ್ದರು. ಕೆಲವರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ ಎಂದರು.

‘ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವುದಿಲ್ಲ. ಬಿಎಂಟಿಸಿಯಲ್ಲೆ ಉಳಿಯುತ್ತೇವೆ ಎಂದು  ಕೇಳಿಕೊಂಡಿ
ದ್ದಾರೆ. ಅಂತವರನ್ನು ಬಲವಂತವಾಗಿ ವರ್ಗಾವಣೆ ಮಾಡದಿರಲು ನಿರ್ದೇಶನ ನೀಡಿದ್ದೇನೆ. ಅಲ್ಲದೇ, ವರ್ಗಾವಣೆ ಆದೇಶ ಪಡೆದು ನಿಯೋಜಿತ ಸ್ಥಳಗಳಿಗೆ ಇಚ್ಛೆಪಟ್ಟು ಹೋಗುತ್ತಿರುವ ನೌಕರರನ್ನು ಕೂಡಲೇ ಬಿಡುಗಡೆ ಮಾಡಲು ತಿಳಿಸಿದ್ದೇನೆ’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

ಬಿಎಂಟಿಸಿ ನೌಕರರಿಗೆ ನೀಡಬೇಕಾದ ಅಂದಾಜು ₹ 14.25 ಕೋಟಿ ಬೋನಸ್‌ ಬಾಕಿ ಇದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವೇತನ ಪರಿಷ್ಕರಣೆಗಾಗಿ ಪ್ರತಿಭಟನೆ ನಡೆಸಿದ ನೌಕರರ ವಿರುದ್ಧ ಕೈಗೊಂಡಿರುವ ಇಲಾಖಾ ಶಿಸ್ತು ಕ್ರಮಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಂಗಳೂರು- ಪುತ್ತೂರು ವಿಭಾಗಕ್ಕೆ ಪ್ರತ್ಯೇಕ ನೇಮಕ

ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗಕ್ಕೆ ನೌಕರರನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ರೇವಣ್ಣ ಹೇಳಿದರು.

‘ಸ್ಥಳೀಯರು ಕೆಎಸ್‌ಆರ್‌ಟಿಸಿ ನೌಕರಿಗೆ ಬರುತ್ತಿಲ್ಲ. ಬೇರೆ ಜಿಲ್ಲೆಯ ನೌಕರರು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ನೇಮಕಾತಿಗೆ ಆದೇಶಿಸಿದ್ದೇನೆ. ಅಲ್ಲದೆ, ಇದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ‌ನಾನೇ ಅಲ್ಲಿಗೆ ಭೇಟಿ ನೀಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.