ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಬಿಜೆಪಿಯಿಂದ ಉಚ್ಛಾಟನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 13:11 IST
Last Updated 22 ಫೆಬ್ರುವರಿ 2018, 13:11 IST
ಬಿ.ಎಸ್‌.ಚೈತ್ರಶ್ರೀ
ಬಿ.ಎಸ್‌.ಚೈತ್ರಶ್ರೀ   

ಚಿಕ್ಕಮಗಳೂರು: ಪಕ್ಷದ ಸೂಚನೆ ಪಾಲಿಸಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌.ಚೈತ್ರಶ್ರೀ ಅವರನ್ನು ಬಿಜೆಪಿಯಿಂದ ಸೋಮವಾರ ಉಚ್ಛಾಟನೆ ಮಾಡಲಾಗಿದೆ. 

ಚೈತ್ರಶ್ರೀ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಉಚ್ಛಾಟನಾ ಪತ್ರದಲ್ಲಿ ತಿಳಿಸಿದ್ದಾರೆ.

‘ಪಕ್ಷದ ಆಂತರಿಕ ಒಪ್ಪಂದದಂತೆ ಚೈತ್ರಶ್ರೀ ಅವರು 20 ತಿಂಗಳು ಮುಗಿದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಅವರು, ಒಪ್ಪಂದವನ್ನು ಉಲ್ಲಂಘಿಸಿದ್ದಾರೆ, ಪಕ್ಷದ ಮುಖಂಡರ ಸೂಚನೆಯನ್ನು ಪಾಲಿಸಿಲ್ಲ. ಹೀಗಾಗಿ, ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ’ ಎಂದು ಬಿಜೆಪಿ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪಂಚಾಯತ್‌ ರಾಜ್‌ ನಿಯಮಾನುಸಾರ 30 ತಿಂಗಳು ಅವಧಿ ಮುಗಿಯವವರೆಗೂ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಇಲ್ಲ. ವರಿಷ್ಠರು, ಕೋರ್‌ ಸಮಿತಿ ಸದಸ್ಯರು ಚರ್ಚಿಸಿ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಣಯ ಕೈಗೊಳ್ಳುತ್ತಾರೆ’ ಎಂದರು.

33 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯ 19, ಕಾಂಗ್ರೆಸ್‌ನ 12 ಹಾಗೂ ಜೆಡಿಎಸ್‌ನ ಇಬ್ಬರು ಸದಸ್ಯರು ಇದ್ದಾರೆ.

‘ರಾಜಕೀಯವಾಗಿ ತುಳಿಯಲು ಪಿತೂರಿ’

‘ನಾನೊಬ್ಬ ದಲಿತ ಸಮುದಾಯದ ಮಹಿಳೆ. ನನ್ನನ್ನು ರಾಜಕೀಯವಾಗಿ ತುಳಿಯಲು ಕೆಲ ಮುಖಂಡರು ಪಿತೂರಿ ಮಾಡಿ ಉಚ್ಛಾಟನೆ ಮಾಡಿಸಿದ್ದಾರೆ’ ಎಂದು ಚೈತ್ರಶ್ರೀ ದೂಷಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಅಧ್ಯಕ್ಷ ಸ್ಥಾನ ದಲಿತ ಮಹಿಳೆ ಮೀಸಲಾಗಿದೆ. ಬಿಜೆಪಿಯಿಂದ ಇಬ್ಬರು ದಲಿತ ಸದಸ್ಯೆಯರು ಇದ್ದೇವೆ. ನನಗೆ ಇನ್ನು10 ತಿಂಗಳು ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಕೇಳಿದ್ದೇನೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಪಕ್ಷದಿಂದ ಉಚ್ಛಾಟನೆ ಮಾಡುವಂಥ ಯಾವುದೇ ತಪ್ಪನ್ನು ಮಾಡಿಲ್ಲ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ತಿಳಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.