ADVERTISEMENT

59 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಬೆಂಗಳೂರು: ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾ­ಚಲಯ್ಯ, ಹಿರಿಯ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್‌, ಹಿರಿಯ ಗಾಯಕಿ ಎಸ್‌.ಜಾನಕಿ, ಚಿತ್ರನಟ ವೈಜನಾಥ ಬಿರಾದಾರ್‌ ಪಾಟೀಲ, ನಟಿ ಆರ್‌.ಟಿ.ರಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 59 ಮಂದಿಗೆ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ಮೂಡ್ನಾಕೂಡು ಬಿ.ಚಿನ್ನಸ್ವಾಮಿ, ಶೂದ್ರ ಶ್ರೀನಿವಾಸ್‌ ಸೇರಿದಂತೆ ಸಾಹಿತ್ಯ ಕ್ಷೇತ್ರದ ಐವರು ಹಾಗೂ ‘ಪ್ರಜಾವಾಣಿ’ ನಿವೃತ್ತ ಸಹಾಯಕ ಸಂಪಾದಕ ಲಕ್ಷ್ಮಣ ಕೊಡಸೆ ಸೇರಿದಂತೆ ಐವರು ಪತ್ರಕರ್ತ­ರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಗುರುವಾರ ಸಂಜೆ ಮುಖ್ಯಮಂತ್ರಿ­ಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಗೆ ಅನು­ಮೋದನೆ ಪಡೆದರು. ಬಳಿಕ ಪಟ್ಟಿಯನ್ನು ಪ್ರಕಟಿಸಲಾಯಿತು.

ರಾಜ್ಯೋತ್ಸವದ ದಿನವಾದ ಶನಿವಾರ ಸಂಜೆ ಆರು ಗಂಟೆಗೆ ರವೀಂದ್ರ ಕಲಾ­ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು. ಪುರಸ್ಕೃತರಿಗೆ ತಲಾ ₨ 1 ಲಕ್ಷ ನಗದು ಹಾಗೂ 20 ಗ್ರಾಂ. ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.