ADVERTISEMENT

9 ದಿನಗಳಲ್ಲಿ 4 ಸಾವಿರ ಕ್ಯೂಬಿಕ್‌ ಮೀಟರ್‌ ಹೂಳು ಖಾಲಿ

‘ಹೂಳಿನ ಜಾತ್ರೆ’ಗೆ ಹರಿದು ಬಂತು ₹10.5 ಲಕ್ಷ ದೇಣಿಗೆ, ಕುಗ್ಗದ ರೈತರ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:31 IST
Last Updated 26 ಮೇ 2017, 20:31 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಿಂದ ಶುಕ್ರವಾರವೂ ರೈತರು ಟ್ರ್ಯಾಕ್ಟರ್‌ಗಳಲ್ಲಿ ಹೂಳು ಕೊಂಡೊಯ್ದರು
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಿಂದ ಶುಕ್ರವಾರವೂ ರೈತರು ಟ್ರ್ಯಾಕ್ಟರ್‌ಗಳಲ್ಲಿ ಹೂಳು ಕೊಂಡೊಯ್ದರು   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಅಂಗಳದಲ್ಲಿ ಆರಂಭಗೊಂಡಿರುವ ‘ಹೂಳಿನ ಜಾತ್ರೆ’ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರವೂ ರೈತರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹೊಲಗಳಿಗೆ ಫಲವತ್ತಾದ ಮಣ್ಣನ್ನು ಕೊಂಡೊಯ್ದರು.

ಒಂಬತ್ತು ಎಕರೆ ಪ್ರದೇಶ ವ್ಯಾಪ್ತಿಯಲ್ಲಿನ ನಾಲ್ಕು ಸಾವಿರ ಕ್ಯೂಬಿಕ್‌ ಮೀಟರ್‌ ಹೂಳನ್ನು ತೆಗೆಯಲಾಗಿದೆ ಎಂದು ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಡಿ. ರಂಗಾರೆಡ್ಡಿ ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸಪೇಟೆ– ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುತ್ತಿರುವ ಎಲ್‌ ಅಂಡ್‌ ಟಿ ಕಂಪೆನಿ ಆರು ತಿಂಗಳಿಂದ ರಸ್ತೆ ಕಾಮಗಾರಿಗಾಗಿ ಈ ಹೂಳನ್ನೇ ಬಳಸುತ್ತಿದೆ. ಅಂದಾಜು ಒಂದು ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳನ್ನು ಆ ಸಂಸ್ಥೆಯೊಂದೇ ಖಾಲಿ ಮಾಡಿದೆ. ಇದು ಆಶಾದಾಯಕ ಬೆಳವ
ಣಿಗೆ’ ಎಂದು ಅವರು ವಿವರಿಸಿದರು.

ಪ್ರತಿನಿತ್ಯ ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾಗುವ ಹೂಳೆತ್ತುವ ಕೆಲಸ ಸಂಜೆ 6.30ರ ವರೆಗೂ ನಡೆಯುತ್ತದೆ. ತಾಲ್ಲೂಕಿನ ಮರಿಯಮ್ಮನಹಳ್ಳಿ, ಹಂಪ
ನಕಟ್ಟೆ, ವ್ಯಾಸನಕೆರೆ, ಅಯ್ಯನಹಳ್ಳಿ ಸೇರಿದಂತೆ ಜಲಾಶಯದ ಸುತ್ತಮುತ್ತಲಿನ ಗ್ರಾಮಸ್ಥರು ಹೂಳು ಸಾಗಿಸಿದರು.

ಕಾಡಾ ಅಧ್ಯಕ್ಷ ಪಂಪಯ್ಯ ನಾಯಕ ₹50 ಸಾವಿರ, ರಾಸಾಯನಿಕ ಗೊಬ್ಬರಗಳ ಮಾರಾಟಗಾರರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಅಹಿನಾಥ ರೆಡ್ಡಿ ₹1.50 ಲಕ್ಷ, ಕಾಂಗ್ರೆಸ್‌ ಮುಖಂಡ ಮಹಮ್ಮದ್‌ ಇಮಾಮ್‌ ನಿಯಾಜಿ ₹11 ಸಾವಿರ ಹಾಗೂ ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ ಹಾಗೂ ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಶರಣನಗೌಡ  ತಲಾ ₹10 ಸಾವಿರ ದೇಣಿಗೆ  ನೀಡಿದ್ದಾರೆ. ಹೂಳು ತೆಗೆಯುವ ಕಾಮಗಾರಿ ಆರಂಭವಾದ ನಂತರ ಜನರು ಸ್ಥಳಕ್ಕೇತೆರಳಿ ದೇಣಿಗೆ ನೀಡುತ್ತಿದ್ದಾರೆ.

ಕಮಲಾಪುರ ಕೆರೆ: ತಾಲ್ಲೂಕಿನ ಕಮಲಾಪುರ ಕೆರೆಯಲ್ಲೂ ಹೂಳೆತ್ತುವ ಕೆಲಸ ಭರದಿಂದ ನಡೆಯುತ್ತಿದೆ. ಎಂಟು ದಿನಗಳಲ್ಲೇ ಸುಮಾರು ಹನ್ನೆರಡು ಎಕರೆ ಪ್ರದೇಶದಿಂದ ಐದರಿಂದ ಆರು ಅಡಿಗಳಷ್ಟು ಹೂಳುತೆಗೆಯಲಾಗಿದೆ.

‘ರಸೀದಿ ಪಡೆಯಿರಿ’
‘ದೇಣಿಗೆ ನೀಡುವವರು ತಪ್ಪದೇ ರಸೀದಿ ಪಡೆದುಕೊಳ್ಳಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮನವಿ ಮಾಡಿದರು.

‘ಹೂಳೆತ್ತುವ ಕೆಲಸಕ್ಕಾಗಿ ಕೆಲವರು ರೈತ ಸಂಘದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಒಳ್ಳೆಯ ಉದ್ದೇಶಕ್ಕಾಗಿ ಹಮ್ಮಿಕೊಂಡಿರುವ ಈ ಕೆಲಸಕ್ಕೆ ಕಪ್ಪು ಮಸಿ ಬಳಿಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅಂತಹವರ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಯಾರೇ ಹಣ ಕೊಟ್ಟರೂ ಮರೆಯದೇ ರಸೀದಿ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT