ADVERTISEMENT

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅನುಮಾನ

ದೋಸ್ತಿ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 18:35 IST
Last Updated 20 ಜುಲೈ 2018, 18:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನಸಭೆಯಲ್ಲಿ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧೆಗೆ ಇಳಿಯುವ ಬಗ್ಗೆ ಅನುಮಾನಗಳು ಶುರುವಾಗಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಈ ಹಿಂದೆ ಸ್ಪಷ್ಟ ಪಡಿಸಿದ್ದರು. ಕಾಂಗ್ರೆಸ್‌ 18 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್‌ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಸಂಸದ ಎಂ. ವೀರಪ್ಪ ಮೊಯಿಲಿ ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸೋತ ಅಭ್ಯರ್ಥಿಗಳ ಸಭೆಯಲ್ಲಿ ಕೆಲವು ಮಂದಿ ಅಸಹನೆ ಹೊರ ಹಾಕಿದ್ದರು.

‘ಈ ಮೈತ್ರಿಯಿಂದ ಕಾಂಗ್ರೆಸ್‌ಗೆ ಏನೂ ಲಾಭ ಇಲ್ಲ. ಜೆಡಿಎಸ್‌ ಮತ್ತಷ್ಟು ಪ್ರಬಲವಾಗಲಿದೆ’ ಎಂಬುದು ಅವರ ವಾದ. ಇದರ ಬೆನ್ನಲ್ಲೇ, ದೋಸ್ತಿ ಅನುಮಾನ ಎಂಬ ಸುಳಿವನ್ನು ದಿನೇಶ್‌ ಗುಂಡೂರಾವ್‌ ಶುಕ್ರವಾರ ಬಿಟ್ಟುಕೊಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್‌, ‘ಜೆಡಿಎಸ್ ಜೊತೆಗಿನ ಮೈತ್ರಿಗೆ ನಮ್ಮ ಪಕ್ಷದಲ್ಲಿ ಯಾರೂ ವಿರೋಧ ಮಾಡಿಲ್ಲ. ಹೊಂದಾಣಿಕೆ ವಿಚಾರವಾಗಿ ಪಕ್ಷದ ಮಟ್ಟದಲ್ಲಿ ಇನ್ನೂ ಚರ್ಚೆ ಆರಂಭವಾಗಿಲ್ಲ. ಲೋಕಸಭೆಯ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಬಳಿಕ ಹೈಕಮಾಂಡ್‌ ಮೈತ್ರಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದರು.

ADVERTISEMENT

ಪಕ್ಷದ ಎಲ್ಲ ಪದಾಧಿಕಾರಿಗಳ ಸಭೆ ಶನಿವಾರ ನಡೆಯಲಿದ್ದು, ವೇಣುಗೋಪಾಲ್‌, ದಿನೇಶ್‌ ಗುಂಡೂರಾವ್‌, ಪಕ್ಷದ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

‘ಲೋಕಸಭಾ ಚುನಾವಣೆ, ಸ್ಥಳೀಯ ಸಂಸ್ಥೆ ಹಾಗೂ ಉಪಚುನಾವಣೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ’ ಎಂದು ದಿನೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.