ADVERTISEMENT

‘ಹೊಳೆಮತ್ತಿ’ ವನ್ಯಧಾಮ ಮಾಹಿತಿ ಕೇಂದ್ರ

ಕೊಳ್ಳೇಗಾಲ ತಾಲ್ಲೂಕು ಎಲ್ಲೆಮಾಳ ಗ್ರಾಮದ ಬಳಿಯಲ್ಲಿದೆ ವಿಶಿಷ್ಟ ಮಾಹಿತಿ ಕೇಂದ್ರ

ಸೂರ್ಯನಾರಾಯಣ ವಿ
Published 4 ಜುಲೈ 2018, 19:39 IST
Last Updated 4 ಜುಲೈ 2018, 19:39 IST
ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದ ನೋಟ.
ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದ ನೋಟ.   

ಚಾಮರಾಜನಗರ: ರಾಜ್ಯದ ಪ್ರಮುಖ ಅಭಯಾರಣ್ಯಗಳಲ್ಲಿ ಒಂದಾದ ಮಲೆಮಹದೇಶ್ವರ ವನ್ಯಧಾಮಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅರಣ್ಯ ಕುತೂಹಲಿಗಳ ಮುಂದಿಡಲು ವಿಶಿಷ್ಟವಾದ ಮಾಹಿತಿ ಕೇಂದ್ರವೊಂದು ಕೊಳ್ಳೇಗಾಲ ತಾಲ್ಲೂಕು ಎಲ್ಲೆಮಾಳಗ್ರಾಮದ ಹತ್ತಿರ ತಲೆ ಎತ್ತಿದೆ. ಹೆಸರು ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರ.

ಮಲೆಮಹದೇಶ್ವರ ಮನ್ಯಧಾಮದಲ್ಲಿರುವ ಜೀವಿ ಹಾಗೂ ಸಸ್ಯಸಂಕುಲಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ವನ್ಯಜೀವಿ ಸಂರಕ್ಷಣೆಯ ಮಹತ್ವ ಮತ್ತು ಅದಕ್ಕಿರುವ ತೊಡಕುಗಳ ಬಗ್ಗೆಯೂ ವಿವರಣೆ ನೀಡುವ ಉದ್ದೇಶವನ್ನು ಕೇಂದ್ರ ಹೊಂದಿದೆ.

ನೇಚರ್ ಕನ್ಸರ್ವೇಷನ್ ಫೌಂಡೇಶನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಕೇಂದ್ರವುರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿದೆ. ಅರ್ಧ ಎಕರೆ ಜಾಗದಲ್ಲಿ ಹರಡಿಕೊಂಡಿರುವ ಕೇಂದ್ರ ಶುಕ್ರವಾರ ಉದ್ಘಾಟನೆಗೊಳ್ಳಲಿದೆ.

ADVERTISEMENT

ನಿಸರ್ಗ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ (ಐಯುಸಿಎನ್‌) ಮತ್ತು ಜರ್ಮನಿ ಸರ್ಕಾರ ಬೆಂಬಲಿತಇಂಟೆಗ್ರೇಟೆಡ್ ಟೈಗರ್ ಹ್ಯಾಬಿಟಾಟ್ ಕನ್ಸರ್ವೇಷನ್ ಪ್ರಾಜೆಕ್ಟ್‌ ಕೂಡ ಇದರ ಅಭಿವೃದ್ಧಿಗೆಕೈಜೋಡಿಸಿದೆ.

ಸ್ಥಳೀಯರನ್ನು ತಲುಪುವ ಉದ್ದೇಶ: ಸಾಮಾನ್ಯವಾಗಿಪ್ರವಾಸಿಗರನ್ನು ಕೇಂದ್ರೀಕರಿಸಿ ಇಂತಹ ಮಾಹಿತಿಗಳನ್ನು ನಿರ್ಮಿಸಲಾಗುತ್ತದೆ. ಆದರೆ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಸಮುದಾಯ,ಕಾಡಂಚಿನ ಮಕ್ಕಳು, ವಿದ್ಯಾರ್ಥಿಗಳು ಸ್ಥಳೀಯ ಸಾಮಾಜಿಕ ನಾಯಕರು... ಹೀಗೆ ಸ್ಥಳೀಯರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಅಭಿವೃದ್ಧಿ ಪಡಿಸಲಾಗಿದೆ.

ವಿಶಿಷ್ಟ ಕೇಂದ್ರ: ಚಿತ್ರಕಲೆಯ ಮೂಲಕ ಕಲಾತ್ಮಕವಾಗಿ ಮಾಹಿತಿ ನೀಡಲು ಯತ್ನಿಸಿರುವುದು ಈ ಕೇಂದ್ರದ ವೈಶಿಷ್ಟ್ಯ.ಸ್ಥಳೀಯ ಪ್ರಾಣಿ ಪಕ್ಷಿಗಳು, ಮರಗಿಡಗಳು, ಕೀಟಗಳು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಾಣುವ ವಿವಿಧ ಆವಾಸ ಸ್ಥಾನಗಳು (ಕುರುಚಲು ಕಾಡು, ಎಲೆ ಉದುರುವ ಕಾಡುಗಳು ಮತ್ತು ಅರೆ-ನಿತ್ಯ ಹರಿದ್ವರ್ಣದ ಕಾಡುಗಳು), ಕೀಟ ಸಸ್ಯ... ಸಂಬಂಧ ಹೀಗೆ ಎಲ್ಲ ವಿಚಾರಗಳನ್ನು ಚಿತ್ರ ಮುಖೇನ ವಿವರಿಸಲಾಗಿದೆ. ವನ್ಯಜೀವಿಗಳ ಜೀವಕ್ರಮವನ್ನು ಸರಳವಾಗಿ ಕಥೆಗಳ ಮೂಲಕ ವಿವರಿಸುವ ಪ್ರಯತ್ನವೂ ಇಲ್ಲಿದೆ.

ಕಾವೇರಿ, ಪಾಲಾರ್ ನದಿ, ಉಡುತೊರೆಹಳ್ಳ, ದೊಡ್ಡಹಳ್ಳ, ಮಿನ್ನಟ್‌ ಹಳ್ಳ ಮತ್ತು ಇತರ ನದಿ, ಹೊಳೆ ಪಾತ್ರಗಳಲ್ಲಿ ಮಾತ್ರ ಬೆಳೆಯುವ ಸುಂದರ, ಬೃಹತ್ ಮರವಾದ ಹೊಳೆಮತ್ತಿಯ ಹೆಸರನ್ನು ಈ ಮಾಹಿತಿ ಕೇಂದ್ರಕ್ಕೆ ಇಡಲಾಗಿದೆ.

‘ಈ ಮರ ನಮ್ಮ ನದಿ, ಹೊಳೆ ಮತ್ತು ನೀರಿನ ಸಂಕೇತವಾಗಿರುವುದರಿಂದ ಮತ್ತು ಚಾಮರಾಜನಗರ ಜಿಲ್ಲೆಯ ಕೆಲ ಭಾಗಗಳಲ್ಲಿ ಇದು ಯಥೇಚ್ಛವಾಗಿ ಬೆಳೆಯುವುದಿರುವುದರಿಂದ ಅದರ ಹೆಸರನ್ನೇ ಇಡಲಾಗಿದೆ’ ಎಂದು ಹೇಳುತ್ತಾರೆ ಸಂಜಯ್‌ ಗುಬ್ಬಿ.

ನಿಸರ್ಗ ಚಿತ್ರಕಲಾವಿದೆ ಸಂಗೀತಾ ಕಡೂರ್ ಈ ಮಾಹಿತಿ ಕೇಂದ್ರದ ವಿನ್ಯಾಸ ಮಾಡಿದ್ದಾರೆ.ಅವರೊಡನೆ ಅಭಿಷೇಕ್ ಕೃಷ್ಣಗೋಪಾಲ್, ಶಿಲ್ಪಶ್ರೀ, ಸರ್ತಾಜ್ ಘುಮನ್, ಆರ್‌.ಅವಿನಾಶ್, ಅಭಿಜ್ಞಾ ದೇಸಾಯಿ, ವನ್ಯ ಜೋಸೆಫ್ ಮತ್ತಿತರ ಚಿತ್ರಕಲಾವಿದರು ಕುಂಚ ಹಿಡಿದು ಮಲೆಮಹದೇಶ್ವರ ವನ್ಯಧಾಮವನ್ನು ಬಣ್ಣಗಳಲ್ಲಿ ಹಿಡಿದಿಟ್ಟಿದ್ದಾರೆ. ಸಂಜಯ್‌ ಗುಬ್ಬಿ ಅವರ ದೊಡ್ಡ ತಂಡದೊಂದಿಗೆ ಸ್ಥಳೀಯರು ಕೂಡ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

‘ವನ್ಯಸಂಪತ್ತಿನ ಮಹತ್ವ ತೋರುವ ಕೇಂದ್ರ’
ವನ್ಯಜೀವಿ ಮತ್ತು ನಿಸರ್ಗದ ಬಗ್ಗೆ ಕನ್ನಡದಲ್ಲಿ ಸ್ಥಳೀಯ ಸಮುದಾಯದವರಿಗೆ, ಕಾಡಂಚಿನ ಮಕ್ಕಳು, ವಿದ್ಯಾರ್ಥಿಗಳು, ಮಲೆಮಹದೇಶ್ವರಬೆಟ್ಟಕ್ಕೆ ಹೋಗುವ ಭಕ್ತಾದಿಗಳಿಗೆ ವಿಶಿಷ್ಟ ವನ್ಯಸಂಪತ್ತಿನ ಮಹತ್ವವನ್ನು ಎತ್ತಿ ತೋರುತ್ತದೆ.

ಒಂದು ವರ್ಷದಿಂದಪರಿಕಲ್ಪಿಸಿ, ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಈ ಪ್ರಕೃತಿ ಕೇಂದ್ರವನ್ನು ರಾಜ್ಯಕ್ಕೆ ಅರ್ಪಿಸಲು ಹೆಮ್ಮೆಯಾಗುತ್ತಿದೆ. ಪಂಜಾಬ್, ಗುಜರಾತ್, ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದ ಕಲಾವಿದರು ಸಹ ಈ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸುವಲ್ಲಿ ಭಾಗಿಯಾಗಿದ್ದಾರೆ.
–ಸಂಜಯ್ ಗುಬ್ಬಿ,ವನ್ಯಜೀವಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.