ADVERTISEMENT

ಕೊಡಗು: ಹತ್ತಿರದ ಶಾಲೆಗೆ ವಿದ್ಯಾರ್ಥಿಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 9:57 IST
Last Updated 23 ಆಗಸ್ಟ್ 2018, 9:57 IST
ಸಚಿವ ಎನ್‌. ಮಹೇಶ್
ಸಚಿವ ಎನ್‌. ಮಹೇಶ್   

ಮಡಿಕೇರಿ: ‘ಸೋಮವಾರಪೇಟೆ ಹಾಗೂ ಮಡಿಕೇರಿ ತಾಲ್ಲೂಕಿನಲ್ಲಿ ಮಳೆ, ಭೂಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿರುವ 61 ಶಾಲೆಯ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಸ್ಥಳಾಂತರ ಮಾಡಲಾಗುವುದು’ ಎಂದು ಶಿಕ್ಷಣ ಸಚಿವ ಎನ್‌. ಮಹೇಶ್ ಇಲ್ಲಿ ತಿಳಿಸಿದರು.

‘ರಸ್ತೆ ಸಂಪರ್ಕ ಕಡಿತಗೊಂಡಿದ್ದು ಶಾಲೆಗಳಿಗೆ ತಲುಪಲು ಸಾಧ್ಯವಿಲ್ಲದ ಕಡೆ ಪರಿಹಾರ ಕೇಂದ್ರದಲ್ಲೇ ಶಿಕ್ಷಕರನ್ನು ನಿಯೋಜಿಸಿ ಕಲಿಕಾ ಚಟುವಟಿಕೆ ಆರಂಭಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

‘9 ಶಾಲೆಯ ಕಟ್ಟಡಗಳು ಪೂರ್ಣ ಕುಸಿದಿವೆ. 163 ಕೊಠಡಿಗಳು ಹಾನಿಗೀಡಾಗಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅಂದಾಜು ₹ 4 ಕೋಟಿಯಷ್ಟು ಅನುದಾನದ ಅಗತ್ಯವಿದೆ. ರಾಜ್ಯ ಸರ್ಕಾರಿ ನೌಕರರು, ಶಾಲಾ ಶಿಕ್ಷಕರು ಒಂದು ದಿನದ ಸಂಬಳವನ್ನು ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ನೀಡಲು ತೀರ್ಮಾನಿಸಿದ್ದಾರೆ. ಅದರಿಂದ₹ 100 ಕೋಟಿ ಸಿಗಲಿದೆ. ಶಿಕ್ಷಕರಿಂದಲೇ ₹ 40 ಕೋಟಿ ಸಂಗ್ರಹವಾಗಲಿದೆ. ರಾಜ್ಯದಲ್ಲಿ ಶಾಲಾ ಕೊಠಡಿ ದುರಸ್ತಿಗೆ ₹ 120 ಕೋಟಿ ಅನುದಾನ ಮೀಸಲಿಡಲಾಗಿದ್ದು, ಅದರಿಂದ ಶಾಲೆಗಳ ದುರಸ್ತಿಗೆ ಅಗತ್ಯವಿರುವಷ್ಟು ಅನುದಾನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಸಚಿವರು ಹೇಳಿದರು.

‘ಮಳೆಯಿಂದ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ತಿಂಗಳು ರಜೆ ನೀಡಲಾಗಿತ್ತು. ಶನಿವಾರ, ಭಾನುವಾರ ಶಾಲಾ– ಕಾಲೇಜು ನಡೆಸಿ, ಪಾಠ ಪೂರ್ಣಗೊಳಿಸಲಾಗುವುದು. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮನೆ ಕುಸಿತದಿಂದ ಪಠ್ಯ ಪುಸ್ತಕ, ನೋಟ್‌ಬುಕ್‌ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಣೆ ಮಾಡಲಾವುದು’ ಎಂದು ಭರವಸೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ 1,573 ಮಂಜೂರಾತಿ ಶಿಕ್ಷಕರ ಹುದ್ದೆಗಳಿದ್ದು, 1,371 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 202 ಹುದ್ದೆಗಳು ಖಾಲಿಯಿವೆ. ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದು ಹೆಚ್ಚುವರಿ ಶಿಕ್ಷಕರ ಈ ವರ್ಷ ವರ್ಗಾವಣೆ ಮಾಡುವುದಿಲ್ಲ. ಈ ಜಿಲ್ಲೆಗೆ ಕೋರಿಕೆ ವರ್ಗಾವಣೆಗ ಮನವಿ ಮಾಡಿದ್ದರೆ ತಕ್ಷಣವೇ ವರ್ಗ ಮಾಡಲಾಗುವುದು’ ಎಂದು ಹೇಳಿದರು.

ಮೊದಲ ದಿವಸ ಹಾಜರಾತಿ ಕಡಿಮೆ
ಮಡಿಕೇರಿ: 61 ಶಾಲೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಶಾಲೆಗಳು ಗುರುವಾರದಿಂದ ಆರಂಭಗೊಂಡವು. ಆದರೆ, ಮಕ್ಕಳ ಹಾಜರಾತಿ ಕಡಿಮೆಯಿತ್ತು. ಸುಂಟಿಕೊಪ್ಪದ ಸರ್ಕಾರಿ ಪ್ರೌಢಶಾಲೆಗೆ ಸಂತ್ರಸ್ತ ಮಕ್ಕಳೂ ಹಾಜರಾಗಿ ಪಾಠ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.