ADVERTISEMENT

ಹಳಿ ಕಿತ್ತರೆ ರೈಲು ಬಿದ್ದು ಹೋಯ್ತದೆ: ಎ.ಟಿ.ರಾಮಸ್ವಾಮಿ ವ್ಯಂಗ್ಯ

ಕಾಲು ಎಳೆದವರ ಕಾಲ ಮೇಲೆಯೇ ಚಪ್ಪಡಿ ಕಲ್ಲು: ರಾಮಸ್ವಾಮಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:06 IST
Last Updated 3 ಜುಲೈ 2018, 20:06 IST

ಬೆಂಗಳೂರು:‘ಈ ಸಮ್ಮಿಶ್ರ ಸರ್ಕಾರ ರೈಲಿನಂತೆ ಎರಡು ಹಳಿಗಳ ಮೇಲೆ ಓಡ್ತಾ ಇದೆ. ಎಂಜಿನ್‌ ಅಲ್ಲಿದೆ (ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ). ಒಂದು ಹಳಿ ಕಿತ್ತರೂ ರೈಲು ಬಿದ್ದು ಹೋಯ್ತದೆ’

–ಇದೇನು ವಿರೋಧಪಕ್ಷ ಬಿಜೆಪಿ ಸದಸ್ಯರ ಟೀಕೆಯಲ್ಲ; ದೋಸ್ತಿ ಸರ್ಕಾರದ ಭಾಗವೇ ಆದ ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ಅವರ ವ್ಯಾಖ್ಯಾನ.

ವಿಧಾನಸಭೆಯಲ್ಲಿ ಮಂಗಳವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸಲು ಕಾಂಗ್ರೆಸ್‌ನ ಈಶ್ವರ ಖಂಡ್ರೆ ಮಂಡಿಸಿದ ಸೂಚನೆಯನ್ನು ಅನುಮೋದಿಸಿ ಅವರು ಮಾತನಾಡಿದರು.

ADVERTISEMENT

‘ಎಲ್ಲರೂ ಮಂತ್ರಿ ಆಗಬೇಕು, ಎಲ್ಲರಿಗೂ ಇಂತಹದ್ದೇ ಖಾತೆ, ಅಧಿಕಾರಿ, ಕೊಠಡಿ, ಮನೆ ಬೇಕು. ಮುಖ್ಯಮಂತ್ರಿಯವರ ಮೇಲೆ ಈ ರೀತಿ ಒತ್ತಡ ಹಾಕುತ್ತಾ ಹೋದರೆ ಅವರು ಜನರ ಕೆಲಸವನ್ನು ಮಾಡುವುದು ಯಾವಾಗ? ಸಹನೆಯ ಕಟ್ಟೆ ಒಡೆಯುವಂತೆ ಮಾಡಬೇಡಿ. ಜನರ ಆಶಯಕ್ಕೆ ಭಂಗ ಬರದಂತೆ ನೋಡಿಕೊಳ್ಳಿ’ ಎಂದು ಮೈತ್ರಿಕೂಟದ ಶಾಸಕರಿಗೆ ತಾಕೀತು ಮಾಡಿದರು.

‘ಕಾಲು ಎಳೆಯುತ್ತಾ ಕಾಲಹರಣ ಮಾಡಿದರೆ ನಿಮ್ಮ ಕಾಲಮೇಲೆಯೇ ಚಪ್ಪಡಿ ಕಲ್ಲು ಹಾಕಿಕೊಳ್ತೀರಿ. ಎದ್ದು ನಿಲ್ಲುವುದಕ್ಕೆ ಆಗದಂತೆ ಪೆಟ್ಟುತಿಂದು ಬೀಳ್ತೀರಿ. ಮೈತ್ರಿ ಧರ್ಮವನ್ನು ಎಲ್ಲರೂ ಕಾಪಾಡಿಕೊಂಡು ಹೋಗದೆ ಬೇರೆ ದಾರಿಯಿಲ್ಲ’ ಎಂದು ಎಚ್ಚರಿಸಿದರು.

‘ಹಿಂದೆ ಕುಳಿತಿರುವ ನಾವೇನು ಕನಿಷ್ಠರಲ್ಲ. ನಮಗಿಂತಲೂ ಅರ್ಹರಾದವರು ಸದನದ ಹೊರಗೆ ಎಷ್ಟೋ ಮಂದಿ ಇದ್ದಾರೆ. ಮುಂದಿನ ಎರಡು ಸಾಲಿನಲ್ಲಿ ಕುಳಿತಿರುವ ನಿಮಗೆ (ಸಚಿವರು) ಯಾವ, ಯಾವ ಕಾರಣಕ್ಕೋ ಅವಕಾಶ ಸಿಕ್ಕಿದೆ. ನಾವೆಲ್ಲ ಇಲ್ಲಿಗೆ ಬಂದಿದ್ದು ಜನಸೇವೆಗಾಗಿ ಎಂಬುದನ್ನು ನೆನಪಿಡಿ’ ಎಂದು ಬುದ್ಧಿವಾದ ಹೇಳಿದರು.

‘ಕಾಲಘಟ್ಟ ಹೇಗಿದೆಯೆಂದರೆ ರಾಜಕಾರಣದ ಮೌಲ್ಯದ ಗೆರೆಗಳನ್ನೆಲ್ಲ ನಾವೀಗ ಕಿತ್ತೆಸೆದಿದ್ದೇವೆ. 24 ಕ್ಯಾರೆಟ್‌ ಚಿನ್ನದಲ್ಲಿ ಯಾರೂ ಆಭರಣ ಮಾಡಲ್ಲ. 22 ಇಲ್ಲವೆ 20 ಕ್ಯಾರೆಟ್‌ ಚಿನ್ನದಲ್ಲಿ ಅವುಗಳನ್ನು ತಯಾರು ಮಾಡುತ್ತಾರೆ. ಆದರೆ, ಅದು ರೋಡ್‌ ಗೋಲ್ಡ್‌ ಮಟ್ಟಕ್ಕೆ ಇಳಿದರೆ ಏನು ಮಾಡುವುದು’ ಎಂದು ಉದ್ಗಾರ ತೆಗೆದರು.

‘ಸೇವೆ–ಸೌಲಭ್ಯಗಳು ಸಿಗಲಿಲ್ಲ; ಅವುಗಳನ್ನು ಕೊಂಡುಕೊಂಡೆವು ಎನ್ನುವ ಭಾವ ಜನರಲ್ಲಿದೆ. ಅವರಿಗೆ ಸೌಭಾಗ್ಯ ಕೊಡದಿದ್ದರೂ ಸಂಕಷ್ಟ ಉಂಟು ಮಾಡಬಾರದು. ಸ್ವರ್ಗವನ್ನು ಧರೆಗೆ ತರಲಾಗದಿದ್ದರೂ ನರಕ ಸೃಷ್ಟಿಸುವುದು ಬೇಡ’ ಎಂದು ಸೂಚ್ಯವಾಗಿ ಹೇಳಿದರು.

‘ವಿರೋಧಪಕ್ಷದ ನಾಯಕರು ಈಗಿನ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂದಿದ್ದಾರೆ. ಹಾಗಾದರೆ 2006ರಲ್ಲಿ (ಜೆಡಿಎಸ್‌–ಬಿಜೆಪಿ) ಆಗಿದ್ದೇನು ಪವಿತ್ರ ಮೈತ್ರಿಯೇ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿಬಿಟ್ಟರು ಎಂದೂ ಬಿಜೆಪಿಯವರು ಹೇಳುತ್ತಿದ್ದಾರೆ. ಚುನಾವಣೆ ಇರುವುದೇ ಹೋರಾಟಕ್ಕೆ ಅಲ್ಲವೇ’ ಎಂದು ಅವರು ಕೇಳಿದರು.

ಹಿಂದೆ (2006ರಲ್ಲಿ) ಜೆಡಿಎಸ್‌–ಬಿಜೆಪಿ ಸರ್ಕಾರದ ಪರವಾಗಿ ನಿಂತು ಮಾತನಾಡಿದ್ದೆ. ಈಗ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ ಸಮರ್ಥಿಸಿಕೊಳ್ಳುವ ಸಂದಿಗ್ಧತೆ ಬಂದಿದೆ.

-ಎ.ಟಿ.ರಾಮಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.