ADVERTISEMENT

ಅತ್ಯಮೂಲ್ಯವಾದುದನ್ನು ಕಳೆದುಕೊಂಡಿದ್ದೇನೆ’: ಅಬ್ದುಲ್ಲಾ ಕುರ್ದಿ

ಮೃತಪಟ್ಟ ಸಿರಿಯಾದ 3 ವರ್ಷದ ಬಾಲಕ ಆಯ್ಲನ್‌ ಕುರ್ದಿಯ ತಂದೆ ರೋದನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 10:19 IST
Last Updated 4 ಸೆಪ್ಟೆಂಬರ್ 2015, 10:19 IST

ಇಸ್ತಾಂಬುಲ್‌: ‘ನನ್ನ ಪಾಲಿಗೆ ಯಾವುದು ಅತ್ಯಮೂಲ್ಯವಾಗಿತ್ತೋ ಅದನ್ನು ಕಳೆದುಕೊಂಡಿದ್ದೇನೆ. ಈಗ ಇಡೀ ವಿಶ್ವವನ್ನೇ ನೀವು ನನ್ನೆದುರು ತಂದಿಟ್ಟರೂ ನನಗೆ ಬೇಕಿಲ್ಲ. ಜೀವನದಲ್ಲಿ ಇನ್ನೇನೂ ಬಾಕಿ ಉಳಿದಿಲ್ಲ’ ಎಂದು ಇಸ್ಲಾಮಿಕ್‌ ಉಗ್ರರ ದಾಳಿಯಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಮೃತಪಟ್ಟ ಸಿರಿಯಾದ ಮೂರು ವರ್ಷದ ಬಾಲಕ ಆಯ್ಲನ್‌ ಕುರ್ದಿಯ ತಂದೆ ಅಬ್ದುಲ್ಲಾ ಕುರ್ದಿ ಹೇಳಿದ್ದಾರೆ.

ಐಎಸ್‌ ಉಗ್ರರ ದಾಳಿಯಿಂದ ತತ್ತರಿಸಿರುವ ಸಿರಿಯಾದಿಂದ ಅಬ್ದುಲ್ಲಾ  ಕುಟುಂಬ ಯೂರೋಪ್‌ಗೆ ಪಲಾಯನ ಮಾಡಲು ನಿರ್ಧರಿಸಿತ್ತು.  ಕಡಲ್ಗಳ್ಳರು ಹೊಂದಿಸಿಕೊಟ್ಟಿದ್ದ ಮೋಟಾರ್‌ ಬೋಟ್‌ನಲ್ಲಿ ಟರ್ಕಿಯಿಂದ ಗ್ರೀಸ್‌ಗೆ ಹೋಗಲು ಈ ಕುಟುಂಬ ಯೋಜನೆ ರೂಪಿಸಿತ್ತು. 

ಕೆನಡಾಕ್ಕೆ ಹೋಗಿ ಹೊಸ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿತ್ತು . ಆದರೆ, ವಿಧಿಯಾಟ ಬೇರೇಯೇ ಇತ್ತು.  ಟರ್ಕಿಯ ಬೋರ್‌ಡಂ ಕಡಲ ಕಿನಾರೆಯಿಂದ ಹೊರಟ ಇವರ ಮೋಟಾರ್‌ಬೋಟ್‌ ಸ್ವಲ್ಪದರಲ್ಲೇ  ಸಮುದ್ರದ ಬೃಹತ್‌ ಅಲೆಗಳಿಗೆ ಸಿಲುಕಿ ಮುಗುಚಿಬಿತ್ತು. ಅಬ್ದುಲ್ಲಾ, ಅವರ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳು ನೀರಿನಲ್ಲಿ ಮುಳುಗಿದರು. ಅಬ್ದುಲ್ಲಾ ತನ್ನಿಬ್ಬರು ಮಕ್ಕಳನ್ನು ರಕ್ಷಿಸಲು ಸರ್ವಪ್ರಯತ್ನ ನಡೆಸಿದರು. ಆದರೆ, ಅಲೆಯ ಸೆಳೆತಕ್ಕೆ ಸಿಕ್ಕಿ ಪುಟ್ಟ ಆಯ್ಲನ್‌ ಮೃತಪಟ್ಟ. ಮತ್ತೊಬ್ಬ ಮಗ ಗಾಲಿಬ್‌ ಮತ್ತು ಪತ್ನಿ ರೆಹಾನಾ ಕೂಡ ನೀರಿನಲ್ಲಿ ಮುಳುಗಿದರು. ಕಣ್ಣೆದುರಿಗೇ ಇಡೀ ಕುಟುಂಬವೇ ಸಮುದ್ರದಲ್ಲಿ ಮುಳುಗಿತು. ಕೊನೆಗೆ ಬದುಕಿ ಉಳಿದದ್ದು ಅಬ್ದುಲ್‌ ಮಾತ್ರ.

‘ನನಗಿನ್ನು ಏನೂ ಬೇಡ. ಇಡೀ ವಿಶ್ವವನ್ನೇ ನೀವು ನನ್ನ ಎದುರು ತಂದಿಟ್ಟರೂ ನನಗೆ ಬೇಡ. ನನ್ನ ಪಾಲಿಗೆ ಯಾವುದು ಅಮೂಲ್ಯವಾಗಿತ್ತೋ ಅದನ್ನು ಕಳೆದುಕೊಂಡಿದ್ದೇನೆ’ ಎಂದು ಮರಣೋತ್ತರ ಪರೀಕ್ಷೆಯ ನಂತರ, ತನ್ನ ಕುಟುಂಬದ ಸದಸ್ಯರ ಮೃತದೇಹಗಳನ್ನು ಸ್ವೀಕರಿಸಲು  ಗುರುವಾರ ಟರ್ಕಿಯ ಮೊಗ್ಲಾದಲ್ಲಿನ ಆಸ್ಪತ್ರೆಯ ಎದುರು ರೋದಿಸುತ್ತಾ ನಿಂತ ಕುರ್ದಿ ತನ್ನನ್ನು ಸುತ್ತುವರಿದ ಸುದ್ದಿಗಾರರಿಗೆ ಹೇಳಿದರು.

ಟರ್ಕಿಯ ಬೋರ್‌ಡಂ ಕಡಲ ಕಿನಾರೆಯಲ್ಲಿ ಸಿಕ್ಕ ಆಯ್ಲನ್‌ ಕುರ್ದಿಯ ಚಿತ್ರದ ಕುರಿತು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇಸ್ಲಾಮಿಕ್  ಸ್ಟೇಟ್‌ ಉಗ್ರರ ಕೃತ್ಯಕ್ಕೆ ವಿಶ್ವದೆಲ್ಲಡೆ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT