ADVERTISEMENT

ಅಪಹೃತ ಪಾಕ್‌ ಪತ್ರಕರ್ತೆ ರಕ್ಷಣೆ

ಎರಡು ವರ್ಷಗಳ ನಂತರ ಮನೆಗೆ ಮರಳಿದ ‘ನಯಾ ಖಬರ್‌’ನ ವರದಿಗಾರ್ತಿ

ಪಿಟಿಐ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST
ಜೀನತ್‌ ಶಹಜಾದಿ
ಜೀನತ್‌ ಶಹಜಾದಿ   

ಲಾಹೋರ್‌: ಭಾರತ ಸಂಜಾತ ಎಂಜಿನಿಯರ್‌ ಪರ ದನಿ ಎತ್ತಿ ಎರಡು ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಪಾಕಿಸ್ತಾನದ ಪತ್ರಕರ್ತೆ ಪತ್ತೆಯಾಗಿದ್ದಾರೆ.

‘ನಯಾ ಖಬರ್‌’ ಮತ್ತು ‘ಮೆಟ್ರೊ ನ್ಯೂಸ್‌’ ಟಿ.ವಿ ಚಾನೆಲ್‌ನ ವರದಿಗಾರ್ತಿ, 26 ವರ್ಷದ ಜೀನತ್‌ ಶಹಜಾದಿ ಅವರನ್ನು ರಕ್ಷಣೆ ಮಾಡಲಾಗಿದೆ. 2015ರ ಆಗಸ್ಟ್‌ 19ರಂದು ಜೀನತ್‌  ಲಾಹೋರ್‌ನಲ್ಲಿರುವ ಮನೆಯಿಂದ ಕಚೇರಿಗೆ ಆಟೊದಲ್ಲಿ ಹೊರಟಿದ್ದಾಗ ಅಪಹರಣವಾಗಿತ್ತು.

‘ಪಾಕ್‌– ಆಫ್ಗನ್‌ ಗಡಿ ಪ್ರದೇಶದ ಸಮೀಪ ಜೀನತ್‌ ಅವರನ್ನು ರಕ್ಷಿಸಲಾಗಿದೆ. ದೇಶ ವಿರೋಧಿ ಶಕ್ತಿಗಳು ಅವರನ್ನು ಅಪಹರಿಸಿದ್ದರು. ಬಲೂಚಿಸ್ತಾನ ಮತ್ತು ಖೈಬರ್‌ ಪುಖ್ತುಂಕ್ವಾ ಪ್ರಾಂತ್ಯದ ಬುಡಕಟ್ಟು ಜನರು ಜೀನತ್‌ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಕಣ್ಮರೆ ಕುರಿತ ವಿಚಾರಣೆ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಜಾವೆದ್ ಇಕ್ಬಾಲ್‌ ಹೇಳಿದ್ದಾರೆ.

ADVERTISEMENT

ಮುಂಬೈ ಮೂಲದ ಎಂಜಿನಿಯರ್‌ ಹಮೀದ್‌ ಅನ್ಸಾರಿ ಆನ್‌ಲೈನ್‌ನಲ್ಲಿ ಪರಿಚಯವಾದ ಗೆಳತಿಯನ್ನು ನೋಡಲು ಆಫ್ಗಾನಿಸ್ತಾನದ ಮೂಲಕ ಪಾಕಿಸ್ತಾನ ಪ್ರವೇಶ ಮಾಡಿದ್ದರು. ಅಕ್ರಮ ಪ್ರವೇಶ ಮತ್ತು ಗೂಢಚರ್ಯೆ ಆರೋಪದ ಮೇಲೆ ಪಾಕ್‌ ಸೇನಾ ನ್ಯಾಯಾಲಯ ಅನ್ಸಾರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈಗಲೂ ಅನ್ಸಾರಿ ಪಾಕ್‌ ಜೈಲಿನಲ್ಲಿದ್ದಾರೆ.

ಅನ್ಸಾರಿ ಪರ ಜೀನತ್‌ ದನಿ ಎತ್ತಿದ್ದರು. ಮಾನವೀಯತೆ ದೃಷ್ಟಿಯಿಂದ ಅನ್ಸಾರಿ ನೆರವಿಗೆ ಧಾವಿಸಿದ ಅವರು ನ್ಯಾಯಾಲಯಕ್ಕೆ  ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಎರಡು ವರ್ಷಗಳ ಹಿಂದೆ ಶಹಜಾದಿ ಅವರು,ಅನ್ಸಾರಿ ಅವರ ತಾಯಿ ಪೌಜಿಯಾ ಅನ್ಸಾರಿ ಅವರ ಪರವಾಗಿ ಸುಪ್ರೀಂಕೋರ್ಟ್‌ನ ಮಾನವ ಹಕ್ಕುಗಳ ಘಟಕಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದರು.

‘ಅನ್ಸಾರಿ ಪರ ನಿಂತ ಜೀನತ್‌ಗೆ ಜೀವ ಬೆದರಿಕೆ ಇತ್ತು. ಅವರ ಪರ ದನಿ ಎತ್ತದಂತೆ ಅಪರಿಚಿತ ವ್ಯಕ್ತಿಗಳು ಕರೆ ಮಾಡುತ್ತಿದ್ದರು. ನೆರವು ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳದಂತೆ ನಾವು ಅವಳಿಗೆ ಸಲಹೆ ನೀಡಿದ್ದೇವು. ಆದರೆ, ಅನ್ಸಾರಿ ಅವರ ತಾಯಿಯೊಂದಿಗೆ ಮಾತನಾಡಿದ ಬಳಿಕ ಪುತ್ರನ ಬಿಡುಗಡೆಗೆ ನೆರವು ನೀಡುವ ಭರವಸೆ ನೀಡಿದ್ದರು’ ಎಂದು ಜೀನತ್‌ ಸಹೋದರ ಸಲ್ಮಾನ್‌ ಲತಿಫ್‌ ಹೇಳಿದ್ದಾರೆ.

ಶಹಜಾದ್‌ ಕಣ್ಮರೆಯಾದ ನಂತರ ಸಹೋದರ ಸದ್ದಾಂ ಹುಸೇನ್‌ ಕಳೆದ ವರ್ಷದ ಮಾರ್ಚ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಪ್ರಕರಣ ಭಾರಿ ಸುದ್ದಿ ಮಾಡಿತ್ತು.

‘ಜೀನತ್‌ ಶನಿವಾರ ಮನೆಗೆ ಮರಳಿದ್ದಾರೆ. ಎರಡು ವರ್ಷದ ನಂತರ ಅವರು ಸುರಕ್ಷಿತವಾಗಿ ಮರಳಿರುವುದು ನಮಗೆ ಸಂತೋಷ ತಂದಿದೆ’ ಎಂದು ಮಾನವ ಹಕ್ಕುಗಳ ಕಾರ್ಯಕರ್ತೆ ಬೀನಾ ಸರ್ವರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.