ADVERTISEMENT

ಆಂತರಿಕ ವಿಚಾರ: ಪಾಕ್‌ ತಿರುಗೇಟು

ಗಿಲ್ಗಿಟ್‌-ಬಾಲ್ಟಿಸ್ತಾನದ ಉದ್ದೇಶಿತ ಚುನಾವಣೆಗೆ ಭಾರತದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಇಸ್ಲಾಮಾಬಾದ್‌ (ಪಿಟಿಐ): ಗಿಲ್ಗಿಟ್‌-ಬಾಲ್ಟಿಸ್ತಾನಗಳಲ್ಲಿ ನಡೆಸಲು ಉದ್ದೇಶಿಸಿರುವ ಚುನಾವಣೆಗೆ ಭಾರತ ಆಕ್ಷೇಪ ವ್ಯಕ್ತಪಡಿಸಿರುವುದು ‘ದೇಶದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿದಂತಾಗಿದೆ’ ಎಂದು ಪಾಕಿಸ್ತಾನ ಬುಧವಾರ ಪ್ರತಿಕ್ರಿಯಿಸಿದೆ.

ಜೂನ್‌ ಎಂಟರಂದು ಚುನಾವಣೆ ನಡೆಸಲು ಮುಂದಾಗಿರುವ ಪಾಕಿಸ್ತಾನದ ಕ್ರಮದ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಅವರು, ‘ಭಾರತದ ಅವಿಭಾಜ್ಯ ಅಂಗವಾಗಿರುವ ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನದಲ್ಲಿ  ಚುನಾವಣೆ ನಡೆಸುವ ಮೂಲಕ ಅಲ್ಲಿ ತನ್ನ ಹಕ್ಕು ಸ್ಥಾಪಿಸಲು ಪಾಕಿಸ್ತಾನ ಯತ್ನಿಸುತ್ತಿದೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಕಾಶ್ಮೀರದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿವಾದವಾಗಿದೆ. ಈ ಸಂಬಂಧ ಅಂತಿಮವಾದ ಮುಕ್ತ ಹಾಗೂ ನಿಷ್ಪಕ್ಷಪಾತವಾದ ಕಾನೂನು ಜಾರಿಗೆ ಬರಬೇಕಿದೆ. ಹಾಗಿರುವಾಗ ಅಲ್ಲಿ ಯಾವುದೇ ಭೌತಿಕ ಬದಲಾವಣೆ ಮಾಡಲು ಅವಕಾಶವಿಲ್ಲ ಎಂಬುದು ತಿಳಿದಿದ್ದರೂ ಭಾರತವು ವಿಶ್ವಸಂಸ್ಥೆಯ ನಿರ್ಣಯವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿಕೆಯಲ್ಲಿ ದೂರಿದ್ದಾರೆ.

ಜಮ್ಮು -ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಭಾರತದ  ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪಾಕ್‌, ಜಮ್ಮು ಮತ್ತು ಕಾಶ್ಮೀರ ತಮಗೆ ಸೇರಿದ್ದು. ಅಲ್ಲಿ ಕಾನೂನುಬಾಹಿರವಾಗಿ ಮಧ್ಯಪ್ರವೇಶಿಸುತ್ತಿರುವುದು ಭಾರತವೇ ಹೊರತು ತಾವಲ್ಲ. ಅಲ್ಲಿ ತಮ್ಮ ಹಕ್ಕು ಸ್ಥಾಪಿಸುವ ಮತ್ತು ಬಹುಸಂಖ್ಯಾತ ಮುಸಲ್ಮಾನರ ಧ್ವನಿ ಅಡಗಿಸುವ ಪ್ರಯತ್ನವಾಗಿ ವಿವಾದಿತ ಪ್ರದೇಶದಲ್ಲಿ ಭಾರತ ಏಳು ಲಕ್ಷ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ಹೇಳಿದೆ.

‘ಕಾಶ್ಮೀರ ಕುರಿತ ಭಾರತದ ನಿಲುವು ವಿಶ್ವಸಂಸ್ಥೆಯ ನಿರ್ಣಯಕ್ಕೆ ತೋರುವ ಅಗೌರವವಾಗಿದೆ. ಅಲ್ಲದೆ ಬಲವಂತವಾಗಿ ಅಲ್ಲಿ ಹಕ್ಕು ಸ್ಥಾಪಿಸುತ್ತಿರುವುದು ಜಮ್ಮು ಮತ್ತು ಕಾಶ್ಮೀರದ ಜನರ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕಿನ ಸ್ಪಷ್ಟ ಉಲ್ಲಂಘನೆ’ ಎಂದು ಪಾಕ್‌ ತನ್ನ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.