ADVERTISEMENT

ಇಮೇಲ್‌ ಮೂಲಕ ಸ್ಪ್ಯಾನರ್‌ ರವಾನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 10:58 IST
Last Updated 22 ಡಿಸೆಂಬರ್ 2014, 10:58 IST

ವಾಷಿಂಗ್ಟನ್‌ (ಪಿಟಿಐ): ನಾಸಾ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಇಮೇಲ್‌ ಮೂಲಕ ಸಾಕೆಟ್‌ ರಿಂಚ್‌ (ಸ್ಪ್ಯಾನರ್‌) ರವಾನಿಸಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ.

‘ಮೇಡ್‌ ಇನ್‌ ಸ್ಪೇಸ್‌’ ಕಂಪೆನಿಯ ಸಹಯೋಗದೊಂದಿಗೆ ನಾಸಾ ಇದೇ ಸೆಪ್ಟೆಂಬರ್‌ನಲ್ಲಿ ಪ್ರಿಂಟರ್‌ ಅನ್ನು ಐಎಸ್‌ಎಸ್‌ಗೆ ಕಳಿಸಿತ್ತು. ಐಎಸ್‌ಎಸ್‌ನಲ್ಲಿರುವ ‘ಮೇಡ್‌ ಇನ್‌ ಸ್ಪೇಸ್‌’ನ ಗಗನಯಾತ್ರಿ ಬೆರ್ರಿ ವಿಲ್ಮೋರ್‌ ಸ್ಪ್ಯಾನರ್‌ ಬೇಕೆಂದು ಸಂದೇಶ ಕಳಿಸಿದ್ದರು.

ಐಎಸ್‌ಎಸ್‌ನಲ್ಲಿರುವ ಪ್ರಿಂಟರ್‌ಗೆ ನಾಸಾ ಇಮೇಲ್‌ ಮೂಲಕ ಸಂದೇಶ ರವಾನಿಸಿದೆ. ಸಂದೇಶ ಸ್ವೀಕರಿಸಿದ ಪ್ರಿಂಟರ್‌ ‘3ಡಿ’ ಪ್ರಿಂಟ್‌ ತಂತ್ರಜ್ಞಾನದ ಮೂಲಕ ಸ್ಪ್ಯಾನರ್‌ ತಯಾರಿಸುವಲ್ಲಿ ಯಶಸ್ವಿಯಾಗಿದೆ ಎಂದು ‘ಟೆಕ್‌ ಟೈಮ್ಸ್‌’ ವರದಿ ಮಾಡಿದೆ.

ADVERTISEMENT

‘ಈ ಮೊದಲೆ ವಿನ್ಯಾಸಗೊಳಿಸಿದ ಸ್ಪ್ಯಾನರ್‌ನ ಡಿಜಿಟಲ್‌ ಫೈಲ್‌ಗಳನ್ನು ಇಮೇಲ್‌ ಮೂಲಕ ಐಎಸ್‌ಎಸ್‌ಗೆ ಕಳಿಸಲಾಯಿತು. ಬಾಹ್ಯಾಕಾಶಕ್ಕೆ ಹಾರ್ಡ್‌ವೇರ್‌ ಇಮೇಲ್‌ ಮಾಡಿದ್ದು ಇದೇ ಮೊದಲು’ ಎಂದು ‘ಮೇಡ್‌ ಇನ್‌ ಸ್ಪೇಸ್‌’ ಕಂಪೆನಿಯ ಸಂಸ್ಥಾಪಕ ಮಿಕ್‌ ಚೆನ್‌ ತಿಳಿಸಿದ್ದಾರೆ.

ರಾಕೆಟ್‌ ಮೂಲಕ ಕಳಿಸಬೇಕಾಗಿದ್ದ ಸ್ಪ್ಯಾನರ್‌ ಅನ್ನು ಬೆಳಕಿನ ವೇಗದಲ್ಲಿ ಡಿಜಿಟಲ್‌ ಡೇಟಾಗಳ ಮೂಲಕ ಕಳಿಸುವುದು ಕಷ್ಟಸಾಧ್ಯ. ರಾಕೆಟ್‌ ಮೂಲಕ ಸ್ಪ್ಯಾನರ್‌ ಕಳಿಸಲು ತಿಂಗಳು ಅಥವಾ ವರ್ಷದವರೆಗೂ ಕಾಯಬೇಕಿತ್ತು. ಆದರೆ, ಪ್ರಿಂಟರ್‌ಗೆ ಡಿಜಿಟಲ್‌ ಡೇಟಾ ಕಳಿಸಿ ಬಾಹ್ಯಾಕಾಶದಲ್ಲಿ ಭೌತಿಕ ವಸ್ತು ರೂಪಿಸಿರುವ ಸಾಧನೆ ಇದಾಗಿದೆ.

ಐಎಸ್‌ಎಸ್‌ನಲ್ಲಿರುವ ಪ್ರಿಂಟರ್‌ ನವೆಂಬರ್‌ ತಿಂಗಳಲ್ಲಿ ‘3ಡಿ’ ಪ್ರಿಂಟ್‌ ತಂತ್ರಜ್ಞಾನದ ಮೂಲಕ ತನಗೆ ಅಗತ್ಯವಿದ್ದ ವಸ್ತುವೊಂದನ್ನು ತಯಾರಿಸಿಕೊಂಡಿತ್ತು. ಅದನ್ನು 2015ರಲ್ಲಿ ಭೂಮಿಗೆ ತರಿಸಿಕೊಂಡು ಭೂಮಿ ಹಾಗೂ ನಿರ್ವಾತದ ಸನ್ನಿವೇಶಗಳಲ್ಲಿ ‘3ಡಿ’ ಪ್ರಿಂಟ್‌ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು ಎಂದು ನಾಸಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.