ADVERTISEMENT

‘ಉತ್ತರ ಕೊರಿಯಾದಿಂದ ಮತ್ತೆ ಖಂಡಾಂತರ ಕ್ಷಿಪಣಿ ಪರೀಕ್ಷೆ’

ಏಜೆನ್ಸೀಸ್
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಸೋಲ್: ವಿಶ್ವಸಂಸ್ಥೆಯಿಂದ ನಿಷೇಧ ಎಚ್ಚರಿಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾದ ಒಂದು ವಾರದಲ್ಲೇ ಉತ್ತರ ಕೊರಿಯಾ ಮತ್ತೊಂದು ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
 
‘ದಕ್ಷಿಣ ಪ್ಯೋಂಗನ್‌ ಪ್ರಾಂತ್ಯದ ಪುಕ್‌ಚಂಗ್‌ನಿಂದ ಉಡಾವಣೆಯಾದ ಕ್ಷಿಪಣಿ ಯಾವ ವಿಧವಾದದ್ದು ಎಂದು ಗೊತ್ತಾಗಿಲ್ಲ. ಆದರೆ ಅದು ಸುಮಾರು 500 ಕಿ.ಮೀ ವ್ಯಾಪ್ತಿಯನ್ನು ಹೊಂದಿತ್ತು’ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
 
‘ಉತ್ತರ ಕೊರಿಯಾ ಸೇನೆಯ ಪ್ರಚೋದನಕಾರಿ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಮ್ಮ ಸೇನೆಯು ಸನ್ನದ್ಧ ಸ್ಥಿತಿಯಲ್ಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
 
ಮೇ 14ರಂದು ಹ್ವಾಸಂಗ್‌–12 ಕ್ಷಿಪಣಿಯನ್ನು ಉತ್ತರ ಕೊರಿಯಾ ಪರೀಕ್ಷೆಗೊಳಪಡಿಸಿತ್ತು. ಅತಿಹೆಚ್ಚು ವ್ಯಾಪ್ತಿಯ ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಉತ್ತರ ಕೊರಿಯಾ ಸರ್ಕಾರದ ಮೂಲಗಳು ತಿಳಿಸಿದ್ದವು.
 
ಉತ್ತರ ಕೊರಿಯಾ ಬಳಿಯಿರುವ ಕ್ಷಿಪಣಿಗಳು ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಭೂ ಪ್ರದೇಶಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ. ಅಮೆರಿಕ ಭೂ ಪ್ರದೇಶವನ್ನು ತಲುಪಬಲ್ಲ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಉತ್ತರ ಕೊರಿಯಾ ತೊಡಗಿದ್ದು, ಹ್ವಾಸಂಗ್‌–12  ಕ್ಷಿಪಣಿಯು ಅಮೆರಿಕದ ಅಧಿಪತ್ಯಕ್ಕೆ ಒಳಪಡುವ ಪೆಸಿಫಿಕ್ ದ್ವೀಪಸಮೂಹದ ಗುವಾಮ್‌ ದ್ವೀಪವನ್ನು ತಲುಪುವ ವ್ಯಾಪ್ತಿ ಹೊಂದಿದೆ ಎನ್ನಲಾಗಿದೆ.
 
ಕಳೆದ ಮಂಗಳವಾರ ಸಭೆ ಸೇರಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು, ಉತ್ತರ ಕೊರಿಯಾ ಮೇಲೆ ಇನ್ನಷ್ಟು ನಿಷೇಧ ಹೇರುವ ಬಗ್ಗೆ ಚರ್ಚೆ ನಡೆಸಿತ್ತು.
ಅಮೆರಿಕದ ದಾಳಿ ಭೀತಿ ಎದುರಿಸಲು ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವುದಾಗಿ ಉತ್ತರ ಕೊರಿಯಾ ಸ್ಪಷ್ಟನೆ ನೀಡಿದೆ.
 
ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿ ನಡೆಸುವುದಾಗಿ ಉತ್ತರ ಕೊರಿಯಾದ ಮಿಂಜು ಜೋಸನ್ ಪತ್ರಿಕೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.