ADVERTISEMENT

ಎಂಟು ಶ್ರೀಮಂತರ ಬಳಿ ಜಗತ್ತಿನ ಅರ್ಧ ಸಂಪತ್ತು: ಆಕ್ಸ್‌ಫ್ಯಾಂ

ಏಜೆನ್ಸೀಸ್
Published 16 ಜನವರಿ 2017, 7:08 IST
Last Updated 16 ಜನವರಿ 2017, 7:08 IST
ಎಂಟು ಶ್ರೀಮಂತರ ಬಳಿ ಜಗತ್ತಿನ ಅರ್ಧ ಸಂಪತ್ತು: ಆಕ್ಸ್‌ಫ್ಯಾಂ
ಎಂಟು ಶ್ರೀಮಂತರ ಬಳಿ ಜಗತ್ತಿನ ಅರ್ಧ ಸಂಪತ್ತು: ಆಕ್ಸ್‌ಫ್ಯಾಂ   

ದಾವೋಸ್‌ : ಎಂಟು ವ್ಯಕ್ತಿಗಳ ಬಳಿ ಇರುವ ಸಂಪತ್ತು ಜಗತ್ತಿನ ಅರ್ಧ ಜನಸಂಖ್ಯೆ ಹೊಂದಿರುವ ಸಂಪತ್ತಿಗೆ ಸಮ!

ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) 47ನೇಯ ಐದು ದಿನಗಳ ಸಮಾವೇಶವು ಸೋಮವಾರದಿಂದ ಪ್ರಾರಂಭವಾಗಿದ್ದು, ದೊಡ್ಡ ಮಟ್ಟದಲ್ಲಿರುವ ಸಂಪತ್ತಿನ ಅಸಮತೋಲನವು ಸಮಾಜವನ್ನು ಪ್ರತ್ಯೇಕಗೊಳಿಸುವ ಅಪಾಯವಿದೆ ಎಂಬ ವರದಿಯನ್ನು ಆಕ್ಸ್‌ಫ್ಯಾಂ ಡಬ್ಲ್ಯುಇಎಫ್‌ ಮುಂದಿಟ್ಟಿದೆ.

ಅತಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಬಹಳ ದೊಡ್ಡ ಮಟ್ಟದಲ್ಲಿದ್ದು ಅಸಮಾನತೆಯು ಜನರನ್ನು ಕೆರಳಿಸಬಹುದಾಗಿದೆ. ಇದು ಬ್ರಿಟನ್‌ ಮತ್ತು ಅಮೆರಿಕದಲ್ಲಿ ನಡೆದಂತೆ ರಾಜಕೀಯ ಬದಲಾವಣೆ ಸೃಷ್ಟಿಸುತ್ತದೆ.

ADVERTISEMENT

ಹತ್ತರಲ್ಲಿ ಒಬ್ಬ ನಿತ್ಯ 2 ಡಾಲರ್‌ಗಿಂತಲೂ ಕಡಿಮೆ ಹಣದಲ್ಲಿ ಬದುಕುವಂತಾಗಿದೆ ಎಂದಿದೆ. ಈ ಹಿಂದಿನ ವರದಿಯಲ್ಲಿ 62 ಶ್ರೀಮಂತರು  ಜಗತ್ತಿನ ಅರ್ಧದಷ್ಟು ಜನಸಂಖ್ಯೆಯ ಸಂಪತ್ತು ಹೊಂದಿದ್ದಾರೆ ಎನ್ನಲಾಗಿತ್ತು. ಇದೀಗ ಆಕ್ಸ್‌ಫ್ಯಾಂ ಪರಿಷ್ಕರಿಸಿದ ವರದಿ ಪ್ರಸ್ತುತ ಪಡಿಸಿದೆ.

2016ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿರುವ ಫೋರ್ಬ್ಸ್‌ ಶ್ರೀಮಂತರ ಪಟ್ಟಿಯನ್ನು ಬಡತನ ನಿರ್ಮೂಲನಾ ಸಂಸ್ಥೆ ಆಕ್ಸ್‌ಫ್ಯಾಂ ಬಳಸಿಕೊಂಡಿದೆ. ಮೈಕ್ರೋಸಾಫ್ಟ್‌ನ  ಬಿಲ್‌ ಗೇಟ್ಸ್‌ ₹5.11 ಲಕ್ಷ ಕೋಟಿ(75 ಬಿಲಿಯನ್‌ ಡಾಲರ್‌) ಸಂಪತ್ತಿನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಅತಿ ಶ್ರೀಮಂತರು: ಫ್ಯಾಷನ್‌ ಹೌಸ್‌ ಇಂಡಿಟೆಕ್ಸ್‌ನ ಅಮಾನ್ಷಿಯೋ ಒರ್ಟೆಗಾ, ಹಣಕಾಸು ಪರಿಣತ ವಾರೆನ್‌ ಬಫೆಟ್‌, ಮೆಕ್ಸಿಕೋದ ಉದ್ಯಮಿ ಕಾರ್ಲೋಸ್‌ ಸ್ಲಿಮ್‌ ಹೆಲು, ಅಮೆಜಾನ್‌ ಮುಖ್ಯಸ್ಥ ಜೆಫ್‌ ಬೆಜೋಜ್‌, ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜ್ಯೂಕರ್‌ಬರ್ಗ್‌, ಅರಾಕಲ್‌ನ ಲ್ಯಾರಿ ಎಲ್ಲಿಸನ್‌ ಹಾಗೂ ನ್ಯೂಯಾರ್ಕ್‌ನ ಮಾಜಿ ಮೇಯರ್‌ ಬ್ಲೂಂಬರ್ಗ್‌ ನಂತರದ ಸ್ಥಾನದಲ್ಲಿದ್ದಾರೆ.

3000 ಪ್ರತಿನಿಧಿಗಳು ಭಾಗಿ: 100ಕ್ಕೂ ಹೆಚ್ಚು ರಾಷ್ಟ್ರಗಳ 3000ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ವಿವಿಧ ಉದ್ಯಮಗಳ 1200 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ 50 ಸರ್ಕಾರಿ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ.

ಭಾರತದ ನಿಯೋಗ: ಕೇಂದ್ರ ಸಚಿವರಾದ  ನಿತಿನ್‌ ಗಡ್ಕರಿ, ನಿರ್ಮಲಾ ಸೀತಾರಾಮನ್‌, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ, ಕೈಗಾರಿಕಾ ನೀತಿ ಮತ್ತು  ಉತ್ತೇಜನಾ ಸಚಿವಾಲಯದ ಕಾರ್ಯದರ್ಶಿ ರಮೇಶ್‌ ಅಭಿಷೇಕ್‌, ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನೇಮಕಗೊಂಡಿರುವ ಎನ್‌. ಚಂದ್ರಶೇಖರನ್‌  ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ಅವರು ಭಾರತದ ನಿಯೋಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.